ಹುಬ್ಬಳ್ಳಿ: ಎಂಇಎಸ್ ಸಂಘಟನೆ ನಿಷೇಧಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾ. 22ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಹುಬ್ಬಳ್ಳಿ-ಧಾರವಾಡ ಬಹುತೇಕ ಸಂಘಟನೆಗಳು ಬರೀ ನೈತಿಕ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿವೆ.
ಕೆಲವು ಸಂಘಟನೆಗಳು ಮಾತ್ರ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸುವುದಾಗಿ ತಿಳಿಸಿವೆ. ಹೀಗಾಗಿ, ಬಂದ್ ಇಲ್ಲ. ಬರೀ ಸಾಂಕೇತಿಕ ಪ್ರತಿಭಟನೆ ನಡೆಯಲಿದೆ.ಇದರಿಂದಾಗಿ ಬಂದ್‌ನ ಬಿಸಿ ಮಹಾನಗರಕ್ಕೆ ತಟ್ಟುವುದಿಲ್ಲ. ಜನಜೀವನ ಎಂದಿನಂತೆ ಇರಲಿದೆ. ಈ ನಡುವೆ ಬಂದ್‌ನ ಪರಿಸ್ಥಿತಿ ನೋಡಿಕೊಂಡು ಬಸ್ ಕಾರ್ಯಾಚರಣೆ ಸ್ಥಗಿತಗೊಳಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ.
ಬೆಂಗಳೂರಲ್ಲಿ ಕುಳಿತು ಏಕಾಏಕಿ ಬಂದ್‌ಗೆ ಕರೆ ಕೊಟ್ಟರೆ ಹೇಗೆ? ಇಲ್ಲಿನ ಸಂಘಟನೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಲ್ಲವೇ? ಯಾವ ಸಂಘಟನೆಗಳ ಅಭಿಪ್ರಾಯವನ್ನೂ ಪಡೆದಿಲ್ಲ. ಹಾಗಾಗಿ ಬಂದ್‌ಗೆ ಬೆಂಬಲಿಸುವುದಿಲ್ಲ ಎಂದು ಉತ್ತರ ಕರ್ನಾಟಕ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಸ್ಪಷ್ಟಪಡಿಸಿದ್ದಾರೆ.ನಮ್ಮ ಕರ್ನಾಟಕ ಸೇನೆ ಉ.ಕ. ಘಟಕ ಅಧ್ಯಕ್ಷ ಅಮೃತ ಇಜಾರಿ ಪ್ರತಿಕ್ರಿಯಿಸಿ, ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಮಾತ್ರ ಇದ್ದು, ರಸ್ತೆಗಿಳಿದು ಹೋರಾಟ ನಡೆಸುವುದಿಲ್ಲ. ಬಂದ್ ಕರೆಗೂ ಮುನ್ನ ಈ ಭಾಗದ ಸಂಘಟನೆಗಳ ಜತೆ ಆರೋಗ್ಯಕರ ಚರ್ಚೆ ನಡೆಸಿ ಜನಾಭಿಪ್ರಾಯ ಪಡೆಯಬೇಕಿತ್ತು. ಜತೆಗೆ ಇಲ್ಲಿ ಬಂದ್ ನಡೆಸುವ ಬದಲು ಘಟನೆ ನಡೆದ ಸ್ಥಳದಲ್ಲೇ ಹೋಗಿ ಪ್ರತಿಭಟನೆ ನಡೆಸಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು ಎಂದು ಅಭಿಪ್ರಾಯ ತಿಳಿಸಿದ್ದಾರೆ.
ವಾಟಾಳ ನಾಗರಾಜ ಅವರು ಬಂದ್‌ಗೆ ಕರೆ ಕೊಟ್ಟ ಮೇಲೆ ಯಾವ ಸಂಘಟನೆಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಲ್ಲಿ ಕುಳಿತು ಬಂದ್ ಕರೆ ಕೊಡುವುದೂ ಅಲ್ಲ. ಎಲ್ಲೆಡೆ ಪ್ರವಾಸ ನಡೆಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಅಂದಾಗ ಎಲ್ಲರೂ ಬೆಂಬಲಿಸಬಹುದು. ಅದು ಬಿಟ್ಟು ಕರೆ ಕೊಟ್ಟು ಸುಮ್ಮನೆ ಕುಳಿತರೆ ಹೇಗೆ? ಎಂದು ದಲಿತ ಪರ ಸಂಘಟನೆಗಳ ಮುಖಂಡ ಗುರುನಾಥ ಉಳ್ಳಿಕಾಶಿ ತಿಳಿಸಿದ್ದಾರೆ.ಸಾಂಕೇತಿಕ ಪ್ರತಿಭಟನೆ
ಹುಬ್ಬಳ್ಳಿಯಲ್ಲಿ ವಿಜಯ ಗುಂಟ್ರಾಳ, ಸಂಜೀವ ಧುಮಕನಾಳ ನೇತೃತ್ವದ ಸಮಗ್ರ ಕನ್ನಡ ಪರ ಸಂಘಟನೆಗಳ ಒಕ್ಕೂಟ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲು ನಿರ್ಧಾರ ಕೈಗೊಂಡಿದೆ.ಈ ನಡುವೆ ಬಂದ್ ಸ್ವರೂಪ ನೋಡಿಕೊಂಡು ಬಸ್‌ಗಳ ಕಾರ್ಯಾಚರಣೆ ನಡೆಸಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ. ಮುಂಜಾಗ್ರತಾ ಕ್ರಮವಾಗಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದ್ದಾರೆ.