ತಮ್ಮ ಅವಧಿಯಲ್ಲಿ ರಸ್ತೆಗಳ ಅಭಿವೃದ್ಧಿಯಿಂದ ಪ್ರತಿಭಟನೆ ಸ್ಥಿತಿ ಇಲ್ಲ: ಡಾ.ಸಿ.ಟಿ.ರವಿ

KannadaprabhaNewsNetwork |  
Published : Sep 13, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಇಂದಿನ ಶಾಸಕರಿಗೆ ಅಲ್ಲೊಂದು ಇಲ್ಲೊಂದು ರಸ್ತೆ ಗುಂಡಿ ಮುಚ್ಚುವ ಕೆಲಸ ಬಿಟ್ಟು ಉಳಿದಂತೆ ಎಲ್ಲ ರಸ್ತೆಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಡಾ.ಸಿ.ಟಿ. ರವಿ ಶಾಸಕ ಎಚ್.ಡಿ, ತಮ್ಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ತಾಲೂಕಿನ ಬೆಳವಾಡಿ ಕೆರೆಗೆ ಶನಿವಾರ ಬಾಗಿನ ಅರ್ಪಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಇಂದಿನ ಶಾಸಕರಿಗೆ ಅಲ್ಲೊಂದು ಇಲ್ಲೊಂದು ರಸ್ತೆ ಗುಂಡಿ ಮುಚ್ಚುವ ಕೆಲಸ ಬಿಟ್ಟು ಉಳಿದಂತೆ ಎಲ್ಲ ರಸ್ತೆಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಡಾ.ಸಿ.ಟಿ. ರವಿ ಶಾಸಕ ಎಚ್.ಡಿ, ತಮ್ಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ತಾಲೂಕಿನ ಬೆಳವಾಡಿ ಕೆರೆಗೆ ಶನಿವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು ಕಡೂರು, ಮೂಡಿಗೆರೆ ಹಾಗೂ ಶೃಂಗೇರಿ ಕ್ಷೇತ್ರಗಳಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಜನರು ಪ್ರತಿಭಟನೆ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಂತಹ ಪರಿಸ್ಥಿತಿ ಬಂದಿಲ್ಲ. ಏಕೆಂದರೆ, ತಮ್ಮ ಶಾಸಕತ್ವದಲ್ಲಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದರು.

‘ನಾನು ಏನು ಮಾಡಿದ್ದೇನೆ ಎಂಬುದನ್ನು ಕ್ಷೇತ್ರದ ಮತದಾರರಿಗೆ ಬಿಡುತ್ತೇನೆ. ಇಂದಿನ ಶಾಸಕರು ಅಲ್ಲೊಂದು ಇಲ್ಲೊಂದು ಗುಂಡಿ ಮುಚ್ಚುವ ಕೆಲಸ ಮಾಡಿದರೆ ಸಾಕು. ಅದೂ ದೊಡ್ಡ ಗುಂಡಿ ಬಿದ್ದಿಲ್ಲ’ ಎಂದು ವ್ಯಂಗ್ಯವಾಡಿದರು.

₹1,281 ಕೋಟಿ ನೀರಾವರಿ ಯೋಜನೆಗೆ ಶ್ರಮ

ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ಭಾಗದ ನೂರಾರು ಕೆರೆಗಳಿಗೆ ಭದ್ರಾ ನದಿಯಿಂದ ನೀರು ಹರಿಸುವ 1,281 ಕೋಟಿ ರು.ಯೋಜನೆಗೆ ಮಂಜೂರಾತಿ ದೊರಕಿಸಲು ಶ್ರಮಿಸಿದ್ದೇನೆ. ಸಚಿವರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಸಂದರ್ಭ ದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನವೂ ಶಾಶ್ವತ ನೀರಾವರಿ ಯೋಜನೆಗೆ ಮಂಜೂರಾತಿ ನೀಡುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದ್ದೆ ಎಂದು ಹೇಳಿದರು.

