ಶಿವಾನಂದ ಗೊಂಬಿ
ಉತ್ತರ ಕರ್ನಾಟಕದ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಮತ್ತೊಂದು ಬೆಳಗಾವಿ ಅಧಿವೇಶನಕ್ಕೆ ಡಿ. 2ರಂದು ಮುಹೂರ್ತ ನಿಗದಿಯಾಗಿದೆ. ಪ್ರತಿ ಸಲ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳುವುದು ಇರಲಿ, ಕನಿಷ್ಠ ಪಕ್ಷ ಇಲ್ಲಿನ ಸಮಸ್ಯೆಗಳ ಬಗ್ಗೆ ಸಮರ್ಪಕ ಚರ್ಚೆ ಕೂಡ ನಡೆಯುವುದಿಲ್ಲ. ಅಧಿವೇಶನದಿಂದ ಸಿಗುವುದು ಬರೀ ಆಶ್ವಾಸನೆಯಷ್ಟೇ. ಈ ಸಲವಾದರೂ ಬರೀ ಆಶ್ವಾಸನೆ ಬೇಡ, ಗಟ್ಟಿ ನಿರ್ಧಾರ ಕೈಗೊಂಡು ಪ್ರಾದೇಶಿಕ ಅಸಮಾನತೆ ದೂರವಾಗಲಿ ಎಂಬುದು ಈ ಭಾಗದ ಜನರು ಸರ್ಕಾರದ ಮೇಲಿಟ್ಟಿರುವ ನಿರೀಕ್ಷೆಯಾಗಿದೆ.
ಪ್ರಾದೇಶಿಕ ಅಸಮಾನತೆ ದೂರವಾಗಬೇಕು ಹಾಗೂ ಈ ಭಾಗದ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ಅಧಿವೇಶನದ ಮೂಲ ಉದ್ದೇಶ. ಆದರೆ, ಪ್ರತಿ ಸಲವೂ ಇದು ಕಾಟಾಚಾರಕ್ಕೆಂಬಂತೆ ನಡೆಯುತ್ತದೆ. ಅಧಿವೇಶನದ ಕೊನೆಯ ದಿನ ಮುಖ್ಯಮಂತ್ರಿಗಳು ಒಂದಿಷ್ಟು ಘೋಷಣೆಗಳನ್ನು ಮಾಡುತ್ತಾರೆ. ಆದರೆ, ಯಾವೊಂದು ಘೋಷಣೆಯೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂಬುದು ಅಷ್ಟೇ ಸ್ಪಷ್ಟ. ಈ ಸಲವಾದರೂ ಅಧಿವೇಶನ ನಡೆಯುವ 9 ದಿನ ಈ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಉತ್ತರ ಕರ್ನಾಟಕದ ಜನರ ಒತ್ತಾಸೆಯಾಗಿದೆ.ಏನೇನು ನಿರೀಕ್ಷೆ..
ಮಹದಾಯಿ ನ್ಯಾಯಾಧಿಕರಣ ನಿಗದಿ ಮಾಡಿದ ರಾಜ್ಯದ ಪಾಲಿನ ನೀರು ಬಳಕೆಗೆ ಅಡ್ಡಿಯಾಗಿರುವ ಕೇಂದ್ರ ಪರಿಸರ ಇಲಾಖೆ ಮತ್ತು ವನ್ಯಜೀವಿ ಮಂಡಳಿಯ ಅನುಮತಿ ತೀರ್ಪು ಬಂದು 9 ವರ್ಷವಾದರೂ ಸಿಗುತ್ತಿಲ್ಲ. ಈ ಬಗ್ಗೆ ಪಕ್ಷಾತೀತ ಚರ್ಚೆ ನಡೆದು ಪರಿಹಾರ ಕಂಡುಕೊಳ್ಳಬೇಕು.
