ಇನ್ಮುಂದೆ ಮದುವೆ ದಿಬ್ಬಣಗಳ ಫೋಟೋ, ವಿಡಿಯೋ ಚಿತ್ರೀಕರಣ ಮಾಡಲ್ಲ

KannadaprabhaNewsNetwork |  
Published : Jun 07, 2026, 02:15 AM IST
ಕಾರವಾರ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. | Kannada Prabha

ಸಾರಾಂಶ

ಮದುವೆ ಸಮಾರಂಭಗಳಲ್ಲಿ ಮದುಮಗನ ಮನೆಗೆ ಸಾಗುವ ದಿಬ್ಬಣದ (ಬಾರಾತ್) ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ಇನ್ನು ಮುಂದೆ ಮಾಡದಿರಲು ಕಾರವಾರ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿರ್ಧಾರ ಕೈಗೊಂಡಿದೆ.

ಕಾರವಾರ: ಮದುವೆ ಸಮಾರಂಭಗಳಲ್ಲಿ ಮದುಮಗನ ಮನೆಗೆ ಸಾಗುವ ದಿಬ್ಬಣದ (ಬಾರಾತ್) ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ಇನ್ನು ಮುಂದೆ ಮಾಡದಿರಲು ಕಾರವಾರ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿರ್ಧಾರ ಕೈಗೊಂಡಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಸದಸ್ಯರು ಮಾತನಾಡಿ, ಛಾಯಾಗ್ರಾಹಕರು ಎದುರಿಸುತ್ತಿರುವ ಭದ್ರತಾ ಸಮಸ್ಯೆಗಳು ಹಾಗೂ ಸಮಯದ ಅಭಾವದ ಕುರಿತು ತಮ್ಮ ಅಳಲು ತೋಡಿಕೊಂಡರು.

ಕಾರವಾರ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಂತಾನ್ ಫರ್ನಾಂಡೀಸ್, ಈಚಿನ ದಿನಗಳಲ್ಲಿ ಮದುವೆ ದಿಬ್ಬಣ ಕಾರ್ಯಕ್ರಮಗಳು ತಡರಾತ್ರಿ ವರೆಗೂ ಮುಂದುವರಿಯುತ್ತಿವೆ. ಇದರಿಂದಾಗಿ ಫೋಟೋಗ್ರಾಫರ್‌ಗಳು ಯಾವುದೇ ಸಮಯದ ಮಿತಿಯಿಲ್ಲದೆ, ವಿಶ್ರಾಂತಿ ಇಲ್ಲದೆ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಲ್ಲದೆ, ತಡರಾತ್ರಿಯ ದಿಬ್ಬಣಗಳಲ್ಲಿ ಕೆಲವೆಡೆ ಫೋಟೋಗ್ರಾಫರ್‌ಗಳು ಹಾಗೂ ವಿಡಿಯೋಗ್ರಾಫರ್‌ಗಳೊಂದಿಗೆ ಕೆಲವರು ಅತ್ಯಂತ ಅನುಚಿತವಾಗಿ ವರ್ತಿಸಿದ ಘಟನೆಗಳು ನಡೆದಿವೆ. ಕೆಲವು ಸಂದರ್ಭಗಳಲ್ಲಿ ಲಕ್ಷಾಂತರ ರು. ಬೆಲೆಬಾಳುವ ಕ್ಯಾಮೆರಾಗಳನ್ನು ಕಸಿದುಕೊಳ್ಳುವ ಹಾಗೂ ಹಾನಿ ಮಾಡುವ ಯತ್ನಗಳು ನಡೆದಿವೆ ಎಂದು ಅಸೋಸಿಯೇಷನ್ ಸದಸ್ಯರು ತೀವ್ರ ಆತಂಕ ವ್ಯಕ್ತಪಡಿಸಿದರು‌.

ಇನ್ನು ಮುಂದೆ ಕೇವಲ ಮದುವೆ ಹಾಲ್‌ನಲ್ಲಿ ಮಾತ್ರ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ನಡೆಸಲಾಗುವುದು. ತಡರಾತ್ರಿ ನಡೆಯುವ ಮದುಮಗನ ದಿಬ್ಬಣ ಕಾರ್ಯಕ್ರಮಗಳಿಗೆ ಚಿತ್ರೀಕರಣಕ್ಕೆ ತೆರಳದಿರಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಫೋಟೋಗ್ರಫಿ ಸೇವೆಗಳ ದರ ಏರಿಕೆ ಮಾಡುತ್ತಿರುವ ಕುರಿತು ಮಾಹಿತಿ ನೀಡಿದ ಸಂಘದ ಮುಖಂಡರು, ಪಾಸ್‌ಪೋರ್ಟ್ ಸೈಜ್ ಫೋಟೋ ಸೇರಿದಂತೆ ವಿವಿಧ ಫೋಟೋಗ್ರಫಿ ಸೇವೆಗಳ ದರವನ್ನು ಶೀಘ್ರದಲ್ಲೇ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ರವಿ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಅನಂತ ಪೈ, ಕಾರ್ಯದರ್ಶಿ ಜಯಪ್ರಕಾಶ್ ಗೋಸಾವಿ ಹಾಗೂ ಸದಸ್ಯರಾದ ಅನಿಲ್ ನಾಯ್ಕ, ಮನೋಜ ನಾಯ್ಕ, ಪ್ರಮೋದ ನಾಯ್ಕ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಅರ್ಧ ತಾಸು ಸತತ ಮಳೆ: ಹೊಳೆಯಾದ ಮುಖ್ಯರಸ್ತೆ
ಯಡ್ತಾರೆ-ಕಬ್ಬರ್ಗಿಗೆ ರಸ್ತೆ, ಬಸ್ ಸೌಕರ್ಯ ಕಲ್ಪಿಸಲು ಒತ್ತಾಯ