ಕನ್ನಡಪ್ರಭ ವಾರ್ತೆ ಅರಸೀಕೆರೆ
ಪಂಚ ಗ್ಯಾರಂಟಿ ಯೋಜನೆ ರಾಜ್ಯದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಪ್ರತಿ ಮನೆತನಕ್ಕೂ ಸಹಾಯ ಹಸ್ತ ನೀಡುತ್ತಿದೆ, ಎಂದು ಚಿಕ್ಕಮಗಳೂರು ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.ತಾಲೂಕಿನ ಅಗುಂದ ಗ್ರಾಮದಲ್ಲಿ ನಡೆದ ಸೂಳೆಕೆರೆ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಲೋಕಾರ್ಪಣೆ ಸಭೆಯಲ್ಲಿ ಮಾತನಾಡಿದ ಅವರು, "ಭಾರತ ಜೋಡೋ " ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯರಿಗೆ ರೈತರು ಮತ್ತು ಮಹಿಳೆಯರ ಸಮಸ್ಯೆ ಕುರಿತು ಸಲಹೆ ನೀಡಿದ್ದರು. ಆ ಆಲೋಚನೆಯೇ ಪಂಚ ಗ್ಯಾರಂಟಿ ಯೋಜನೆಗೆ ಪ್ರೇರಣೆ. ಪ್ರಾರಂಭದಲ್ಲಿ ವಿರೋಧ ಪಕ್ಷಗಳು ‘ಸರ್ಕಾರ ದಿವಾಳಿಯಾಗುತ್ತದೆ’ ಎಂದರೂ, ಈ ಯೋಜನೆ ಜನಮನ ಗೆದ್ದಿದೆ, ಎಂದು ಹೇಳಿದರು.ಮಹಿಳೆಯರು ಉಚಿತ ಬಸ್ ಪ್ರಯಾಣದಿಂದ ಪ್ರಯೋಜನ ಪಡೆಯುತ್ತಿದ್ದಾರೆ, ಮನೆಗಳಿಗೆ ಉಚಿತ ವಿದ್ಯುತ್ ಸಿಗುತ್ತಿದೆ, ನಿರುದ್ಯೋಗಿಗಳಿಗೆ ತಿಂಗಳ ವೇತನ ಹಾಗೂ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರ ಪ್ರತಿಯೊಬ್ಬ ನಾಗರಿಕನಿಗೂ ತಲುಪುವ ಯೋಜನೆಗಳನ್ನು ತರುತ್ತಿದೆ, ಎಂದರು.ಅಕ್ರಮ–ಸಕ್ರಮ ಸಮಸ್ಯೆಗೆ ಪರಿಹಾರವಾಗಿ, 500 ಮೀಟರ್ ಒಳಗಿನ ಭೂಮಿ ಸಕ್ರಮಗೊಳಿಸಲಾಗುತ್ತದೆ. 500 ಮೀಟರ್‌ಗಿಂತ ದೂರದ ರೈತರಿಗೆ ಬೋರ್‌ವೆಲ್ ಮತ್ತು ಪಂಪ್‌ಸೆಟ್ ಸರ್ಕಾರದಿಂದಲೇ ಸಿಗಲಿದೆ. ಮುಂಚೆ 60% ಇದ್ದ ಸಬ್ಸಿಡಿಯನ್ನು ಈಗ 80% ಕ್ಕೆ ಏರಿಸಲಾಗಿದೆ. ‘ಕುಸುಮ್ ಸಿ’ ಯೋಜನೆಯಡಿ ರಾಜ್ಯದಲ್ಲಿ 2400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಆಹ್ವಾನಿಸಲಾಗಿದೆ ಎಂದರು.ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಎಂ ಪಟೇಲ್ ಮಾತನಾಡಿ, ಸೂರ್ಯಕಿರಣವನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಕೆಲಸ ಅರಸೀಕೆರೆಯಲ್ಲಿ ನಡೆಯುತ್ತಿರುವುದು ಬಯಲುಸೀಮೆಯ ಈ ಭಾಗಕ್ಕೆ ಮಹತ್ವದ ಬೆಳವಣಿಗೆ. ಶಾಸಕರಾದ ಕೆ.ಎಂ. ಶಿವಲಿಂಗೇಗೌಡರ ನೇತೃತ್ವದಲ್ಲಿ ಗೃಹಜ್ಯೋತಿ ಯೋಜನೆ ಉತ್ತಮ ರೀತಿಯಲ್ಲಿ ಉಪಯೋಗವಾಗುತ್ತಿದೆ. ಇದು ರೈತರಿಗೆ ದೊಡ್ಡ ಅವಕಾಶ ಎಂದು ಹೇಳಿದರು. