ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಕೇಂದ್ರದಲ್ಲಿ ಏ.೧೪ ರಂದು ಅಂಬೇಡ್ಕರ್ ೧೩೪ನೇ ಜಯಂತಿ ಅದ್ಧೂರಿಯಾಗಿ ಆಚರಿಸಲು ದಲಿತ ಒಕ್ಕೂಟದ ಬೆಂಬಲವಿದೆ, ಆದರೆ ಸ್ಥಳೀಯ ಶಾಸಕ ಕೊತ್ತೂರು ಮಂಜುನಾಥ್ ವೇದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ವಿರೋಧಿಸುವುದಾಗಿ ರಾಜ್ಯ ದಲಿತ ಸಿಂಹ ಸೇನೆ ಸಂಸ್ಥಾಪಕ ಅಧ್ಯಕ್ಷ ಹೂವಳ್ಳಿ ಪ್ರಕಾಶ್ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಕೊತ್ತೂರು ಮಂಜುನಾಥ್ ಸಂವಿಧಾನಕ್ಕೆ ವಿರುದ್ದವಾಗಿ ಕಳೆದ ೨೦೧೩ರಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಂವಿಧಾನಕ್ಕೆ ವಿರುದ್ದವಾಗಿ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಶಾಸಕರಾಗಿದ್ದರು, ಆಗ ಸುಳ್ಳು ಜಾತಿ ಪತ್ರ ಸಲ್ಲಿಸಿ ಮೀಸಲಾತಿ ಕಸಿದಿದ್ದರು. ಇದನ್ನು ಪ್ರಶ್ನಿಸಿದಂತ ದಲಿತ ಸಂಘಟನೆಗಳ ಮುಖಂಡರನ್ನು ಅಪಮಾನಿಸಿದ್ದರು ಎಂದು ನೆನಪಿಸಿದರು.ಕೋಲಾರ ಜಿಲ್ಲೆಗೆ ಅಪಮಾನ
ಈ ಸಂಬಂಧ ವಿವಿಧ ಹಂತದ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆದು ಅಂತಿಮವಾಗಿ ನ್ಯಾಯಾಲಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರವೆಂದು ರುಜುವಾತಾಗಿದ್ದು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ದಲಿತರ ಚಳವಳಿಯ ತವರೂರಾದ ಕೋಲಾರದ ಜಿಲ್ಲೆಗೆ ಅಪಮಾನವಾಗಿದೆ ಎಂದು ಕಿಡಿ ಕಾರಿದರು,ವೇದಿಕೆಯ ಕಾರ್ಯಕ್ರಮಕ್ಕೆ ಬಹಿಷ್ಕಾರ
ಸಂವಿಧಾನದ ತತ್ವ ಸಿದ್ದಾಂತಗಳಿಗೆ ವಿರುದ್ದವಾಗಿ ಮೀಸಲಾತಿ ಕಸಿದಿರುವವರು ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದ ವೇದಿಕೆಯನ್ನು ಅಲಂಕರಿಸಲು ಯೋಗ್ಯರಲ್ಲ. ಇದು ಅಂಬೇಡ್ಕರ್‌ರಿಗೆ ಅಪಮಾನ ಮಾಡಿದಂತೆ. ಹಾಗಾಗಿ ಮಹಾ ಒಕ್ಕೂಟವು ವೇದಿಕೆಯ ಕಾರ್ಯಕ್ರಮವನ್ನು ಬಹಿಷ್ಕರಿಸಿ ದೂರ ಉಳಿಯಲಿದೆ ಎಂದು ಸ್ಪಷ್ಟಪಡಿಸಿದರು.ಈ ಸಂದರ್ಭದಲ್ಲಿ ದಲಿತ ನಾರಾಯಣಸ್ವಾಮಿ, ಬಂಗಾರಪೇಟೆ ಹುಣಸನಹಳ್ಳಿ ವೆಂಕಟೇಶ್, ಬಂಗಾರಪೇಟೆಯ ರೈತ ಮುಖಂಡ ಚಿಕ್ಕನಾರಾಯಣಪ್ಪ, ಮುನಿರಾಜು, ವಿ.ಅಂಬರೀಷ್, ಶ್ರೀನಿವಾಸ್, ಪಿ.ವಿ.ಸಿ.ಮುನಿಯಪ್ಪ, ರಾಮಚಂದ್ರ, ರಾಜಶೇಖರ್, ಮಂಜುನಾಥ್, ತಿಪ್ಪಯ್ಯ ಇದ್ದರು.