ಹಣಕಾಸಿನ ತೊಂದರೆ ಇದ್ದರೂ ಜನರಿಗೆ ನೀಡಿದ್ದ ಮಾತು ನೆನಪಿಸಿ ಯೋಜನೆ ಮಂಜೂರಾತಿಗೆ ಒತ್ತಾಯಿಸಿದ್ದೆ. ಇದರ ಫಲವಾಗಿ ಯೋಜನೆಗೆ ಅನುಮೋದನೆ ದೊರೆತಿದೆ. ಹಂತ ಹಂತವಾಗಿ ಕಾಮಗಾರಿ ನಡೆಯುತ್ತಿದೆ. ರಣಘಟ್ಟ ಯೋಜನೆಯಲ್ಲಿ ಬೆಳವಾಡಿ ಕೆರೆ ಸೇರಿಸಿ ₹125.46 ಕೋಟಿ ಆಡಳಿತಾತ್ಮಕ ಮಂಜೂರಾತಿ ಕೊಡಿಸುವಲ್ಲಿ ಯಶಸ್ವಿ ಯಾಗಿದ್ದೇನೆ. ಈ ಭಾಗದ ನೀರಿನ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ ಎಂದರು.

ಸುಳ್ಳು ಮೆರೆಯಬಹುದು, ಗೆಲ್ಲುವುದು ಸತ್ಯವೇ:

ಜಗತ್ತಿನ ಇತಿಹಾಸದಲ್ಲಿ ಸುಳ್ಳು ಶಾಶ್ವತವಾಗಿ ಗೆದ್ದ ಉದಾಹರಣೆ ಇಲ್ಲ. ಕೆಲವೊಮ್ಮೆ ಸತ್ಯ ಮೌನವಾಗಿದ್ದಾಗ ಸುಳ್ಳು ಊರ ತುಂಬಾ ಮೆರೆಯಬಹುದು. ಆದರೆ ಕೊನೆಗೆ ಗೆಲ್ಲುವುದು ಸತ್ಯವೇ ಎಂದು ಸಿ.ಟಿ.ರವಿ ಹೇಳಿದರು.

ತಮ್ಮ 20 ವರ್ಷಗಳ ಅಧಿಕಾರವಧಿಯಲ್ಲಿ ರಸ್ತೆ, ನೀರಾವರಿ, ಸಮುದಾಯ ಭವನ, ಅಂಬೇಡ್ಕರ್ ಭವನ ಹಾಗೂ ದೇವಸ್ಥಾನ ಗಳ ಜೀರ್ಣೋದ್ಧಾರ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದೇನೆ. ತಾವು ಮಾಡಿದ ಕೆಲಸಗಳೇ ತಮ್ಮ ಸಾಧನೆಗೆ ಸಾಕ್ಷಿ ಎಂದರು.

ಬಿಜೆಪಿ ಮುಖಂಡರಾದ ಬೆಳವಾಡಿ ರವೀಂದ್ರ, ಚಂದ್ರಶೇಖರ್‌, ಕೋಟೆ ರಂಗಣ್ಣ, ತಾಪಂ ಮಾಜಿ ಅಧ್ಯಕ್ಷರಾದ ಈಶ್ವರಹಳ್ಳಿ ಮಹೇಶ್‌, ಬಸವರಾಜಣ್ಣ, ಎಸ್ಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್‌, ರಾಜು, ಪ್ರಕಾಶ್‌, ಬಾಬು ಸೇರಿದಂತೆ ಹಲವರು ಇದ್ದರು.

-- ಬಾಕ್ಸ್‌ --

ಅಧಿಕಾರಕ್ಕಾಗಿ ರಾಜಕಾರಣ ಮಾಡಿಲ್ಲ

ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದವನಲ್ಲ. ಸಿದ್ಧಾಂತ ಹಾಗೂ ಜನಪರ ಕಾರ್ಯಗಳಿಗಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಅಧಿಕಾರಕ್ಕಿಂತ ಸಿದ್ಧಾಂತ ಹಾಗೂ ಜನರಿಗಾಗಿ ಮಾಡುವ ಕೆಲಸವೇ ಮುಖ್ಯ ಎಂಬ ನಿಲುವಿನೊಂದಿಗೆ ರಾಜಕಾರಣ ಮಾಡಿ ದ್ದೇನೆ. ಬಿಜೆಪಿಯಲ್ಲೇ ಹುಟ್ಟಿ ಬಿಜೆಪಿಯಲ್ಲೇ ಸಾಯುತ್ತೇನೆ ಎಂಬುದು ನನ್ನ ರಾಜಕೀಯ ನಿಲುವು ಎಂದು ಹೇಳಿದರು.

