- ಎಐಕೆಕೆಎಂಎಸ್ ಮುಖಂಡ ಮಧು ತೊಗಲೇರಿ ಆರೋಪ । ಗುಡಾಳ್ ಗ್ರಾಪಂ ಕಚೇರಿ ಎದುರು ಪ್ರತಿಭಟನೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಮಧು ತೊಗಲೇರಿ ಮಾತನಾಡಿ, ಕದರಪ್ಪನಹಳ್ಳಿ ಗ್ರಾಮ 7 ದಶಕದಿಂದ ಮೂಲಸೌಕರ್ಯ ವಂಚಿತವಾಗಿದೆ. ಆಳುವ ಸರ್ಕಾರಗಳು, ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಜನಪರ ಕಾಳಜಿ ಎಷ್ಟಿದೆ ಎಂಬುದಕ್ಕೆ ಈ ಗ್ರಾಮ ಸಾಕ್ಷಿ. ಇಡೀ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುತ್ತಿದೆ. ಕುಡಿಯುವ ನೀರಿನ ಘಟಕ ಹಾಳಾಗಿ ಎಷ್ಟೋ ದಿನ ಕಳೆದಿದೆ. ಆದರೂ, ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಸಹ ಅದನ್ನು ಸರಿಪಡಿಸಲು ಮುಂದಾಗಿಲ್ಲ ಎಂದರು.
ಬರಗಾಲದಿಂದ ಇಡೀ ರಾಜ್ಯವೇ ತತ್ತರಿಸಿದೆ. ಗ್ರಾಮದಲ್ಲಿ ಸಮಸ್ಯೆಗಳೂ ಉಲ್ಭಣಿಸುತ್ತಿವೆ. ಇದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕನಿಷ್ಠ ಶೌಚಾಲಯ ವ್ಯವಸ್ಥೆಯೂ ಇಲ್ಲ. ಮಕ್ಕಳು ಶೌಚಕ್ಕಾಗಿ ಬಯಲಿಗೆ ಹೋಗುವ ಸ್ಥಿತಿ ಇದೆ. ಹೆಣ್ಣುಮಕ್ಕಳು ಬಯಲಿಗೆ ಹೋಗಲು ಹಿಂಜರಿಯುತ್ತಿದ್ದು, ಇದು ಶಿಕ್ಷಣ ಇಲಾಖೆಯಷ್ಟೇ ಅಲ್ಲ, ಸರ್ಕಾರವೇ ತಲೆತಗ್ಗಿಸುವ ಸಂಗತಿ. ಒಂದು ಶಾಲೆಗೆ ತರಗತಿ ಕೊಠಡಿಗಳು ಎಷ್ಟು ಮುಖ್ಯವೋ, ಶೌಚಾಲಯವೂ ಅಷ್ಟೇ ಮುಖ್ಯ. ಈ ಕನಿಷ್ಠ ಅರಿವು, ಜ್ಞಾನ ಇಲಾಖೆಗಳ ಅಧಿಕಾರಿಗಳಿಗೆ ಇಲ್ಲವೇ ಎಂದು ಪ್ರಶ್ನಿಸಿದರು.ಕದರಪ್ಪನಹಟ್ಟಿ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ಹೂಳು ತುಂಬಿ ಶತಮಾನಗಳೇ ಕಳೆದಿವೆ. ಇಂದಿಗೂ ಕೆರೆ ಹೂಳೆತ್ತುವ, ಅಭಿವೃದ್ಧಿಪಡಿಸುವ ಕೆಲಸಗಳನ್ನು ಗ್ರಾಪಂ ಮಾಡಿಲ್ಲ. ಹೂಳೆತ್ತಿದರೆ ಕೆರೆಯಲ್ಲಿ ನೀರು ಸಂಗ್ರಹವಾಗಿ, ಅಂತರ್ಜಲ ವೃದ್ಧಿಯಾಗುವ ಮೂಲಕ ಗ್ರಾಮದ ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯಾದರೂ ಕಡಿಮೆ ಆಗುತ್ತದೆ. ತಕ್ಷಣವೇ ಗ್ರಾಮದ ನೀರಿನ ಘಟಕ ದುರಸ್ತಿಪಡಿಸಿ, ಜನರಿಗೆ ನೀರೊದಗಿಸಬೇಕು. ಘಟಕ ದುರಸ್ತಿಪಡಿಸುವವರೆಗೆ ಟ್ಯಾಂಕರ್ ಮೂಲಕ ಕುಡಿಯುವ ನೀರೊದಗಿಸುವ ಕೆಲಸ ಗ್ರಾಪಂ ಮಾಡಬೇಕು ಎಂದು ತಾಕೀತು ಮಾಡಿದರು.
ಗುಡಾಳ್ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೂಲಕ ದಾವಣಗೆರೆ ತಾಲೂಕು ಪಂಚಾಯಿತಿ ಇಒ ಹಾಗೂ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಗ್ರಾಪಂ ಪಿಡಿಒ ಅವರು, ತಕ್ಷಣವೇ ಗ್ರಾಮದ ನೀರಿನ ಸಮಸ್ಯೆ ಪರಿಹರಿಸಲು ನಿತ್ಯವೂ 4 ಟ್ಯಾಂಕರ್ ಮೂಲಕ ನೀರೊದಗಿಸುವ ಭರವಸೆ ನೀಡಿದರು.
- - - -16ಕೆಡಿವಿಜಿ1, 2: