ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಬಿಟ್ಟರೆ ಬೇರಾರು ಗೆಲ್ಲಲು ಸಾಧ್ಯವಿಲ್ಲ

KannadaprabhaNewsNetwork | Published : Dec 12, 2024 12:31 AM

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಯುವ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹೊನ್ನಾಳಿಯಲ್ಲಿ ಬಿಜೆಪಿಯಿಂದ ಎಂ.ಪಿ.ರೇಣುಕಾಚಾರ್ಯ ಬಿಟ್ಟರೆ ಬೇರೆ ಯಾರೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ರೇಣುಕಾಚಾರ್ಯರ ಬಗ್ಗೆ ಹೊನ್ನಾಳಿ ಟಿಕೆಟ್ ಆಕಾಂಕ್ಷಿಗಳೆಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿರುವವರು ಮೊದಲು ಗ್ರಾಪಂ ಚುನಾವಣೆ ಗೆದ್ದು ತೋರಿಸಲಿ ಎಂದು ಬಿಜೆಪಿ ಮುಖಂಡ ರಾಜು ವೀರಣ್ಣ ಸವಾಲು ಹಾಕಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಿಷ್ಟಾವಂತ ಕಾರ್ಯಕರ್ತ ರೇಣುಕಾಚಾರ್ಯ ಹೊನ್ನಾಳಿ-ನ್ಯಾಮತಿ ಅವಳಿ ಕ್ಷೇತ್ರದಲ್ಲಿ ಮನೆ ಮಗನೆಂದೇ ಕರೆಸಿಕೊಳ್ಳುವ ವ್ಯಕ್ತಿ. ಇಂತಹವರ ವಿರುದ್ಧ ಕೆಲವರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಮೊನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರು ನೀಡಿದ್ದ ಹೇಳಿಕೆ ವಾಪಾಸ್ಸು ಪಡೆಯಬೇಕೆನ್ನಲು ಇಂತಹವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.

ಇಡೀ ರಾಜ್ಯದ ರಾಜಕೀಯ ಚಿತ್ರಣವೇ ವಿಜಯೇಂದ್ರರಿಗೆ ಗೊತ್ತಿದೆ. ಹೊನ್ನಾಳಿ ಕ್ಷೇತ್ರದಲ್ಲಿ ರೇಣುಕಾಚಾರ್ಯ ಹೊರತುಪಡಿಸಿದರೆ ಬೇರೆ ಯಾರೂ ಗೆಲ್ಲಲು ಸಾಧ್ಯವೂ ಇಲ್ಲ. ಎಂ.ಆರ್. ಮಹೇಶ, ಎ.ಬಿ.ಹನುಮಂತಪ್ಪ ಪ್ರಚಾರಕ್ಕಾಗಿ ರೇಣುಕಾಚಾರ್ಯ ವಿರುದ್ಧ ಆರೋಪ ಮಾಡುತ್ತಾ, ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಂ.ಆರ್.ಮಹೇಶ ಜಿಪಂ ಸದಸ್ಯರಾಗಲು, ಸ್ಥಾಯಿ ಸಮಿತಿ ಅಧ್ಯಕ್ಷರಾಗಲು ರೇಣುಕಾಚಾರ್ಯ ಕಾರಣ. ಬೆಳಗುತ್ತಿ ಕ್ಷೇತ್ರಕ್ಕೆ ಟಿಕೆಟ್ ಕೊಡಿಸಿ, ಮನೆ ಮನೆಗೂ ಹೋಗಿ, ಮಹೇಶರನ್ನು ಗೆಲ್ಲಿಸಿದ್ದೇ ರೇಣುಕಾಚಾರ್ಯ ಎಂಬುದನ್ನು ಮಹೇಶ ಮರೆಯಬಾರದು ಎಂದು ಅವರು ತಿಳಿಸಿದರು.

ಯುವ ಮುಖಂಡ ಪ್ರವೀಣ ಜಾಧವ್ ಮಾತನಾಡಿ, ಬಿಜೆಪಿ ಹೊನ್ನಾಳಿ ತಾಲೂಕು ಅಧ್ಯಕ್ಷರಾಗಿ ಎ.ಬಿ.ಹನುಮಂತಪ್ಪ ನೇಮಕವಾಗಲು ರೇಣುಕಾಚಾರ್ಯರೇ ಕಾರಣ. ಬಿಜೆಪಿ ಬಿಟ್ಟು ಹೋಗಿದ್ದ ಹನುಮಂತಪ್ಪನವರಿಗೆ ಮತ್ತೆ ಪಕ್ಷಕ್ಕೆ ಕರೆ ತಂದು, ಸ್ಥಾನಮಾನ ನೀಡಿ, ಗೌರವಿಸಿದ್ದು ರೇಣುಕಾಚಾರ್ಯ. ಅದನ್ನೆಲ್ಲಾ ಹನುಮಂತಪ್ಪ ಮರೆತಿದ್ದಾರೆ. ಯಾರದ್ದೋ ಮಾತು ಕೇಳಿಕಂಡು, ರೇಣುಕಾಚಾರ್ಯ, ವಿಜಯೇಂದ್ರರದ ವಿರುದ್ಧ ಹನುಮಂತಪ್ಪ ಮಾತನಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಆಕ್ಷೇಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪಂಜು ಪೈಲ್ವಾನ್, ಸುಮನ್‌, ಧರ್ಮರಾಜ, ಮಂಜು, ಮಹಾಂತೇಶ, ಗಿರೀಶ ಸೇರಿ ಇತರರು ಇದ್ದರು.

Share this article