ಲಸಿಕೆಯಿಂದ ಯಾವ ಮಗುವೂ ಹೊರಗುಳಿಯದಿರಲಿ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ

KannadaprabhaNewsNetwork |  
Published : Jun 25, 2026, 02:15 AM IST
ಫೋಟೋವಿವರ- (19ಎಚ್‌ಪಿಟಿಾ3) ಹೊಸಪೇಟೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಕಾರಿ ಕವಿತಾ ಎಸ್. ಮನ್ನಿಕೇರಿ ಪಲ್ಸ್ ಪೋಲಿಯೋ ಪೋಸ್ಟರ್‌ ಬಿಡುಗಡೆಗೊಳಿಸಿದರು | Kannada Prabha

ಸಾರಾಂಶ

ಕಾರ್ಯಕ್ರಮದಲ್ಲಿ ​5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಬೇಕು.

ಹೊಸಪೇಟೆ: ಇದೇ ಜೂ.28ರಿಂದ ಜುಲೈ 1ರವರೆಗೆ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ​5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಬೇಕು. ಇದರಿಂದ ಯಾವೊಬ್ಬ ಮಗುವೂ ಲಸಿಕೆಯಿಂದ ವಂಚಿತವಾಗಬಾರದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಯಾವುದೇ ಪೊಲಿಯೋ ಪ್ರಕರಣ ಕಂಡುಬಂದಿಲ್ಲವಾದರೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಪ್ರತಿಯೊಬ್ಬರು ತಪ್ಪದೇ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಲಸಿಕಾ ಕಾರ್ಯಕ್ರಮ ಮೂರು ಹಂತಗಳಲ್ಲಿ ನಡೆಯುತ್ತಿವೆ. ಮೊದಲನೆಯ ದಿನ ಬೂತ್ ಮಟ್ಟದಲ್ಲಿ ಹಾಗೂ ಎರಡನೇ ದಿನ ಶಾಲಾ ಆವರಣದಲ್ಲಿ ಕ್ಯಾಂಪ್ ಆಯೋಜಿಸುವ ಮೂಲಕ ಮತ್ತು ಕೊನೆಯ ದಿನ ಯಾವುದೇ ಒಂದು ಮಗುವೂ ಲಸಿಕೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಪ್ರತಿ ಮನೆ ಮನೆ ಭೇಟಿ ನೀಡಿ ಲಸಿಕೆ ನೀಡುವರು ಎಂದರು.

ಜಿಲ್ಲೆಯ 15,31,552 ಒಟ್ಟು ಜನ ಸಂಖ್ಯೆಯಲ್ಲಿ 5 ವಯಸ್ಸಿನ ಮಕ್ಕಳ ಸಂಖ್ಯೆ 1,29,680 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ 2176 ಲಸಿಕೆದಾರರು, 1033 ಪೊಲಿಯೋ ಬೂತ್ ಹಾಗೂ 973 ತಂಡಗಳನ್ನು ನೇಮಿಸಲಾಗಿದೆ. ಇಟ್ಟಂಗಿ ಭಟ್ಟಿ, ಅಪಾಯಕಾರಿ ಉದ್ದಿಮೆ ಸೇರಿ 509 ಸ್ಥಳಗಳನ್ನು ಅಪಾಯಕಾರಿ ಪ್ರದೇಶಗಳೆಂದು ಗುರುತಿಸಲಾಗಿದೆ. ಅಲ್ಲಿನ ಮಕ್ಕಳು ಯಾವುದೇ ಕಾರಣಕ್ಕೂ ಪೊಲಿಯೊ ಲಸಿಕೆಯಿಂದ ವಂಚಿತರಾಗುವಂತಿಲ್ಲ ಎಂದು ಸೂಚಿಸಿದರು.

ಪೊಲಿಯೋ ದಿನ ರಜೆ ಇರುವ ಕಾರಣ ಪ್ರವಾಸ, ದೇವಸ್ಥಾನ ಇನ್ನಿತರೆಡೆ ತೆರಳುವ ಸಾಧ್ಯತೆ ಹೆಚ್ಚಿರುತ್ತದೆ. ರೈಲ್ವೆ ನಿಲ್ದಾಣ, ಪ್ರವಾಸಿ ತಾಣ ಹಾಗೂ ದೇವಸ್ಥಾನಗಳ ಬಳಿಯೂ ಕ್ಯಾಂಪ್ ಆಯೋಜಿಸಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವಂತೆ ನಿರ್ದೇಶಿಸಿದರು.

ಪೊಲಿಯೋ ಬೂತ್ ಮಾಹಿತಿ ನೀಡುವ ಕ್ಯೂ​ಆರ್‌ ಕೋಡ್:

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಿನೂತನ ಕ್ಯೂ​ಆರ್ ಕೋಡ್ ಸಿದ್ಧಪಡಿಸಲಾದ ಈ ಬಾರಿ ವಿಶೇಷವಾಗಿ ಮತ್ತು ವಿನೂತನವಾಗಿ ಸಿದ್ಧಪಡಿಸಲಾದ ಈ ಕ್ಯೂಆರ್ ಕೋಡ್ ಉದ್ಘಾಟಿಸಿದರು. ಈ ಕೋಡ್‌ನ್ನು ಸ್ಕ್ಯಾನ್‌ ಮಾಡಿದ ಕೂಡಲೇ ಜಿಲ್ಲೆಯಲ್ಲಿನ ಪೊಲಿಯೋ ಲಸಿಕಾ ಕೇಂದ್ರಗಳ ಸಂಪೂರ್ಣ ಮಾಹಿತಿ ಬಿತ್ತರವಾಗುತ್ತದೆ. ಜತೆಗೆ ತಮಗೆ ಬೇಕಾದ ಹತ್ತಿರದ ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಲ್ಲಿ ಲಸಿಕಾ ಕೇಂದ್ರಕ್ಕೆ ತೆರಳುವ ಮಾರ್ಗವು ಸಹ ಸಿಗಲಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಜಂಬಯ್ಯ, ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ, ಕುಟುಂಬ ಕಲ್ಯಾಣಾಧಿಕಾರಿ ಡಾ.ವಿನಯ್ ಸೇರಿದಂತೆ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸದ ನಿರ್ಮೂಲನೆಗೆ ಮಹಾನಗರ ಪಾಲಿಕೆ ಕಸರತ್ತು
ಅನಧಿಕೃತ ವೈದ್ಯಕೀಯ ವೃತ್ತಿ ತಡೆಗೆ ವಿಶೇಷ ಪಡೆ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್