ಪ್ರತಿ ವರ್ಷ ಪ್ರವಾಹಕ್ಕೆ ಕಾರಣವಾಗುತ್ತಿರುವ ಭೀಮಾ, ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಹಾಗೂ ಬೆಣ್ಣಿಹಳ್ಳದ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸುವ ಯೋಜನೆಗೆ ಚಾಲನೆ ಸಿಗಬೇಕಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ನಿಗದಿಪಡಿಸಲಾದ ಕಾಲಮಿತಿ ಮುಗಿದು ಎರಡೂವರೆ ದಶಕಗಳೇ ಕಳೆದರೂ ಇನ್ನೂ ಪೂರ್ಣಪ್ರಮಾಣದ ಕಾಮಗಾರಿ ಶುರುವಾಗಿಲ್ಲ.
ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಅಣೆಕಟ್ಟು ನಿರ್ಮಿಸುವ ಯೋಜನೆ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆದು ಪರಿಹಾರ ಕಂಡುಕೊಳ್ಳಬೇಕಿದೆ.
ಉತ್ತರ ಕರ್ನಾಟಕದವರೇ ಕೈಗಾರಿಕಾ ಸಚಿವರಾಗಿದ್ದರೂ ಈ ಭಾಗಕ್ಕೆ ನಿರೀಕ್ಷಿತ ಮಟ್ಟದಲ್ಲಿ ಕೈಗಾರಿಕೆಗಳು ಬರುತ್ತಿಲ್ಲ. ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಈ ಭಾಗ ವಿಫಲವಾಗುತ್ತಿದ್ದರೆ, ಅದರಲ್ಲಿ ಸರ್ಕಾರದ ವೈಫಲ್ಯವೂ ಇದೆ. ಈ ಬಗ್ಗೆಯೂ ಚರ್ಚೆ ನಡೆಯಬೇಕು.
ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ ಪೂರಕವಾಗಿ ಧಾರವಾಡದಲ್ಲಿ ಕೈಗಾರಿಕಾ ನೋಡ್ ಸ್ಥಾಪಿಸಬೇಕಿದೆ. ಕೈಗಾರಿಕಾ ಕ್ಲಸ್ಟರ್‌ಗೆ ಭೂಮಿ ಮೀಸಲಿಡಬೇಕು. ಎಫ್‌ಎಂಸಿಜಿ (FMCG) ಕ್ಲಸ್ಟರ್‌ಗೆ ಒಪ್ಪಂದವಾದರೂ ಸರ್ಕಾರ ನಿಗದಿಪಡಿಸಿದ ಭೂಮಿಯ ದುಬಾರಿ ದರದಿಂದಾಗಿ ಯಾವೊಂದು ಕೈಗಾರಿಕೆಯೂ ಬರುತ್ತಿಲ್ಲ. ಈ ಬಗ್ಗೆಯೂ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ.
- ಕಚೇರಿಗಳ ಸ್ಥಳಾಂತರ:ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರಕ್ಕೆ ಅಡ್ಡಿಯಾಗುತ್ತಿರುವುದೇನು ಎಂಬುದೇ ತಿಳಿಯುತ್ತಿಲ್ಲ. ಕಚೇರಿಗಳ ಸ್ಥಳಾಂತರ ಆಗಿಯೇ ಇಲ್ಲ ಅಂತೇನೂ ಇಲ್ಲ; ಆದರೆ ಈ ಭಾಗದ ಅಭಿವೃದ್ಧಿಗೆ ಪೂರಕವಾಗುವ ಪ್ರಮುಖ ಮಂತ್ರಾಲಯಗಳನ್ನೇ ಇಲ್ಲಿಗೆ ಸ್ಥಳಾಂತರ ಮಾಡಬೇಕು ಎಂಬುದು ಜನರ ಕೂಗಾಗಿದೆ.
