ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹೇಳಿಕೆ
ಕನ್ನಡಪ್ರಭ ವಾರ್ತೆ ಅಂಕೋಲಾ
2047 ಭಾರತಕ್ಕೆ ಸ್ವಾತಂತ್ರ್ಯ ಬಂದು 100ನೇ ವರ್ಷ ಪೂರೈಸುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ವಿಕಸಿತ ಭಾರತ ಆಗಿಯೇ ಆಗುತ್ತದೆ. ವಿಕಸಿತ ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.ಪಟ್ಟಣದ ದೈವಜ್ಞ ಸಭಾಭವನದಲ್ಲಿ ಆಯೋಜಿಸಿದ ವಿಬಿ ಜಿ ರಾಮಜೀ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ವಿಬಿ ಜಿ ರಾಮ್ ಜಿ ಅನುಷ್ಠಾನಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಹೊಟ್ಟೆಯಲ್ಲಿ ಬೆಂಕಿ ಬೀಳಲು ಶುರುವಾಗಿದೆ. ಅವರಿಗೆ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗುವುದು ಬೇಕಾಗಿಲ್ಲ. ಬಿಜೆಪಿ ಜಾರಿಗೆ ತಂದ ಮನೆ ಮನೆಗೆ ನೀರು ಪೂರೈಸುವ ಜೆಜೆಎಂ ಯೋಜನೆಯನ್ನು ಸಂಪೂರ್ಣವಾಗಿ ನಿಷ್ಪ್ರಯೋಜಕಗೊಳಿಸಿದ್ದಾರೆ. ಅದೇ ರೀತಿ ಅನೇಕ ಯೋಜನೆ ಬಿಜೆಪಿ ಸರ್ಕಾರ ಇದ್ದಾಗ ತರಲಾಗಿತ್ತು. ಅವೆಲ್ಲವನ್ನು ನಾಶಪಡಿಸಿ ಜನರನ್ನು ಸೌಲಭ್ಯ ವಂಚಿತರನ್ನಾಗಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ವಿಕಸಿತ ಭಾರತ ವಿಬಿ ಜಿ ರಾಮ್ ಜಿ ಮೂಲಕ ಗ್ರಾಪಂ ಮಟ್ಟದಲ್ಲಿ ಅಭಿವೃದ್ಧಿಗೊಳಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ 125 ದಿನ ಕೆಲಸ ಹಾಗೂ ವಾರಕ್ಕೊಮ್ಮೆ ಸಂಬಳ ನೀಡುವ ಗುರಿ ಹೊಂದಿದೆ. ಇದನ್ನು ಸಹಿಸದ ಕಾಂಗ್ರೆಸ್ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದೆ. ಯಾರು ಏನೇ ಹೇಳಲಿ, ಇದನ್ನು ಗ್ರಾಪಂ ವ್ಯಾಪ್ತಿಯಲ್ಲಿ ಜಾರಿಗೊಳಿಸುವುದು ಶತಸಿದ್ಧ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಮಾತನಾಡಿ, ವಿಕಸಿತ ಭಾರತ ಗ್ರಾಮೀಣ ಜನರ ಬದುಕು ಹಸನುಗೊಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಮೋದಿ ನೇತೃತ್ವದಲ್ಲಿ ಎನ್‌ಡಿಎ ಸ್ಥಿರ ಆಡಳಿತ ನೀಡುತ್ತಿದೆ. ವಿಬಿ ಜಿ ರಾಮ್ ಜಿ ಮೂಲಕ ರಾಜ್ಯ ಸರ್ಕಾರ ಶೇ. 40, ಕೇಂದ್ರ ಸರ್ಕಾರ ಶೇ. 60 ಅನುದಾನ ನೀಡಿ, ಇದನ್ನು ಯಶಸ್ವಿಗೊಳಿಸುವ ಯೋಜನೆಯಾಗಿದೆ ಎಂದರು.ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನಿತ್ಯಾನಂದ ಗಾಂವಕರ ಮಾತನಾಡಿದರು. ಬಿಜೆಪಿ ಮಂಡಳ ಪ್ರಭಾರ ಅಧ್ಯಕ್ಷ ಸಂಜಯ ಎಂ. ನಾಯ್ಕ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ರಾಜೇಂದ್ರ ವಿ. ನಾಯ್ಕ, ಜಿಲ್ಲಾ ಮಾಧ್ಯಮ ಸಹ ವಕ್ತಾರ ಜಗದೀಶ ನಾಯಕ ಮೊಗಟಾ, ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ, ಜಿಲ್ಲಾ ಪ್ರಕೋಸ್ಟಗಳ ಸಹ ಸಂಚಾಲಕ ರಾಘವೇಂದ್ರ ಭಟ್, ಮಂಡಳ ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯ್ಕ ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಆರತಿ ಗೌಡ ವಂದಿಸಿದರು.
ಉಳ್ವೇಕರ ನಡೆಗೆ ಆಕ್ಷೇಪಪಕ್ಷದ ಸಂಘಟನೆಗೆ ಸಂಬಂಧಪಟ್ಟು ಸಂಘಟಿಸಿದ ಯಾವುದೇ ಸಭೆಗಳಿಗೆ ತಮ್ಮ ಪಕ್ಷದವರೇ ಆಗಿರುವ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅವರು ಭಾಗವಹಿಸುತ್ತಿಲ್ಲ. ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು, ಪ್ರಮುಖರು ಹಗಲಿರುಳು ದುಡಿದಿದ್ದೇವೆ. ಆದರೆ ಪಕ್ಷದ ಕಾರ್ಯಕರ್ತರ ಬಗ್ಗೆಯಾಗಲಿ, ಸಂಘಟನೆಯ ಬಗ್ಗೆಯಾಗಲಿ, ಗಮನಹರಿಸಿಲ್ಲ. ತಮ್ಮ ಅನುದಾನವನ್ನು ಸಹ ಪಕ್ಷದ ಕಾರ್ಯಕರ್ತರ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿಲ್ಲ. ಎಸ್.ವಿ. ಸಂಕನೂರು ಅವರು ಅಧಿವೇಶನದಲ್ಲಿ ನಮ್ಮ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಆದರೆ ನಮ್ಮ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಅಲ್ಲಿ ಕಾಣಿಸುವುದೇ ಇಲ್ಲ. ಇದರ ಬಗ್ಗೆ ಬಿಜೆಪಿ ರಾಜ್ಯ ಕೋರ್ ಕಮಿಟಿಯಲ್ಲಿ ಚರ್ಚೆಯಾಗಲಿ, ಇಲ್ಲವೇ ತಾವೇ ಉತ್ತರಿಸಬೇಕು ಎಂದು ಬಿಜೆಪಿ ಪ್ರಮುಖರಾದ ಪ್ರವೀಣ ನಾಯ್ಕ ತೆಂಕಣಕೇರಿ, ನಾರಾಯಣ ಹೆಗಡೆ, ಎಂ.ಎನ್. ಭಟ್ ಮತ್ತು ಇತರರು ಪಟ್ಟು ಹಿಡಿದ ಘಟನೆ ನಡೆಯಿತು. ಈ ವೇಳೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಸಂಜತ ನಾಯ್ಕ ಕಾರ್ಯಕರ್ತರನ್ನು ಸಮಾಧಾನಪಡಿಸಿ, ಇದು ಪಕ್ಷದ ಆಂತರಿಕ ವಿಚಾರ. ಇದನ್ನು ಪಕ್ಷದ ಕೋರ್ ಕಮಿಟಿಯ ಸಭೆಯಲ್ಲಿ ಚರ್ಚಿಸೋಣ ಎಂದರು.