ವಿಶೇಷ ವರದಿ
ಧಾರವಾಡ: ಕರ್ನಾಟಕ ವಿವಿಧ ಜಿಲ್ಲೆಗಳಿಗೂ ಕಾಲಿಟ್ಟಿರುವ ಹಕ್ಕಿಜ್ವರ ಧಾರವಾಡಕ್ಕೂ ಒಕ್ಕರಿಸುವ ಭಯದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ. ಅದೃಷ್ಟವಶಾತ್ ಜಿಲ್ಲೆಯಲ್ಲಿ ಅಂತಹ ಯಾವುದೇ ಪ್ರಕಣಗಳಾಗಿಲ್ಲ ಎಂಬುದೇ ಸಮಾಧಾನದ ಸಂಗತಿ.ರಾಜ್ಯದ ರಾಯಚೂರು, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೋಳಿಗಳಲ್ಲಿ ಹಕ್ಕಿಜ್ವರ ಕಂಡು ಬಂದಿರುವುದು ಕುಕ್ಕುಟೋದ್ಯಮಿಗಳಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಹಕ್ಕಿಜ್ವರದ ಪ್ರಕರಣ ಪತ್ತೆಯಾಗಿಲ್ಲವಾದರೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಈಗಾಗಲೇ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದಾರೆ. ಕೋಳಿ ಸಾಕಾಣಿಕೆದಾರರಿಗೆ ಅರಿವು ಮೂಡಿಸುವ, ಒಂದೇ ಸಮಯದಲ್ಲಿ ಸಕಾರಣವಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಕೋಳಿಗಳು ಅಸು ನೀಗಿದರೆ ಏನು ಮಾಡಬೇಕು? ಕೋಳಿಗಳ ಆರೋಗ್ಯ ಕಾಪಾಡಲು ಹಾಗೂ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಏನೆಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ರೈತರು ಹಾಗೂ ಸಾಕಾಣಿಕೆದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಸಮಗ್ರ ರಕ್ತ ತಪಾಸಣೆಕೋಳಿಗಳು ಹಾಗೂ ಪಕ್ಷಿಗಳ ರಕ್ತ ತಪಾಸಣೆ ಮಾಡುವ ಕೆಲಸ ಸಾಮಾನ್ಯವಾಗಿರುತ್ತದೆ. ಆದರೆ, ಇದೀಗ ಆ ಸಂಖ್ಯೆ ಹೆಚ್ಚಿಸಿ ಸಮಗ್ರವಾಗಿ ತಪಾಸಣೆ ನಡೆಸಲು ಇಲಾಖೆ ಮುಂದಾಗಿದೆ. ಇದಕ್ಕಾಗಿ ಜಾಗೃತಿ ತಂಡ ಸಹ ರಚಿಸಲಾಗಿದೆ. ಈ ವಿಚಾರವಾಗಿ ಪಶು ಸಂಗೋಪನೆ, ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿ ಜತೆಗೆ ಸಹ ಸಭೆ ನಡೆಸಿ, ಸಮಗ್ರವಾಗಿ ಚರ್ಚಿಸಿ, ಯಾವುದೇ ಕಾರಣಕ್ಕೂ ಒಂದು ಪ್ರಕರಣ ದಾಖಲಾಗದಂತೆ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಬೇಯಿಸಿದ ಮಾಂಸ ಹಾಗೂ ಮೊಟ್ಟೆ ಸೇವನೆಯಿಂದ ಈ ಜ್ವರ ಬರುವುದಿಲ್ಲ. ಹಸಿ ಮಾಂಸ ಸಾಗಾಟ ಮಾಡುವವರು ಹಾಗೂ ಮಾರಾಟ ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕು. ಕೋಳಿ ಸಾಕಣೆ ಕೇಂದ್ರ ಹಾಗೂ ಮಾಂಸ ಸಂಸ್ಕರಣೆ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಹಕ್ಕಿಜ್ವರ ಸೋಂಂಕು ತಗಲುವ ಸಾಧ್ಯತೆ ಹೆಚ್ಚು. ಹೀಗಾಗಿ, ಅಂತಹವರು ತಮ್ಮ ಸ್ವಚ್ಛತೆಗೆ ಆದ್ಯತೆ ನೀಡಿ ಜಾಗೃತಿ ವಹಿಸುವುದು ಸೂಕ್ತ.ಹಕ್ಕಿಗಳು ಅಥವಾ ಕೋಳಿಗಳು ಸಂಶಯಾಸ್ಪದವಾಗಿ ಸಾವಿಗೀಡಾಗುವುದು ಕಂಡು ಬಂದರೆ ತಕ್ಷಣವೇ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಬೇಕು. ನಂತರದಲ್ಲಿ ಕೋಳಿಗಳ ರಕ್ತ ತಪಾಸಣೆ ನಡೆಸಲಾಗುವುದು. ಒಂದು ವೇಳೆ ಹಕ್ಕಿಜ್ವರ ಲಕ್ಷಣ ಕಂಡು ಬಂದಲ್ಲಿ ಉಳಿದ ಕೋಳಿಗಳನ್ನು ಸಹ ನಾಶಪಡಿಸಲಾಗುತ್ತದೆ. ಇಂತಹ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶಕ್ಕೆ ಅಗತ್ಯವಾಗಿದೆ. ಹೀಗಾಗಿ, ತ್ವರಿತವಾಗಿ ಜಾಗೃತಿ ಕೆಲಸ ನಡೆಸಲಾಗುವುದು ಎನ್ನುತ್ತಾರೆ ಹಿರಿಯ ಪಶು ವೈದ್ಯಾಧಿಕಾರಿ ಡಾ. ರಮೇಶ ಹೆಬ್ಬಳ್ಳಿ.
