ಕಾರವಾರ:
ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ. ಅದ್ದರಿಂದ ಜಿಲ್ಲೆಯ ಜನತೆ ಯಾವುದೇ ಅನಗತ್ಯ ಆತಂಕ, ಗೊಂದಲಗಳಿಗೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ಈಗಾಗಲೇ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುವ ಜತೆಗೆ ವೈಯಕ್ತಿಕ ಸ್ವಚ್ಛತೆ ಕುರಿತಂತೆ ಜಾಗೃತಿ ವಹಿಸಬೇಕು. ಈಗಾಗಲೇ ಆರೋಗ್ಯ ಇಲಾಖೆಯಿಂದ ಅಗತ್ಯ ಮುನ್ನೆಚರಿಕೆ ಸಿದ್ಧತಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಅನಗತ್ಯವಾಗಿ ಭಯಪಡುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋವಿಡ್ ಮುಂಜಾಗ್ರತೆಗಾಗಿ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಐಸಿಯು ಘಟಕಗಳ ಉಪಕರಣ ಮತ್ತು ಆಕ್ಸಿಜಿನ್ ಸಿಲಿಂಡರ್, ಪಿಎಸ್‌ಎ ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜಿನ್ ಘಟಕ ಸುಸ್ಥಿತಿಯಲ್ಲಿ ಇಡಲಾಗಿದೆ. ಯಾವುದೇ ವೈದ್ಯಕೀಯ ಉಪಕರಣಗಳ ಕಾರ್ಯ ನಿರ್ವಹಣೆಯಲ್ಲಿ ತೊಂದರೆಯಿದ್ದಲ್ಲಿ ಕೂಡಲೇ ದುರಸ್ತಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.ಪ್ರಸ್ತುತ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 1702 ಬೆಡ್ ಸಿದ್ಧಪಡಿಸಿಕೊಂಡಿದ್ದು, ಅವುಗಳಲ್ಲಿ 190 ಐಸೋಲೇಶನ್ ವಿಥ್ ಆಕ್ಸಿಜನ್, 1189 ಆಕ್ಸಿಜನ್, 201 ವೆಂಟಿಲೇಟರ್ ಇಲ್ಲದ ಐಸಿಯು ಹಾಗೂ 122 ವೆಂಟಿಲೇಟರ್ ಇರುವ ಐಸಿಯು ಹಾಸಿಗೆಗಳ ಸೌಲಭ್ಯವಿದೆ. ಕೋವಿಡ್ ನಿರ್ವಹಣೆಯಲ್ಲಿ ಪರಿಣಿತಿ ಹೊಂದಿರುವ 234 ವೈದ್ಯರು, 107 ಆಯುಷ್ ವೈದ್ಯರು, 457 ಶುಶ್ರೂಷಕರು, 139 ಪ್ಯಾರಾ ಮೆಡಿಕಲ್ ಸಿಬ್ಬಂದಿ, ವೆಂಟಿಲೇಟರ್ ನಿರ್ವಹಣೆಯಲ್ಲಿ ಪರಿಣಿತಿ ಹೊಂದಿರುವ 63, ಪಿಎಸ್‌ಎ ಪ್ಲಾಂಟ್ ನಿರ್ವಹಣೆಯ 4 ಹಾಗೂ 144 ಮುಂಚೂಣಿ ಕಾರ್ಯಕರ್ತರು ತಕ್ಷಣದ ಸೇವೆಗೆ ಲಭ್ಯರಿದ್ದಾರೆ. ಅಲ್ಲದೆ ಅಗತ್ಯವಿರುವ ಆ್ಯಂಬುಲೆನ್ಸ್‌ಗಳು, ವೆಂಟಿಲೇಟರ್, ಆಕ್ಸಿಜಿನ್ ಕಾನ್ಸ್ನ್‌ಟ್ರೇಟರ್, ತುರ್ತು ಔಷಧಗಳ ದಾಸ್ತಾನು ಇದ್ದು, ಅಗತ್ಯವಿದ್ದಲ್ಲಿ ಹೆಚ್ಚಿನ ಸಿಬ್ಬಂದಿ ಮತ್ತು ಅಗತ್ಯವಿರುವ ಉಪಕರಣ ಒದಗಿಸಲು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್ ಬಿ.ವಿ., ಜಿಲ್ಲಾ ಸವೇಕ್ಷಣಾಧಿಕಾರಿ ಡಾ. ಅರ್ಚನಾ ನಾಯಕ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.