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ರೈತ ಕುಟುಂಬದಿಂದ ಬಂದಿರುವ ಕಾರಣದಿಂದ, ರೈತರ ಕಷ್ಟ ಅವರಿಗೆ ಚೆನ್ನಾಗಿ ತಿಳಿದಿದೆ. ಇದೇ ರೀತಿ ನಮ್ಮ ತಾಲೂಕು ಇನ್ನಷ್ಟು ಅಭಿವೃದ್ಧಿ ಸಾಧಿಸಲು ಸಚಿವರು ಸಹಕಾರ ನೀಡಬೇಕು ಎಂದರು.ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಿ:
ಈ ಸಂದರ್ಭದಲ್ಲಿ ಶ್ರೇಯಸ್ ಪಾಟೀಲ್ ಅವರು ಸಚಿವ ಕೆ.ಜೆ. ಜಾರ್ಜ್ ಅವರಿಗೆ ವಿಶೇಷ ಮನವಿವೊಡ್ಡಿ, ಅರಸೀಕೆರೆಯ ಶಾಸಕ ಶಿವಲಿಂಗೇಗೌಡರನ್ನು ಸಚಿವ ಸ್ಥಾನದತ್ತ ಕೊಂಡೊಯ್ಯಲು ಹಾಗೂ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಲು ಸಹಕರಿಸಬೇಕು ಎಂದು ವಿನಂತಿಸಿದರು.ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ ತಾಲ್ಲೂಕಿನ ಅಭಿವೃದ್ಧಿಯ ಸರಮಾಲೆಯು ಸತತವಾಗಿ ಮುಂದುವರಿಯುತ್ತಿದೆ. ಹಾಸನ ಜಿಲ್ಲೆಯ ಬರ ಪ್ರದೇಶವಾದ ತಾಲೂಕಿನಲ್ಲಿ ನೀರಾವರಿ ಮತ್ತು ವಿದ್ಯುತ್ ಶಕ್ತಿಯನ್ನು ಸಮೃದ್ಧಗೊಳಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಕೈಗೊಂಡಿದ್ದೇವೆ. ಎತ್ತಿನಹೊಳೆ ಯೋಜನೆ ಮೂಲಕ ಕಣಕಟ್ಟೆ ಸುತ್ತ ಹತ್ತು ಕೆರೆಗಳನ್ನು ತುಂಬಿಸಲಾಗಿದೆ. ಮುಂದಿನ ಜುಲೈ ವೇಳೆಗೆ ಹಾರನಹಳ್ಳಿ ಕೆರೆಯಿಂದ ಹಿಡಿದು ಕಸಬಾ ಹೋಬಳಿಯ ಎಲ್ಲಾ ಕೆರೆಗಳು ತುಂಬಿಸುವ ಪಣ ತೊಟ್ಟಿದ್ದೇನೆ ಎಂದರು.ಗಂಡಸಿ ಭಾಗದ ಕೆರೆಗಳಿಗೆ ಹೇಮಾವತಿ ನದಿಯಿಂದ ನೀರು ತರಲಾಗುತ್ತದೆ. ಬಾಣಾವರಕ್ಕೆ ಅಪ್ಪರ್ ಭದ್ರ ಯೋಜನೆಯ ಮಂಜೂರಾತಿಯಾಗಿದೆ. ಬರಡು ತಾಲೂಕಿಗೆ ನೀರು ತರಲು ಹಾಗೂ ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ತಾಲೂಕಿಗೆ ಅಗತ್ಯವಿರುವ 100 ಮೆಗಾವ್ಯಾಟ್ ವಿದ್ಯುತ್‌ನಿಂದ ಈಗ 50–52 ಮೆಗಾವ್ಯಾಟ್ ಮಾತ್ರ ದೊರೆಯುತ್ತಿದೆ. ಅದಕ್ಕಾಗಿ ಅರಸೀಕೆರೆಯಲ್ಲೇ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.