ಸಿದ್ದರಾಮಯ್ಯ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ: ಯತೀಂದ್ರ ಸಿದ್ದರಾಮಯ್ಯ

KannadaprabhaNewsNetwork |  
Published : Jun 08, 2026, 04:00 AM IST
ಡಾ.ಯತೀಂದ್ರ ಸಿದ್ಧರಾಮಯ್ಯ ಜಿಲ್ಲಾ ಕುರುಬ ಸಮಾಜದ ಪ್ರತಿಭಾ ಪುರಸ್ಕಾರದಲ್ಲಿ ಭಾಗಿ | Kannada Prabha

ಸಾರಾಂಶ

ಜಿಲ್ಲಾ ಕುರುಬ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಲೋಕಮಾತಾ ಅಹಲ್ಯಾಬಾಯಿ ಹೊಳ್ಕರ್‌ 301ನೇ ಜಯಂತಿ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿಕೊಂಡು ಬಂದವರು. ಶೋಷಿತ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎನ್ನುವ ಸಂವಿಧಾನದ ಆಶಯಗಳ ಕನಸುಗಾರ. ಬೇರೆ ಯಾರೂ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜರುಗಿದ ಜಿಲ್ಲಾ ಕುರುಬ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಲೋಕಮಾತಾ ಅಹಲ್ಯಾಬಾಯಿ ಹೊಳ್ಕರ್‌ 301ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಅಹಲ್ಯಾಬಾಯಿ ಹೊಳ್ಕರ್‌ ಅವರನ್ನು ರಾಜಮಾತೆ ಎಂದು ಕರೆಯುತ್ತೇವೆ. ಅವರು ಸಾಮಾನ್ಯರಲ್ಲ ಅಪ್ರತಿಮ ಹೋರಾಟಗಾರ್ತಿ, ಶ್ರೇಷ್ಠ ಮಹಿಳೆ. ನಮ್ಮ ಸಮಾಜದ ಭವಿಷ್ಯ ಭದ್ರವಾಗಿರಬೇಕಾದರೆ, ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಬೇಕು. ಯಾವುದೇ ಸಮಾಜ ಬೆಳೆಯಬೇಕಾದರೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಮೂರನ್ನು ಅವಶ್ಯವಾಗಿ ಮಾಡಬೇಕು. ಕಷ್ಟವಾದರೂ ಪರವಾಗಿಲ್ಲ, ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಆ ಮಕ್ಕಳು ಉನ್ನತ ಹುದ್ದೆ ಪಡೆದು ತನ್ನ ಕುಟುಂಬ ಜೊತೆಗೆ ಇಡೀ ಸಮಾಜವನ್ನೇ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.ಜಿಲ್ಲೆಯಲ್ಲಿ 2.5 ಲಕ್ಷ ಕುರುಬ ಸಮುದಾಯ ಇದ್ದರೂ ಒಬ್ಬರೇ ಒಬ್ಬರು ಶಾಸಕರಾಗದೆ ಇರುವುದು ದುರಂತ. ನಾವು ಜಾಗೃತರಗಿ, ಎಲ್ಲ ಕ್ಷೇತ್ರದಲ್ಲೂ ಬೆಳವಣಿಗೆ ಕಾಣಬೇಕು. ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಮಾತನಾಡಿ, ಹೆಣ್ಣುಮಕ್ಕಳಿಗೆ ಬಹಳಷ್ಟು ಜವಾಬ್ದಾರಿ ಇರುತ್ತೆ. ಡಾ.ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರ ಪ್ರತಿಬಿಂಬವಾಗಿದ್ದೀರಿ. ಯಾವುದೇ ಸಮಾಜ ಮುಂದೆ ಸಾಗಬೇಕಾದರೆ ಆ ಸಮಾಜದ ಹೆಣ್ಮಕ್ಕಳು ಬೆಳೆದಾಗಲೇ ಸಾಧ್ಯ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಜಯಪುರದಲ್ಲಿ ರಾಜಮಾತೆ ಅಹಲ್ಯಾಬಾಯಿ ಹೊಳ್ಕರ್‌ ಅವರ ಪ್ರತಿಮೆ ನಿರ್ಮಿಸಿರುವುದು ಹೆಮ್ಮೆಯಾಗಿದೆ. ಯಾರಲ್ಲಿ ಮಾತೃ ಹೃದಯ ಇರುತ್ತದೆಯೋ ಅವರು ರಾಜಕೀಯದಲ್ಲಿ ಭವಿಷ್ಯ ಕಟ್ಟುಕೊಳ್ಳುತ್ತಾರೆ. ಡಾ.ಯತೀಂದ್ರ ಅವರಲ್ಲಿ ಆ ಗುಣ ಇದೆ ಎಂದರು.

ಗೋಳಸಾರದ ಅಭಿನವ ಪುಂಡಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಉಮೇಶ ಮೇಟಿ, ಮಹಾಪೌರ ಎಂ.ಎಸ್.ಕರಡಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕ್ಕಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಸುಜಾತ ಕಳ್ಳಿಮನಿ, ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ, ಮೋಹನ ದಳವಾಯಿ, ಸಿದ್ದು ಬಾವಿಕಟ್ಟಿ, ಈರಣ್ಣ ರಾಕುಂಪಿ, ಮಲ್ಲು ಬಿದರಿ, ವಿಜಯ ಭಮಗೊಂಡ, ರವಿ ಕಿತ್ತೂರ, ಪ್ರೊ.ಸುನಿಲ ತೊಂಟಾಪುರ, ರಾಜು ಕಗ್ಗೊಡ, ಬನ್ನೆಪ್ಪ ಜೋಗಿ, ಬಸವರಾಜ ಕಂಕಣವಾಡಿ, ವಿಠ್ಠಲ ಬಳ್ಳೂರ, ಸದಾಶಿವ ಪೂಜಾರಿ, ಚಂದ್ರಶೇಖರ ನುಗ್ಗಲಿ, ಅಧಿಕಾರಿಗಳಾದ ಪುಂಡಲೀಕ ಮಾನವರ, ಈರಣ್ಣ ಆಶಾಪುರ, ಸಿದ್ದಪ್ಪ ಬೆಂಜಗೇರಿ, ಮಹಾದೇವ, ಡಾ.ಸಂಗಣ್ಣ ಲಕ್ಕಣ್ಣವರ, ಡಾ.ಗೌತಮ ವಗ್ಗರ, ಡಾ.ರವೀಂದ್ರ ಮದ್ಧರಕಿ ಭಾಗವಹಿಸಿದ್ದರು.

ಸಿದ್ದರಾಮಯ್ಯ ಅವರ ಸ್ಥಾನ ತುಂಬುವುದು ಅಷ್ಟು ಸುಲಭದ ಕೆಲಸವಲ್ಲ, ಆದರೂ ನಾನು ಆ ಪ್ರಯತ್ನ ಮಾಡುತ್ತೇನೆ. ಎಲ್ಲ ಶೋಷಿತ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ.

- ಯತೀಂದ್ರ ಸಿದ್ದರಾಮಯ್ಯ ನಗರಾಭಿವೃದ್ಧಿ ಸಚಿವರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಖಾಸಗಿ ಶಾಲೆ ಬಸ್‌
ಜಮಖಂಡಿ ವಿವಿಧೆಡೆ ಸರಿದ ಮಳೆ, ತಂಪಾದ ಇಳೆ