ಕನ್ನಡಪ್ರಭ ಪ್ರಕಟಿಸಿದ್ದ ವರದಿಯ ಫಲಶೃತಿ । ಶಾಲೆಯ 200 ಮೀ. ವ್ಯಾಪ್ತೀಲಿ ನಿರ್ಬಂಧ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಪರಿಮಿತಿ 200 ಮೀಟರ್ ಒಳಗೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ವೇಳೆ ಬೆಳಿಗ್ಗೆ 8ರಿಂದ 10.30ರವರೆಗೆ ಹಾಗೂ ಶಾಲೆಯಿಂದ ನಿರ್ಗಮಿಸುವ ವೇಳೆ ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಎಲ್ಲಾ ರೀತಿಯ ಭಾರಿ ವಾಹನಗಳ (ಟಿಪ್ಪರ್, ಭಾರಿ ಲಾರಿಗಳು ಹಾಗೂ ಇತರೆ ಭಾರಿ ಸರಕು ಸಾಗಣಿಕೆ ವಾಹನಗಳು) ಸಂಚಾರ/ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಶ್ರೀರೂಪಾ ಆದೇಶ ಹೊರಡಿಸಿದ್ದಾರೆ.‘ಇಂದು ಶಾಲಾರಂಭ: ಟಿಪ್ಪರ್ ಹಾವಳಿಗೆ ಸಿಗುವುದೇ ಮುಕ್ತಿ?’ ಎಂಬ ಶೀರ್ಷಿಕೆಯಡಿ ಜೂ.1ರಂದು ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಇದರ ಫಲಶೃತಿಯಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಸೂಚಿತ ಸಮಯವಲ್ಲದೆ ಇನ್ನುಳಿದ ಸಮಯದಲ್ಲಿಯೂ ಸಹ ಶಾಲಾ ಪರಿಮಿತಿಯಲ್ಲಿ ಸಂಚರಿಸುವ ವಾಹನಗಳು 30 ಕಿ.ಮೀ ವೇಗದ ಮಿತಿಯಲ್ಲಿರಬೇಕು. ವಾಹನಗಳು ಸಾಮರ್ಥ್ಯಕಿಂತ ಹೆಚ್ಚಿನ ಭಾರವನ್ನು ಸಾಗಿಸಬಾರದು. ಶಾಲಾ ಪರಿಮಿತಿಯಲ್ಲಿ ಸಂಚರಿಸುವ ವಾಹನಗಳು ಕರ್ಕಶ (ಹಾರ್ನ್) ಶಬ್ಧಗಳನ್ನು ಮಾಡಬಾರದು. ಶಾಲಾ ಪರಿಮಿತಿಯಲ್ಲಿ ಯಾವುದೇ ಭಾರಿ ವಾಹನಗಳನ್ನು ನಿಲ್ಲಿಸಬಾರದು ಎಂಬ ಷರತ್ತುಗಳನ್ನು ವಿಧಿಸಿದ್ದಾರೆ.