ಮಣಿಪಾಲ : ಯಾವುದೇ ಸಮುದಾಯಕ್ಕೆ ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಸಾಧ್ಯವಿಲ್ಲ, ಅದಕ್ಕೆ ಕೆಲವು ಕಾನೂನಿನ ತಿದ್ದುಪಡಿಗಳು ಆಗಬೇಕಾಗುತ್ತದೆ, ನೇಮಕಾತಿಯ ಸಂದರ್ಭದಲ್ಲಿ ಮೀಸಲಾತಿಯಲ್ಲಿಯೂ ರೋಸ್ಟರ್ ಮತ್ತು ಮೆರಿಟ್ ಕೂಡ ಬಹಳ ಮುಖ್ಯವಾಗುತ್ತದೆ ಎಂದು ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಅವರು ಬುಧವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಬಳಿ, ತಮ್ಮ ಸಮುದಾಯದ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕೊರಗ ಸಮುದಾಯದವರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿ ಮಾತನಾಡಿದರು.
ಸರ್ಕಾರಿ ಇಲಾಖೆಯಲ್ಲಿ ನೇರ ನೇಮಕಾತಿ, ಕೃಷಿ ಭೂಮಿ ಮಂಜೂರು ಇತ್ಯಾದಿ ಬೇಡಿಕೆಗಳ ಜೊತೆ, 10 ದಿನಗಳಿಂದ ಮಳೆಗಾಳಿಯ ನಡುವೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ತಮ್ಮ ಸಮದಾಯಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸುಶೀಲ ನಾಡ ಅವರು ಗದ್ಗದಿತರಾಗಿ ಹೇಳಿದರು.
ಪ್ರತಿಭಟನಾಕಾರರ ಬೇಡಿಕೆಗಳ ಬಗ್ಗೆಸಹಾನುಭೂತಿ ವ್ಯಕ್ತಪಡಿಸಿದ ಯು.ಟಿ.ಖಾದರ್, ಅವುಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ವಿವರಿಸಿದರು. ಆದರೆ ಖಾದರ್ ಒತ್ತಾಯಕ್ಕೆ ಮಣಿಯದೇ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಕೊರಗ ಸಮುದಾಯದವರು ತನ್ನ ನೋವನ್ನ ವ್ಯಕ್ತಪಡಿಸಿದ್ದಾರೆ. ಕೊರಗರು ನಮ್ಮ ಕರಾವಳಿಯ ಮುಗ್ಧ ಸಂಸ್ಕೃತಿಯ ಪ್ರತಿಬಿಂಬ, ಜೊತೆ ನಿಲ್ಲಬೇಕಾಗಿರೋದು ಕರಾವಳಿಯ ಜನಪ್ರತಿನಿಧಿಗಳ ಕರ್ತವ್ಯ, ಹೊರಗುತ್ತಿಗೆಯಲ್ಲಾದರೂ ತಮ್ಮ ವಿದ್ಯಾವಂತರಿಗೆ ಕೆಲಸ ಕೊಡಿ ಎಂದವರು ಕೇಳುತ್ತಿದ್ದಾರೆ, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ಜೊತೆ ಇಂದೇ ಚರ್ಚೆ ಮಾಡುತ್ತೇನೆ. ಕಂದಾಯ ಇಲಾಖೆಗೆ ಸಂಬಂಧ ಭೂಮಿಯ ಹಕ್ಕು ಇತ್ಯಾದಿ ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬಗ್ಗೆಯೂ ಆಗಸ್ಟ್ 15 ರ ನಂತರ ಈ ಬಗ್ಗೆ ಕಂದಾಯ ಇಲಾಖೆಯ ಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಹಿಂದೆ ನಾನು ಆರೋಗ್ಯ ಮಂತ್ರಿಯಾಗಿದ್ದಾಗ ಕೊರಗ ಸಮುದಾಯಕ್ಕೆ ಪ್ರತ್ಯೇಕವಾಗಿ ಸಾಕಷ್ಟು ಸಹಾಯ ಮಾಡಿದ್ದೇನೆ, ಈಗಲೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.