ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಬೇಡಿಕೆ ಹಾಗೂ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ ಸಮಸ್ಯೆಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ರೈತರು ಕಾರ್ಖಾನೆಗಳು ಆರಂಭವಾಗಲು ಒಪ್ಪಿಗೆ ನೀಡಿದರೆ ಮಾತ್ರ ಕಾರ್ಯಾರಂಭ ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆ ಮಾಲೀಕರು ರಿಸ್ಕ್ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಹೀಗಾಗಿ ಎರಡೂ ಕಡೆಯವರ ನಡುವೆ ಒಮ್ಮತ ಮೂಡುವುದು ಅಗತ್ಯ ಎಂದರು.
ಎಂಎಸ್‌ಪಿ ವಿಚಾರದಲ್ಲಿ ಕೇಂದ್ರದ ರಾಜಕೀಯ:ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ನಿಗದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ. ಆದರೆ, ಕೇಂದ್ರ ಸರ್ಕಾರ ಎಂಎಸ್‌ಪಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾದರೆ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಮತ್ತು ಜಲಾವೃತ ಸಮಸ್ಯೆಗೆ ಬಳ್ಳಾರಿ ನಾಲಾ ವಿಸ್ತರಣೆಯೊಂದೇ ಶಾಶ್ವತ ಪರಿಹಾರವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಹರಿದುಬರುವುದರಿಂದ ನಾಲಾ ವ್ಯಾಪ್ತಿಯ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಇದರಿಂದ ಸಾರ್ವಜನಿಕರು, ರೈತರು ಹಾಗೂ ಸ್ಥಳೀಯ ನಿವಾಸಿಗಳು ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಗುರ್ಲಾಪುರದಲ್ಲಿ ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಧರಣಿ ನಡೆಸುತ್ತಿರುವ ರೈತರು ಹಿಂಡಲಗಾ ಜೈಲು ಭರೋ ಚಳವಳಿ ಹಮ್ಮಿಕೊಂಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಪಂ ಹಾಗೂ ತಾಪಂ ಚುನಾವಣೆಗಳ ಅಧಿಸೂಚನೆ ಡಿಸೆಂಬರ್ 15ರಂದು ಪ್ರಕಟವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನವನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ನಡೆಸಲು ಉದ್ದೇಶಿಸಲಾಗಿದೆ. ಚುನಾವಣಾ ಪ್ರಕ್ರಿಯೆಗೆ ಅಧಿವೇಶನದಿಂದ ಯಾವುದೇ ತೊಂದರೆಯಾಗದಂತೆ ಮುಂಚಿತವಾಗಿ ಅಧಿವೇಶನ ನಡೆಸುವ ಚಿಂತನೆ ಇದೆ ಎಂದರು.