ಕಾರಟಗಿ:
ಸೆ.1 ಹಾಗೂ 2ರಂದು ನಡೆಯುವ ಇಲ್ಲಿನ ಆರಾಧ್ಯ ದೈವ ಶ್ರೀಶರಣ ಬಸವೇಶ್ವರರ ೫೧ನೇ ವರ್ಷದ ಮಂಗಲೋತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತರು ಸೇರುವ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸುಗಮ ಸಂಚಾರ ನಿಯಂತ್ರಣಕ್ಕಾಗಿ ಈ ಬಾರಿ ಡಿಜೆ ಬಳಕೆಗೆ ಪೊಲೀಸ್ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.ಮಂಗಳವಾರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪಿಐ ಸುಧೀರ್ ಬೆಂಕಿ, ಜಾತ್ರೆ ಮತ್ತು ಮಂಗಲೋತ್ಸವದ ಪೂರ್ವ ತಯಾರಿ, ಜೋಡು ರಥ ಸಾಗುವ ಮಾರ್ಗದ ಸ್ಥಳ ಪರಿಶೀಲಿಸಿದರು. ಬಳಿಕ ಸಭೆ ನಡೆಸಿದ ಅವರು, ಪುರಾಣ ಸಮಿತಿಗೆ ಡಿಜೆ ಬಳಕೆ ವಿಷಯವನ್ನು ಪ್ರಸ್ತಾಪಿಸಿ ಎಚ್ಚರಿಕೆ ನೀಡಿದರು.
ಮಂಗಲೋತ್ಸವದ ಹಿನ್ನೆಲೆ ನಡೆಯುವ ಗಂಗೆ ಸ್ಥಳಕ್ಕೆ ಹೋಗಿ ಬರುವ ಪಲ್ಲಕ್ಕಿ ಕುಂಭೋತ್ಸವದಲ್ಲಿ ಸಾವಿರಾರು ಮಹಿಳೆಯರು ಸೇರಲಿದ್ದು ಅವರ ಸುರಕ್ಷತೆ ದೃಷ್ಟಿಯಿಂದ ಮತ್ತು ಸುಗಮ ಸಂಚಾರಕ್ಕೆ ವಿಳಂಬವಾಗುವ ಹಿನ್ನೆಲೆ ಡಿಜೆ ಬಳಸಬೇಡಿ ಎಂದು ಸೂಚಿಸಿದರು. ಗಂಗೆ ಸ್ಥಳಕ್ಕೆ ಆರ್.ಜಿ. ರಸ್ತೆ ಮೂಲಕ ಮೆರವಣಿಗೆ ಸಾಗುವ ವೇಳೆ ಡಿಜೆ ಬಳಿಸದರೆ ಮೆರವಣಿಗೆ ಸಾಗಲು 6 ಗಂಟೆಗೂ ಹೆಚ್ಚು ಕಾಲ ಬೇಕಾಗುತ್ತದೆ. ಇದರಿಂದ ಸಂಚಾರ ನಿಯಂತ್ರಣ, ಕಾನೂನು ಸುರಕ್ಷತೆ ಪೊಲೀಸರಿಗೆ ಸವಾಲಾಗುತ್ತದೆ. ಮುಖ್ಯವಾಗಿ ಕುಂಭ, ಪಲ್ಲಕಿ ಉತ್ಸವದಲ್ಲಿ ಪಾಲ್ಗೊಂಡ ಮಹಿಳೆಯರ ರಕ್ಷಣೆ ಆದ್ಯತೆ ಆಗಿದೆ. ಹೀಗಾಗಿ ಡಿಜೆ ಬಳಕೆ ಬೇಡವೆಂದು ತಿಳಿಸಿದರು.ಡಿಜೆ ಬಳಿಸಿದರೆ ಬೆಳಗ್ಗೆ ೮ಕ್ಕೆ ದೇವಸ್ಥಾನಕ್ಕೆ ಆಗಮಿಸುವ ಮಹಿಳೆಯರು ಕುಂಭ-ಕಳಸ ಹೊತ್ತು ಮಧ್ಯಾಹ್ನ 2ರ ವರೆಗೆ ರಸ್ತೆಯಲ್ಲಿ ನಿಂತುಕೊಳ್ಳಬೇಕಾಗುತ್ತದೆ. ಇದನ್ನು ಮನಗಂಡು ಡಿಜೆ ಬಳಸಬಾರದು. ಸಂಚಾರ ನಿಯಂತ್ರಣಕ್ಕೆ ಪೊಲೀಸರೊಂದಿಗೆ ಪುರಾಣ ಸಮಿತಿ ಸೇರಿದಂತೆ ಭಕ್ತರು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಸುಧೀರ ಬೆಂಕಿ ಮನವಿ ಮಾಡಿದರು.
ಮಹೋತ್ಸವಕ್ಕೆ ಅಗತ್ಯ ಭದ್ರತೆ ಒದಗಿಸುವ ಜತೆಗೆ, ಜಾತ್ರೆಯಲ್ಲಿ ಕರ್ಕಷ ನಾದದ ಪೀಪಿಗಳ ಮಾರಾಟ ನಿಷೇಧಿಸಲಾಗಿದೆ. ಯಾರಾದರು ಮಾರಾಟ ಮಾಡಿದರೆ, ಪೀಪಿ ಉದಿ ಸಮಸ್ಯೆ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.ಶ್ರೀಶರಣ ಬಸವೇಶ್ವರ ಕಮಾನ್‌ನಿಂದ ದೇವಸ್ಥಾನಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಆಟಿಕೆ ಸಾಮಗ್ರಿ, ಮಿಠಾಯಿ, ಬಳೆ ಸೇರಿದಂತೆ ಇನ್ನಿತರ ವಸ್ತುಗಳ ಮಾರಾಟಗಾರರು ರಸ್ತೆ ಅತಿಕ್ರಮಿಸಿದೆ ರಸ್ತೆಯಿಂದ ೨೦ ಫೀಟ್ ಅಂತರದಲ್ಲಿ ವ್ಯಾಪಾರ-ವಹಿವಾಟು ನಡೆಸಬೇಕು. ರಸ್ತೆಯಲ್ಲಿ ಯಾವುದೇ ಅಂಗಡಿ- ಮುಂಗಟ್ಟು ಹಾಕಿದರೆ ತೆರವುಗೊಳಿಸಲಾಗುವುದು ಎಂದರು.
ಇದಕ್ಕೂ ಮುಂಚೆ ಮಹೋತ್ಸವದ ಸಿದ್ಧತಾ ಕಾರ್ಯ, ರಥೋತ್ಸವ ಸಾಗುವ ಮಾರ್ಗ, ದಾಸೋಹ ಸ್ಥಳ, ಪಾಕಶಾಲಾ ಸ್ಥಳ ಪರಿಶೀಲಿಸಿದ ಬಳಿಕ ಪುರಾಣ ಸಮಿತಿಯೊಂದಿಗೆ ಚರ್ಚಿಸಿ ಎರಡು ದಿನ ಜರುಗುವ ಜಾತ್ರಾ ಮಹೋತ್ಸವದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು.ಪುರಾಣ ಸಮಿತಿ ಸದಸ್ಯರು ಮಾತನಾಡಿ, ಈ ಬಾರಿ ಶ್ರೀಶರಣ ಬಸವೇಶ್ವರ ೫೧ನೇ ವರ್ಷದ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗುವ ಹಿನ್ನೆಲೆ ಹೆಚ್ಚಿನ ಭದ್ರತೆ ಒದಗಿಸಲು ಮನವಿ ಮಾಡಿದರು.
ಬಳಿಕ ಪುರಾಣ ಸಮಿತಿಯಿಂದ ಪಿಐ ಸುಧೀರ ಬೆಂಕಿ ಅವರನ್ನು ಸನ್ಮಾನಿಸಲಾಯಿತು. ಎಎಸ್‌ಐ ಬೋರಣ್ಣ, ಸಮಿತಿಯ ಕುಳಗಿ ಗುಂಡಪ್ಪ, ಜಗದೀಶ ಅವರಾಧಿ, ಶರಣಪ್ಪ ಗದ್ದಿ, ವೀರೇಶ ಸಂಡೂರು ಸೇರಿದಂತೆ ಇನ್ನಿತರರು ಇದ್ದರು.