ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ 9 ದಿನಗಳ ಕಾಲ ಪ್ರತಿಷ್ಠಾಪನೆಗೊಂಡು ಪೂಜಿತಗೊಂಡ ವಿಘ್ನ ವಿನಾಶಕನಿಗೆ ಗುರುವಾರ ಅದ್ಧೂರಿ ಮೆರವಣಿಗೆ ಮೂಲಕ ವಿದಾಯ ಹೇಳಲಾಯಿತು.
ಹಳೇಹುಬ್ಬಳ್ಳಿಯ ಭಾಗದ 115ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ವಿಶೇಷವಾಗಿ ಹಳೇಹುಬ್ಬಳ್ಳಿ ದುರ್ಗದ ಬೈಲ್ ಸರ್ಕಲ್‌ನಲ್ಲಿ ಹುಬ್ಬಳ್ಳಿ ಕಾ ಮಹಾರಾಜ, ಚನ್ನಪೇಟೆ, ಅಯೋಧ್ಯಾನಗರ, ಕೃಷ್ಣಾಪುರ, ಗುಡಿಓಣಿ, ಮೇದಾರ ಓಣಿ, ತೊರವಿಹಕ್ಕಲ್ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ವಿಸರ್ಜಣೆ ಅದ್ಧೂರಿಯಾಗಿ ನಡೆಯಿತು. ಈಶ್ವರನಗರ, ಭೈರಿದೇವರಕೊಪ್ಪ ಭಾಗದಲ್ಲಿಯೂ ಕೆಲವು ಗಣೇಶ ಮೂರ್ತಿಗಳ ಮೆರವಣಿಗೆ ಸಂಭ್ರಮದಿಂದ ನಡೆಯಿತು.ಹಳೇಹುಬ್ಬಳ್ಳಿಯ ಗಣೇಶ ಮೂರ್ತಿಗಳ ಮೆರವಣಿಗೆಗೆ ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಮಹಾಮಂಡಳದ ಸರ್ವಸದಸ್ಯರು ಚಾಲನೆ ನೀಡಿದರು. ನಂತರ ನಡೆದ ಡಿಜೆ ಅಬ್ಬರ ಹಾಗೂ ಸಂಪ್ರದಾಯಿಕ ವಾದ್ಯ ಮೇಳದೊಂದಿಗೆ ಗಣೇಶ ಮೂರ್ತಿಗಳ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಮೆರವಣಿಗೆಯುದ್ಧಕ್ಕೂ ಡಿಜೆ ಸೌಂಡ್‌ಗೆ ಮಹಿಳೆಯರು, ಮಕ್ಕಳು, ಯುವಕರು ಕುಣಿದು ಕುಪ್ಪಳಿಸಿದರು. ಬಗೆ ಬಗೆಯ ಉಡುಗೆ- ತೊಡುಗೆಯಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದ ಮಹಿಳೆಯರು, ಯುವಕರು ಮೆರವಣಿಗೆಗೆ ಮತ್ತಷ್ಟು ಕಳೆ ತಂದರು. ಇಲ್ಲಿಯ ಹೊಸೂರ, ಗಾಜಿನ ಮನೆ ಆವರಣದ ಬಳಿ ಬಾವಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆಗೆ ಶಾಸಕರಿಂದ ಚಾಲನೆ: ಹಳೇಹುಬ್ಬಳ್ಳಿ ಹಾಗೂ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪನೆಯಾದ ಗಣೇಶ ಮೂರ್ತಿಗಳ ಮೆರವಣಿಗೆಗೆ ಶಾಸಕ ಪ್ರಸಾದ ಅಬ್ಬಯ್ಯ ಹಳೇಹುಬ್ಬಳ್ಳಿ ದುರ್ಗದಬೈಲ್‌ನಲ್ಲಿ ಜನಪದ ವಾದ್ಯ ಬಾರಿಸುವ ಮೂಲಕ ಗುರುವಾರ ಸಂಜೆ ಚಾಲನೆ ನೀಡಿದರು. ಈ ವೇಳೆ ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ, ಮಾಜಿ ಶಾಸಕ ಅಶೋಕ ಕಾಟವೆ, ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ, ಅಮರೇಶ ಹಿಪ್ಪರಗಿ ಸೇರಿದಂತೆ ಇತರರು ಇದ್ದರು.