ಕನ್ನಡಪ್ರಭ ವಾರ್ತೆ, ತುಮಕೂರುನಾಡು, ನುಡಿ, ಗಡಿ ನೀರಾವರಿ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಕರೆ ನೀಡಿದ್ದ ಈ ತಿಂಗಳ 13 ರ ಕರ್ನಾಟಕ ಬಂದ್ ಅನ್ನು ಹಿಂಪಡೆಯಲಾಗಿದೆ. ಆದರೆ, ಬೇಡಿಕೆಗಳಿಗೆ ಒತ್ತಾಯಿಸಿ ಅಂದು ತುಮಕೂರಿನಲ್ಲಿ ಹೋರಾಟ ಮುಂದುವರೆಯುತ್ತದೆ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟ ತಿಳಿಸಿದೆ. ಬಂದ್ ಹಿನ್ನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ನಗರದ ಕನ್ನಡ ಭವನದಲ್ಲಿ ಸಭೆ ಸೇರಿ 13 ರ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್ ಮಾತನಾಡಿ, ಇತ್ತೀಚೆಗೆ ರಾಜ್ಯದಲ್ಲಿ ಮಳೆ ಬೀಳುತ್ತಿದೆ, ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ತಮಿಳುನಾಡಿಗೆ ಹೋಗಬೇಕಾದ ನೀರು ಹರಿದುಹೋಗಿದೆ. ಪರಿಸ್ಥಿತಿ ಬದಲಾಗಿದೆ. ಬಂದ್ ಆಚರಣೆಯಿಂದ ಸಾರ್ವಜನಿಕರಿಗೆ, ವ್ಯಾಪಾರ-ವಹಿವಾಟಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಬಂದ್ ಆಚರಣೆಯನ್ನು ಹಿಂಪಡೆಯಲಾಗಿದೆ. ಆದರೆಮೂಲ ಬೇಡಿಕೆಗಳ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.13 ರಂದು ಬೆಳಿಗ್ಗೆ 10.30ಕ್ಕೆ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಒತ್ತಾಯಿಸಿರುವ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗುವುದುಎಂದರು.ಮೇಕೆದಾಟು ಯೋಜನೆ ಅನುಷ್ಠಾನ ಆಗಬೇಕು, ಕನ್ನಡ ರಾಜ್ಯೋತ್ಸವದಂದು ಕಪ್ಪು ಬಾವುಟ ಪ್ರದರ್ಶಿಸಿ ಕನ್ನಡಿಗರಿಗೆ ಅವಮಾನ ಮಾಡುವ ಬೆಳಗಾವಿಯ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಸರ್ಕಾರದ ಆದೇಶದಂತೆ ಕೈಗಾರಿಕೆಗಳಲ್ಲಿ ಶೇಕಡ 80 ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಬೇಕು.ನಾಮಫಲಕಗಳಲ್ಲಿ ಶೇಡಕ 60 ರಷ್ಟು ಕನ್ನಡ ಅಕ್ಷರಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚು ಅನುದಾನ ನೀಡಬೇಕು. ಕನ್ನಡ ಶಾಲೆ ಮುಚ್ಚಕೂಡದು. ಬಿಡದಿ ಟೌನ್‌ಶಿಪ್ ರದ್ದು ಮಾಡಬೇಕು. ಅಲ್ಲಿನ ರೈತರ ಮೇಲಿನ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಡಾ.ಧನಿಯಾಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ಮಾತನಾಡಿ, ತಮಿಳುನಾಡಿಗೆ ನೀರು ಹರಿಸುವ ಕಾವೇರಿ ತೀರ್ಪು ತಿರಸ್ಕರಿಸಬೇಕು. ಕನ್ನಡ ಶಾಲೆಗಳನ್ನು ಅಭಿವೃದ್ಧಿಗೊಳಿಸಬೇಕು. ಸರ್ಕಾರಿ ನೌಕರರು, ರಾಜಕೀಯ ಮುಖಂಡರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಮಾದರಿಯಾಗಬೇಕು ಎಂದು ಹೇಳಿದರು.ರೈತ ಸಂಘದ ಮುಖಂಡ ಬಸವರಾಜು ಮಾತನಾಡಿ, ಕನ್ನಡಿಗರ ಉದ್ಯೋಗಕ್ಕೆ ಮನ್ನಣೆ ನೀಡಲು ಸರ್ಕಾರ ಬದ್ಧವಾಗಿರಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಕಡೆಗಣಿಸದೆ ಆದ್ಯತೆ ಮೇಲೆ ಅಭಿವೃದ್ಧಿ ಮಾಡಿ ಪೋಷಕ ಸ್ನೇಹಿಗೊಳಿಸಬೇಕು.ನೆನೆಗುದಿಗೆ ಬಿದ್ದರುವ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ಅಧ್ಯಕ್ಷ ಹೊಸಕೋಟೆ ನಟರಾಜ್ ಮಾತನಾಡಿ, ರೈಲ್ವೆಇಲಾಖೆಯಲ್ಲಿ ಉದ್ಯೋಗ ಪಡೆಯುವಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಲೇ ಇದೆ. ರೈಲ್ವೆಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿ ಕನ್ನಡಿಗರು ಉದ್ಯೋಗ ಪಡೆಯಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಕನ್ನಡ ಸೇನೆ ಗೌರವಾಧ್ಯಕ್ಷ ಆರ್.ಎ.ವೆಂಕಟಾಚಲ, ನಗರ ಅಧ್ಯಕ್ಷ ಜೆ.ವಿಠಲ್, ವಿವಿಧ ಸಂಘಟನೆಗಳ ಮುಖಂಡರಾದ ಶಬ್ಬೀರ್ ಅಹ್ಮದ್, ಮೀಸೆ ಸತೀಶ್, ನಟರಾಜಶೆಟ್ಟಿ, ದಿಬ್ಬೂರುಗಿರೀಶ್, ಉಮೇಶ್‌ಕುಮಾರ್, ಪ್ರಸನ್ನಕುಮಾರ್, ರಫಿಅಹ್ಮದ್, ಬೆಸ್ಟೆಕ್ಸ್ರಾಮರಾಜ್, ಇಮ್ರಾನ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.