ರೋಗದ ಲಕ್ಷಣಗಳುಬೇಸಿಗೆ ಕಾಲದಲ್ಲಿ ಮನುಷ್ಯನಲ್ಲಿ ನಿರ್ಜಲೀಕರಣ ಕಾಣುವುದು ಸಾಮಾನ್ಯ. ಇದರಿಂದ ಆರೋಗ್ಯದಲ್ಲಿ ಕೆಲ ಏರುಪೇರಾಗಲಿದೆ. ಇದೇ ಕಾರಣಕ್ಕೆ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ತೀವ್ರ ಜ್ವರ, ಭೇದಿ, ಹೊಟ್ಟೆ ನೋವು, ಮೂಗು, ಒಸಡಿನಲ್ಲಿ ರಕ್ತಸ್ರಾವ, ಚಳಿ, ತಲೆನೋವು, ವಿಪರೀತ ಮೈ-ಕೈ ನೋವು, ಕಣ್ಣು ಕೆಂಪಗಾಗುವುದು, ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಜನರು ನಿರ್ಲಕ್ಷ್ಯ ಮಾಡದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದರು ಅವರು.
ಜನರು ಬೇಸಿಗೆ ಸಮಯದಲ್ಲಿ ನೀರು ಹಾಗೂ ನೀರಿನ ಅಂಶ ಹೊಂದಿರುವ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ಕರಿದ ಪದಾರ್ಥ, ಮಾಂಸಾಹಾರ ಸೇವನೆಯಿಂದ ತುಸು ದೂರ ಇದ್ದರೆ ಒಳ್ಳೆಯದು. ಈ ಸಮಯದಲ್ಲಿ ಟೈಫೈಯ್ಡ್, ಮಲೇರಿಯಾ ಸೇರಿ ಇನ್ನೂ ಅನೇಕ ಅನೇಕ ರೋಗಗಳು ಹೆಚ್ಚು ಕಾಡಲಿವೆ. ಹೀಗಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಹೊರಗಿನ ಪದಾರ್ಥಗಳನ್ನು ಸೇವಿಸದೆ ಮನೆಯಲ್ಲೇ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದು, ಬಿಸಿಲಿನಲ್ಲಿ ಹೆಚ್ಚು ಓಡಾಡುವುದನ್ನು ಕಡಿಮೆ ಮಾಡಿದರೆ ಒಳಿತು. ಜತೆಗೆ ಹೆಚ್ಚಿನ ನೀರು ಹಾಗೂ ನೀರಿನಂಶದ ಆಹಾರ, ಹಣ್ಣುಗಳನ್ನು ತಿನ್ನಬೇಕೆಂದು ವೈದ್ಯರು ಸಹ ಎಚ್ಚರಿಕೆ ಕ್ರಮಗಳನ್ನು ಜನರಿಗೆ ತಿಳಿಸಿದ್ದಾರೆ. ಎಚ್ಚರಿಕೆ ಕ್ರಮ ವಹಿಸಿದೆಧಾರವಾಡ ಜಿಲ್ಲೆಯಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೇವೆ. ಕೋಳಿ, ಪಕ್ಷಿಗಳ ರಕ್ತ ತಪಾಸಣೆ ನಡೆಯುತ್ತಿದೆ. ಕೋಳಿ ಸಾಕಾಣಿಕೆ ಮಾಡುವವರು ಎಚ್ಚರ ವಹಿಸಬೇಕು. ಒಂದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಕೋಳಿಗಳು ಅಸಹಜವಾಗಿ ಸಾವನ್ನಪ್ಪಿದರೆ ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕು.
- ರವಿ ಸಾಲಿಗೌಡರ, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