ಅಧಿಕಾರಕ್ಕಾಗಿ ರಾಜಕಾರಣ ಮಾಡಿದ್ದರೆ ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸಬಹುದಿತ್ತು. ಆದರೆ ಸಿದ್ಧಾಂತಕ್ಕೆ ಬದ್ಧವಾಗಿ ರಾಜಕಾರಣ ಮಾಡಿದ್ದೇನೆ. ರಾಜಕೀಯ ವಿರೋಧಿಗಳೊಂದಿಗೆ ಭಿನ್ನಾಭಿಪ್ರಾಯವಿದ್ದರೂ ವೈಯಕ್ತಿಕ ದ್ವೇಷ ಬೆಳೆಸಿಕೊಂಡಿಲ್ಲ. ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ. ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣಬೇಕು ಎಂಬ ತತ್ವದೊಂದಿಗೆ ಕೆಲಸ ಮಾಡಿದ್ದೇನೆ ಎಂದರು.

ರಾಜಕೀಯದಲ್ಲಿ ಸೋಲು-ಗೆಲುವು ಸಹಜ. ಸೋಲನ್ನು ಸ್ವೀಕರಿಸಿದ್ದೇನೆ, ಆದರೆ ಸೋಲಿನ ಬಳಿಕ ರಾಜಕೀಯದಿಂದ ಓಡಿ ಹೋಗಿಲ್ಲ. ಸಿದ್ಧಾಂತಕ್ಕಾಗಿ ರಾಜಕಾರಣ ಮಾಡುವವರಿಗೆ ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಶಕ್ತಿ ಇರಬೇಕು. ತಮ್ಮ ಸಿದ್ಧಾಂತವೇ ಆ ಧೈರ್ಯ ನೀಡಿದೆ ಎಂದು ಹೇಳಿದರು.---ಬಾಕ್ಸ್‌--

ಸಾಕ್ಷಿ ಗುಡ್ಡೆಗೆ ಎಷ್ಟು ಫೋಟೋ ತೋರಿಸಬೇಕು?

ಮೆಡಿಕಲ್ ಕಾಲೇಜು ಉದ್ಘಾಟನೆ ವೇಳೆ, ಡಿಸಿ ಕಚೇರಿ ಶಂಕುಸ್ಥಾಪನೆ ಸಂದರ್ಭದಲ್ಲಿ ಹಾಗೂ ಬೆಳವಾಡಿ ಬಾಗಿನ ಅರ್ಪಣೆ ವೇಳೆ ಪಕ್ಕದಲ್ಲಿ ನಿಂತುಕೊಂಡ ಫೋಟೋಗಳನ್ನು ತೋರಿಸಬೇಕಾ? ಎಂದು ಪ್ರಶ್ನಿಸಿದ ಸಿ.ಟಿ.ರವಿ, ಆತ್ಮಸಾಕ್ಷಿ ಇಲ್ಲದವರಿಗೆ ಯಾವುದೇ ಸಾಕ್ಷಿ ಕೊಟ್ಟರೂ ಒಪ್ಪಿಕೊಳ್ಳುವುದಿಲ್ಲ. ದೇವರು ಅವಕಾಶ ಕೊಟ್ಟಾಗ ಒಳ್ಳೆಯ ಕೆಲಸ ಮಾಡಬೇಕು ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋಲಕಪಳ್ಳಿ ತಾಂಡಾದಲ್ಲಿ ಶ್ರಾವಣ ಮಾಸದ ಪೂಜೆ
ಕೋಡಿಮಠದಲ್ಲಿ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮಗಳಿಗೆ ತೆರೆ