ದೇಗುಲ ಸ್ವಾಯತ್ತೆಗೆ ಭಂಗ ತರುವ ಕಾಯ್ದೆ ಬೇಡ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

KannadaprabhaNewsNetwork |  
Published : Feb 06, 2025, 11:46 PM IST
ಪೊಟೋ೬ಎಸ್.ಆರ್.ಎಸ್೧ (  ದೇವಾಲಯ ಸಂವರ್ಧನಾ ಸಮಿತಿ-ಕರ್ನಾಟಕ ಶಿರಸಿ ಜಿಲ್ಲೆ ವತಿಯಿಂದ ದೇವಾಲಯ ಆಡಳಿತ ಮಂಡಳಿ ಸದಸ್ಯರ ಚಿಂತನಾ ಸಭೆಯಲ್ಲಿ ಸಾನ್ನಿಧ್ಯ ವಹಿಸಿ, ಶ್ರೀಗಳು ಆಶೀರ್ವಚನ ನೀಡಿದರು.) | Kannada Prabha

ಸಾರಾಂಶ

ದೇವಸ್ಥಾನಗಳು ಸಮಾಜದ ಹೃದಯ. ಬೇಸರ, ಒತ್ತಡ ಇತ್ಯಾದಿಗಳಿಂದ ಭಾರವಾದ ಮನಸ್ಸಿನಿಗೆ ಶಾಂತಿ ಪಡೆಯಲು ದೇವಸ್ಥಾನಕ್ಕೆ ಬರುತ್ತಾರೆ. ಅವರ ಭಾರವನ್ನು ನಿವಾರಿಸಿ, ಶುದ್ಧೀಕರಿಸಿ, ಪುನಃ ಸಮಾಜಕ್ಕೆ ಕಳುಹಿಸುತ್ತದೆ.

ಶಿರಸಿ: ದೇವಸ್ಥಾನಗಳ ಸ್ವಾಯತ್ತತೆಗೆ ಭಂಗ ತರುವ ರೀತಿಯಲ್ಲಿ ಕಾನೂನು ಇರಬಾರದು. ಇದರ ಕುರಿತು ದೇಶ ಮಟ್ಟದಲ್ಲಿ ಹೋರಾಟ ಮತ್ತು ಚಿಂತನೆ ನಡೆಯುವುದು ಅಗತ್ಯವಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಗುರುವಾರ ನಗರದ ರಾಘವೇಂದ್ರ ಮಠದ ಸಭಾಂಗಣದಲ್ಲಿ ದೇವಾಲಯ ಸಂವರ್ಧನಾ ಸಮಿತಿ- ಕರ್ನಾಟಕ ಶಿರಸಿ ಜಿಲ್ಲೆ ವತಿಯಿಂದ ದೇವಾಲಯ ಆಡಳಿತ ಮಂಡಳಿ ಸದಸ್ಯರ ಚಿಂತನಾ ಸಭೆಯಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ದೇವಸ್ಥಾನಗಳು ಸಮಾಜದ ಹೃದಯ. ಬೇಸರ, ಒತ್ತಡ ಇತ್ಯಾದಿಗಳಿಂದ ಭಾರವಾದ ಮನಸ್ಸಿನಿಗೆ ಶಾಂತಿ ಪಡೆಯಲು ದೇವಸ್ಥಾನಕ್ಕೆ ಬರುತ್ತಾರೆ. ಅವರ ಭಾರವನ್ನು ನಿವಾರಿಸಿ, ಶುದ್ಧೀಕರಿಸಿ, ಪುನಃ ಸಮಾಜಕ್ಕೆ ಕಳುಹಿಸುತ್ತದೆ. ಭಗವದ್ಗೀತೆ ಧರ್ಮ ಗ್ರಂಥದ ಜತೆ ಜೀವನ ಗ್ರಂಥವಾಗಿದ್ದು, ಪ್ರತಿಯೊಂದು ದೇವಸ್ಥಾನದಲ್ಲಿ ಭಗವದ್ಗೀತೆ ಪಠಣ ಆಗಬೇಕು. ಗೀತಾ ಜಯಂತಿ ಆಚರಣೆ ದೇವಸ್ಥಾನದಲ್ಲಿ ಆಗಬೇಕು. ಸ್ವಚ್ಛತೆ ಹಾಗೂ ಶಾಂತತೆ ದೇವಸ್ಥಾನದ ಪ್ರಮುಖ ಶಕ್ತಿಯಾಗಿದೆ. ವರ್ಷದಲ್ಲಿ ಒಂದೆರಡು ದಿನವಾದರೂ ಸಮಾಜಕ್ಕೆ ಹಿತವನ್ನುಟ್ಟು ಮಾಡುವ ಉತ್ಸವ ನಡೆಸಬೇಕು ಎಂದರು.

