ಕನ್ನಡಪ್ರಭವಾರ್ತೆ, ತುರುವೇಕೆರೆ
ನೋಡ್ರಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಏನೇ ಆದ್ರೂ ನಾನೇ ಅಭ್ಯರ್ಥಿ. ಇದರ ಬಗ್ಗೆ ನಮ್ಮ ಕಾರ್ಯಕರ್ತರು ಅನುಮಾನಪಡುವುದೇ ಬೇಡ. ನಾನು ನಿಂತೇ ನಿಲ್ತೀನಿ. ನಿಮ್ಮೇಲ್ಲರ ಆಶೀರ್ವಾದದಿಂದ ನಾನು ಗೆದ್ದೇ ಗೆಲ್ತೀನಿ. ಯಾರೋ ಯೋಚ್ನೇ ಮಾಡಬೇಡಿ. ಹೀಗೆ ಕಡ್ಡಿ ತುಂಡಾಗುವಂತೆ ಹೇಳಿದವರು ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್.ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ಇರುವ ಅವರ ಫಾರ್ಮ್ ಹೌಸ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಆದ ಸೋಲು ಬಿಜೆಪಿ ಕಾರ್ಯಕರ್ತರಿಗೆ ನುಂಗಲಾರದ ತುಪ್ಪವಾಗಿದೆ. ಕೆಲವು ಕುತಂತ್ರದಿಂದ ನಾನು ಸೋಲಬೇಕಾಯಿತು. ಇದು ಕಾರ್ಯಕರ್ತರ ಸೋಲಲ್ಲ. ನನ್ನ ಸೋಲು. ಕೆಲವು ನಿರ್ಧಾರಗಳಿಂದ ಕೆಲವೇ ಮತಗಳ ಅಂತರದಿಂದ ಸೋತಿದ್ದೆ. ಇದರಿಂದ ಬಿಜೆಪಿ ಕಾರ್ಯಕರ್ತರಿಗೆ ಬೇಸರವಾಗಿರುವುದು ಸತ್ಯ. ಯೋಚನೆ ಮಾಡಬೇಡಿ. ಮುಂದಿನ ಚುನಾವಣೆಯಲ್ಲಿ ನಾನೇ ಬಿಜೆಪಿಯ ಕ್ಯಾಂಡಿಡೇಟ್ ಆಗ್ತೀನಿ, ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದೇ ಗೆಲ್ತೀನಿ. ಪುನಃ ತಾಲೂಕಿನಲ್ಲಿ ಬಿಜೆಪಿಯ ಬಾವುಟವನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಾವೆಲ್ಲಾ ಮಾಡೋಣ ಎಂದು ಮಸಾಲಾ ಜಯರಾಮ್ ಹೇಳಿದರು. ಈಗಾಗಲೇ ಕಾಲ ಮಿಂಚಿ ಹೋಗಿದೆ. ಈಗ ಸಮಯ ಹತ್ತಿರ ಬರುತ್ತಿದೆ. ನಾನು ನಿಮ್ಮೊಂದಿಗೆ ಸದಾ ಕಾಲ ಇರುವೆ. ಹಿಂದೆ ನಡೆದುದನ್ನು ಕಹಿ ನೆನಪೆಂದು ತಿಳಿಯಿರಿ. ಮತ್ತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದಿಂದ ಅಧಿಕಾರಕ್ಕೆ ತರೋಣ. ಎಲ್ಲರೂ ಪಕ್ಷದ ಸಂಘಟನೆಯಲ್ಲಿ ತೊಡಗೋಣ ಎಂದು ಕಿವಿಮಾತು ಹೇಳಿದರು. ಮುಂದೆ ಬಿಜೆಪಿ, ಜೆಡಿಎಸ್ ನಡುವೆ ಮೈತ್ರಿ ಇರುತ್ತದೆಯೇ?. ಎನ್ ಡಿ ಎ ಅಭ್ಯರ್ಥಿಯನ್ನಾಗಿ ಬೇರೆ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸಿದರೆ ನಿಮ್ಮ ನಿಲುವೇನು ಎಂದು ಬಿಜೆಪಿಯ ಹಲವಾರು ಕಾರ್ಯಕರ್ತರು ಮಾಜಿ ಶಾಸಕ ಮಸಾಲಾ ಜಯರಾಮ್ ರವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಮಸಾಲಾ ಜಯರಾಮ್ ಬಿಜೆಪಿಯ ಹೈಕಮಾಂಡ್ ಎಲ್ಲವನ್ನು ಗಮನಿಸುತ್ತಿದೆ. ಇಲ್ಲಿ ಗೆಲ್ಲುವ ಅಭ್ಯರ್ಥಿಗಾಗಿ ಸಮೀಕ್ಷೆ ಮಾಡಿಸುತ್ತದೆ. ಎಲ್ಲವನ್ನೂ ಹೈಕಮಾಂಡೇ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ನನ್ನನ್ನೇ ಅಖಾಡಕ್ಕೆ ಇಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಈಗಾಗಲೇ ನನಗೆ ತಾಲೂಕಿನಿಂದ ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸುವ ಸಲುವಾಗಿ ಸಾವಿರಾರು ಮಂದಿಯಿಂದ ಕರೆಗಳು ಬರುತ್ತಿವೆ. ಕೆಲವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗ್ತಾರಂತೆ ಅಂತ ಸುದ್ದಿ ಹಬ್ಬಿಸುತ್ತಿದ್ದಾರೆ. ಅದೆಲ್ಲಾ ಸುಳ್ಳು. ನನ್ನ ಬಿಜೆಪಿಯ ಕಾರ್ಯಕರ್ತರೇ ನನ್ನ ಬೆನ್ನಿಗೆ ನಿಂತಿರುವಾಗ ನಾನೇಕೆ ಬೇರೆ ಪಕ್ಷಕ್ಕೆ ಹೋಗಲಿ. ಕಾಂಗ್ರೆಸ್ ಮುಳುಗುವ ಹಡಗಾಗಿದೆ. ಕಂಡೂ ಕಂಡೂ ನಾನೇಕೆ ಕಾಂಗ್ರೆಸ್ ಗೆ ಹೋಗಲಿ ಎಂದು ಹೇಳುವ ಮೂಲಕ ಪಕ್ಷಾಂತರದ ಗುಲ್ಲಿಗೆ ತೆರೆ ಎಳೆದರು. ಮಂಡಲ ಘಟಕದ ಅಧ್ಯಕ್ಷ ಮೃತ್ಯುಂಜಯ, ಹಿರಿಯ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಅರಳಿಕೆರೆ ಶಿವಯ್ಯ, ವಿ.ಟಿ.ವೆಂಕಟರಾಮ್, ಉಗ್ರಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಅನಿತಾ ನಂಜುಂಡಯ್ಯ, ಸೋಮೇನಹಳ್ಳಿ ಜಗದೀಶ್, ಹರಿಕಾನಹಳ್ಳಿ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಡೊಂಕಿಹಳ್ಳಿ ಪ್ರಕಾಶ್, ನವೀನ್ ಬಾಬು ಸೇರಿದಂತೆ ಹಲವಾರು ಮಂದಿ ಮಾತನಾಡಿ ಮುಂಬರುವ ದಿನಗಳಲ್ಲಿ ಬಿಜೆಪಿ ವತಿಯಿಂದ ಮಸಾಲಾ ಜಯರಾಮ್ ರವರೇ ಟಿಕೇಟ್ ತರಬೇಕು. ಬಿಜೆಪಿಯ ಬಾವುಟವನ್ನು ತಾಲೂಕಿನಲ್ಲಿ ಮತ್ತು ರಾಜ್ಯದಲ್ಲಿ ಹಾರಿಸಬೇಕು ಎಂದು ಆಗ್ರಹಿಸಿದರು.