ಶಿವಲಿಂಗೇಗೌಡ ಅವರು ಸಚಿವ ಜಾರ್ಜ್ ಅವರ ಬಳಿ ತಾಲೂಕಿನ ಯೋಜನೆಗೆ ಹೆಚ್ಚುವರಿ 200 ಕೋಟಿ ಮಂಜೂರು ಮಾಡಿ ಬರಡು ಪ್ರದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರ ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರ್ಜ್ ಅವರು, “ಜಾಗ ಖಾತರಿ ಮಾಡಿಕೊಂಡು ಬನ್ನಿ, ತಾಲೂಕು ಅಭಿವೃದ್ಧಿಯಲ್ಲಿ ನಾವು ಸಹ ಕೈಜೋಡಿಸುತ್ತೇವೆ” ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಧರ್ಮಶೇಖರ್, ದುಮ್ಮೇನಹಳ್ಳಿ ಪಂಚಾಯಿತಿ ಅಧ್ಯಕ್ಷ ಅಜ್ಜಪ್ಪ, ಅಗುಂದ ಪಂಚಾಯಿತಿ ಅಧ್ಯಕ್ಷೆ ಕವಿತಾ, ಎಂಜಿನಿಯರ್ ಮಹೇಶ್, ಮುಖ್ಯ ಇಂಜಿನಿಯರ್ ಸತೀಶ, ಸಲಹಾ ಸಮಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ನೂರಾರು ನಾಗರಿಕರು ಭಾಗವಹಿಸಿದರು.* ಬಾಕ್ಸ್ ನ್ಯೂಸ್:ಕೆಎಂಶಿಗೆ ಸಚಿವ ಸ್ಥಾನ ನೀಡುವ ನಿರ್ಧಾರ ಸಿಎಂ,
ಕೆಪಿಸಿಸಿ ಹಾಗೂ ಹೈಕಮಾಂಡ್‌ಗೆ ಬಿಟ್ಟಿದ್ದು: ಕೆ.ಜೆ. ಜಾರ್ಜ್ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಥವಾ ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ನಿರ್ಧಾರ ಈಗಾಗಲೇ ಕೈಗೊಳ್ಳಲಾಗಿಲ್ಲ, ಈ ವಿಷಯ ಸಂಪೂರ್ಣವಾಗಿ ಹೈಕಮಾಂಡ್‌ನ ವ್ಯಾಪ್ತಿಯಲ್ಲಿದೆ ಎಂದು ಹೇಳಿದರು. ಸಭೆಯಲ್ಲಿ ಮೊಳಗಿದ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಸಾರ್ವಜನಿಕರ ಕೂಗಿಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಕೆ.ಎಂ. ಶಿವಲಿಂಗೇಗೌಡರು ಸಚಿವ ಸ್ಥಾನದ ಆಕಾಂಕ್ಷಿಯಲ್ಲ; ಅವರು ಸೋಲಿಲ್ಲದ ನಾಯಕರು. ಸಚಿವ ಸ್ಥಾನ ನೀಡುವ ನಿರ್ಧಾರ ಸಿಎಂ, ಕೆಪಿಸಿಸಿ ಹಾಗೂ ಹೈಕಮಾಂಡ್ ಅವರದ್ದಾಗಿದೆ. ಸಿಎಂ ಬದಲಾವಣೆ ಕುರಿತು ಊಹಾಪೋಹಗಳು ನಡೆಯುತ್ತಿವೆ. ಆದರೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಅಥವಾ ಸೋನಿಯಾ ಗಾಂಧಿ ಅವರಿಂದ ಯಾವುದೇ ಹೇಳಿಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವದ ಪ್ರಕ್ರಿಯೆ ಇದೆ, ಸಿಎಲ್‌ಪಿ ಸಭೆ ಹಾಗೂ ಹೈಕಮಾಂಡ್ ನಿರ್ಧಾರವೇ ಅಂತಿಮ, ಎಂದು ಹೇಳಿದರು. ನವೆಂಬರ್ 15ರ ನಂತರ ರಾಹುಲ್ ಗಾಂಧಿಯವರ ರಾಜ್ಯ ಭೇಟಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಈ ಕುರಿತು ಮಾತನಾಡುವ ಅಧಿಕಾರ ನನಗಿಲ್ಲ ಎಂದು ಪ್ರತಿಕ್ರಿಯಿಸಿದರು.