ಯೋಗ ಹಾಗೂ ಧ್ಯಾನ ದಿನಾಚರಣೆ ದೇವಸ್ಥಾನದಲ್ಲಿ ಮಾಡಬಹುದು. ಭಗವದ್ಗೀತೆ ಪಠಣವಾದರೆ ಧಾರ್ಮಿಕ ಜಾಗೃತಿ, ಮಾನಸಿಕ ಅಶಾಂತಿಗೆ ಪರಿಹಾರ ಸಾಧ್ಯವಾಗುತ್ತದೆ. ಸತ್ ಚಿಂತನೆ ಆಗಬೇಕು. ಶ್ರದ್ಧೆ ಹಾಗೂ ಚಿಂತನೆ ಪರಿಪೂರ್ಣವಾಗಿ ಬೆಳೆದರೆ ಪೂರ್ಣವಾಗುತ್ತದೆ ಎಂದ ಶ್ರೀಗಳು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಮಾತನಾಡಿ, ಮನೆ, ಮಠ, ಮಂದಿರ ಈ ವ್ಯವಸ್ಥೆಯಿಂದ ನಮ್ಮ ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಯೋಗ್ಯ ಸಂಸ್ಕಾರ ಸಿಗುತ್ತದೆ. ತಾಯಿ ಮೊದಲ ಗುರು, ಮಠ ಹಾಗೂ ಮಂದಿರ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತಿತ್ತು. ಮಂದಿರಕ್ಕೆ ಬರುವ ಭಕ್ತರಿಗೆ ತೈಲ ಎರೆಯುವ ತಾಣವಾಗಬೇಕು. ಬರುವ ಭಕ್ತನಿಗೆ ಭಕ್ತಿ-ಭಾವ ನಿರ್ಮಾಣದ ಪರಿಸರವಿರಬೇಕು. ಬಹಳ ಹಿಂದಿನಿಂದಲೂ ನಮ್ಮ ಸಮಾಜ ಜೀವನ ದೇವಸ್ಥಾನ ಕೇಂದ್ರೀಕೃತವಾಗಿತ್ತು. ಬಂಧುತ್ವದ ಭಾವ ದೇವಸ್ಥಾನದಲ್ಲಿ ನಿರ್ಮಾಣವಾಗುತ್ತಿತ್ತು ಎಂದರು.

ದೇವಾಲಯದ ಸಂವರ್ಧನಾ ಸಮಿತಿ ಸಂಯೋಜಕ ಮನೋಹರ ಮಠದ ಮಾತನಾಡಿ, ದೇವಾಲಯ ಸಂವರ್ಧನಾ ಸಮಿತಿ ರಾಜಕೀಯ ಚಟುವಟಿಕೆ ಪ್ರೇರಿತಕ್ಕಲ್ಲ. ಹೋರಾಟ, ಧರಣಿ, ಸತ್ಯಾಗ್ರಹಗಳಿಲ್ಲ. ದೇವಸ್ಥಾನದಲ್ಲಿ ಚಟುವಟಿಕೆ ನಡೆದು ಸಬಲವಾಗಬೇಕು. ದೇವಸ್ಥಾನಕ್ಕೆ ಜನರು ಬರುವ ಸಂಖ್ಯೆ ಹೆಚ್ಚಾಗಬೇಕು. ದೇವಸ್ಥಾನ ಅಭಿವೃದ್ಧಿಯಾಗಬೇಕು. ದೇವಸ್ಥಾನಗಳು ಸಂಸ್ಕಾರ ನೀಡುವ ಕೇಂದ್ರವಾಗಬೇಕು ಎಂದರು.

ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ದಂಪತಿ ಶ್ರೀಗಳಿಗೆ ಫಲ ಸಮರ್ಪಿಸಿದರು. ಆದಿತ್ಯ ಹೆಗಡೆ ಶಂಕನಾದ ಮೊಳಗಿಸಿದರು. ಶ್ರೀಧರ ಭಟ್ಟ ಸ್ವಾಗತಿಸಿ, ಪರಿಚಯಿಸಿದರು. ಸಂಘ ಚಾಲಕ ರಾಮಚಂದ್ರ ಕಾಮತ್ ಜವಾಬ್ದಾರಿ ಘೋಷಿಸಿದರು. ಶ್ರೀಧರ ಹಿರೇಹದ್ದ ಕಾರ್ಯಕ್ರಮ ನಿರೂಪಿಸಿ, ಸೂಚನೆಗಳನ್ನು ನೀಡಿದರು. ಶ್ರೀಕಾಂತ ಅಗಸಾಲ ವಂದಿಸಿದರು. ಜನಾರ್ದನಾಚಾರ್ಯ ಶಾಂತಿಮಂತ್ರ ಪಠಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