- ಬರ ಪರಿಹಾರ:ಬರದಿಂದಾಗಿ ಇಡೀ ನಾಡೇ ತತ್ತರಿಸಿದೆ. ಅದರಲ್ಲೂ ಉತ್ತರ ಕರ್ನಾಟಕ ಬರದಿಂದ ಅಕ್ಷರಶಃ ಕಂಗೆಟ್ಟಿದೆ. ರೈತಾಪಿ ವರ್ಗ ಬೆಳೆ ಪರಿಹಾರಕ್ಕೆ ಆಗ್ರಹಿಸುತ್ತಿದ್ದರೂ ಆಡಳಿತ ಪಕ್ಷಕ್ಕೆ ಕೇಳಿಸುತ್ತಲೇ ಇಲ್ಲ. ಈ ಸಲವಾದರೂ ಚರ್ಚೆಯಾಗಿ ರೈತರಿಗೆ ಸೂಕ್ತ ಪರಿಹಾರ ಸಿಗಬೇಕಿದೆ.
ಧಾರವಾಡ-ಬೆಳಗಾವಿ ರೈಲು ಮಾರ್ಗ:ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗವನ್ನು ಕೇಂದ್ರ ಸರ್ಕಾರ ಘೋಷಿಸಿ ತನ್ನ ಕೆಲಸ ಮಾಡಲು ಸಿದ್ಧವಾಗಿದೆ. ಆದರೆ, ಭೂಸ್ವಾಧೀನ ಮಾಡಿ ಭೂಮಿ ನೀಡಬೇಕಾದ ವಿಷಯದಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಘೋಷಣೆಯಾಗಿ ಏಳು ವರ್ಷವಾದರೂ ಕಾಮಗಾರಿ ಮಾತ್ರ ಶುರುವಾಗಿಲ್ಲ. ರೈಲು ಯೋಜನೆಗಳಿಗೆ ರಾಜ್ಯ ಸರ್ಕಾರ ತ್ವರಿತ ಸಹಕಾರ ನೀಡುವ ಮೂಲಕ ಕಾಮಗಾರಿ ಆರಂಭವಾಗುವಂತೆ ಮಾಡಬೇಕಿದೆ.
-ಅನುಷ್ಠಾನದ ಶ್ವೇತಪತ್ರ:ಕಳೆದ 14 ವರ್ಷಗಳಲ್ಲಿ ಉತ್ತರ ಕರ್ನಾಟಕದ ಬಗ್ಗೆ ಅಧಿವೇಶನದಲ್ಲಿ ಘೋಷಿಸಿದ ಯೋಜನೆಗಳು ಹಾಗೂ ಅವುಗಳ ಅನುಷ್ಠಾನದ ಕುರಿತು ಈ ಅಧಿವೇಶನದಲ್ಲಿ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂಬುದು ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದೆ.
ಕಬ್ಬು ಬೆಳೆಗಾರರ ಸಮಸ್ಯೆಯಂತೂ ಹೇಳತಿರದು. ರಾಜ್ಯ ಸರ್ಕಾರದ ಪ್ರೋತ್ಸಾಹ ಧನ, ಕೇಂದ್ರ ಎಫ್‌ಆರ್‌ಪಿಗಾಗಿ ನಡೆಸುತ್ತಿರುವ ಹೋರಾಟದ ಕಿಚ್ಚು ಅಕ್ಷರಶಃ ಭುಗಿಲೆದ್ದಿದೆ. ಇದರ ಬಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೂ ತಟ್ಟಿದೆ. ಈ ಅಧಿವೇಶನದಲ್ಲಿ ಪ್ರೋತ್ಸಾಹ ಧನ ಹಾಗೂ ಸಕ್ಕರೆ ಕಾರ್ಖಾನೆಗಳ ಮೇಲೆ ಸರ್ಕಾರದ ಹಿಡಿತದ ಬಗ್ಗೆ ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳುತ್ತದೆಯೇ?ಪ್ರತಿ ವರ್ಷ ಕೋಟ್ಯಂತರ ಹಣ ಖರ್ಚು ಮಾಡಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತದೆ. ಅಧಿವೇಶನದ ಫಲಿತಾಂಶ ಬರೀ ಗದ್ದಲ, ಪ್ರತಿಭಟನೆಗೆ ಸೀಮಿತವಾಗದೇ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಾಣುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿವೇಶನ ನಡೆಸಲಿ.
ಸಂದೀಪ ಬಿಡಸಾರಿಯಾ, ಅಧ್ಯಕ್ಷರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