ದಲಿತ ಸಮಾವೇಶ ಮಾಡೋದು ಬೇಡ ಎಂದು ಯಾರೂ ಹೇಳಿಲ್ಲ : ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

KannadaprabhaNewsNetwork |  
Published : Feb 16, 2025, 01:45 AM ISTUpdated : Feb 16, 2025, 01:05 PM IST
Dinesh gundurao

ಸಾರಾಂಶ

ದಲಿತ ಸಮಾವೇಶ ಮಾಡೋದು ಬೇಡ ಎಂದು ಯಾರೂ ಹೇಳಿಲ್ಲ. ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ.   ಆದರೆ ಅದು ಯಾವ ರೂಪದಲ್ಲಿ ಆಗಬೇಕು ಎನ್ನುವ ಬಗ್ಗೆ ತೀರ್ಮಾನವಾಗಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

 ಮಂಗಳೂರು : ದಲಿತ ಸಮಾವೇಶ ಮಾಡೋದು ಬೇಡ ಎಂದು ಯಾರೂ ಹೇಳಿಲ್ಲ. ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಬಹಳ ದೊಡ್ಡ ಕಾರ್ಯಕ್ರಮ ಮಾಡಬೇಕು ಎನ್ನುವ ಉತ್ತಮ ಉದ್ದೇಶ ಇದೆ. ಆದರೆ ಅದು ಯಾವ ರೂಪದಲ್ಲಿ ಆಗಬೇಕು ಎನ್ನುವ ಬಗ್ಗೆ ತೀರ್ಮಾನವಾಗಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈ ಹಿಂದೆಯೂ ದಲಿತ ಸಿಎಂ ಚರ್ಚೆ ಇತ್ತು. ಅವತ್ತು ನಮ್ಮ ಸರ್ಕಾರ ರಚನೆಯಾಗಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗುತ್ತಿದ್ದರು. ಜಿ.ಪರಮೇಶ್ವರ್ ಅವರಿಗೂ ಸಿಎಂ ಆಗುವ ಅವಕಾಶ ಇತ್ತು. ಚುನಾವಣೆಯಲ್ಲಿ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ಹಿಂದುಳಿದ ವರ್ಗ, ಸಣ್ಣ ವರ್ಗದವರೂ ಮುಖ್ಯಮಂತ್ರಿಯಾಗಿರೋದು ಕಾಂಗ್ರೆಸ್‌ನಲ್ಲಿ ಮಾತ್ರ, ಬೇರೆ ಪಕ್ಷದಲ್ಲಿ ಒಂದು ಪ್ರಬಲ ವರ್ಗಕ್ಕೆ ಮಾತ್ರ ಸಿಎಂ ಆಗೋ ಅವಕಾಶವಿದೆ ಎಂದರು.

ದೆಹಲಿ ಭೇಟಿ ಆಂತರಿಕ ವಿಚಾರ:

ಸಚಿವ ಸತೀಶ್ ಜಾರಕಿಹೊಳಿ ಹಾಗೂ ರಾಜಣ್ಣ, ದೆಹಲಿ ನಾಯಕರ ಭೇಟಿ ಕುರಿತು ಪ್ರತಿಕ್ರಿಯಿಸಿದ ದಿನೇಶ್‌ ಗುಂಡೂರಾವ್‌, ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡಲು ಯಾವ ನಿರ್ಬಂಧವೂ ಇಲ್ಲ. ನಾನೂ ಇತ್ತೀಚೆಗಷ್ಟೆ ಹೋಗಿದ್ದೆ. ಇದೆಲ್ಲ ನಮ್ಮ ಆಂತರಿಕ ವಿಚಾರ. ರಾಜಕೀಯ ಪಕ್ಷದಲ್ಲಿ ಇದೆಲ್ಲ ಇದ್ದದ್ದೇ. ಸಾಧ್ಯತೆಗಳ ನಡೆಯೇ ರಾಜಕಾರಣ. ಪೈಪೋಟಿ ಇರಬೇಕು, ಅದು ಆರೋಗ್ಯಕರವಾಗಿರಬೇಕು. ನಮ್ಮದು ಆರೋಗ್ಯಕರ ಪೈಪೋಟಿ, ಬಿಜೆಪಿದ್ದು ಅನಾರೋಗ್ಯಕರ. ಬಿಜೆಪಿಯಲ್ಲಿ ಒಬ್ಬರ ಮೇಲೊಬ್ಬರು ಕೆಸರೆರಚಾಟ, ಆಪಾದನೆ, ಸುದ್ದಿಗೋಷ್ಠಿ ಮಾಡುವಂಥ ಕೆಟ್ಟ ಪರಿಸ್ಥಿತಿಗೆ ನಾವು ಹೋಗಿಲ್ಲ ಎಂದು ಟೀಕಿಸಿದರು.

ಆರ್‌. ಅಶೋಕ್‌ ಹೇಳಿಕೆಗೆ ತಲೆ, ಬಾಲ ಇಲ್ಲ:

ಮುಂದಿನ ನವೆಂಬರ್‌ನಲ್ಲಿ ಸರ್ಕಾರ ಪತನವಾಗುತ್ತದೆ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ತಲೆಯೂ ಇಲ್ಲ, ಬಾಲವೂ ಇಲ್ಲ. ಅವರ ಪಕ್ಷದವರೇ ಅವರನ್ನು ವಿರೋಧ ಪಕ್ಷದ ಸ್ಥಾನದಿಂದ ಇಳಿಸೋದಕ್ಕೆ ಹೊರಟಿದ್ದಾರೆ. ಹಾಗಾಗಿ ಏನಾದರೊಂದು ಹೇಳಿಕೆ ಕೊಡಬೇಕು ಎಂದು ಕೊಡುತ್ತಿದ್ದಾರೆ. ಎಲ್ಲೂ ತೂಕವಾಗಿ ಮಾತನಾಡುತ್ತಿಲ್ಲ. ಸುಮ್ಮನೆ ಹಗುರವಾಗಿ ಏನೇನೋ ಟೀಕೆ ಮಾಡುತ್ತಾರೆ. ಡಿಸೆಂಬರ್, ನವೆಂಬರ್ ಎನ್ನುವಂಥದ್ದೆಲ್ಲ ಯಾರೂ ಒಪ್ಪುವ ಮಾತಲ್ಲ. ಮುಂದೆ ಚುನಾವಣೆಯಾಗಲಿ, ಯಾರು ಅಧಿಕಾರಕ್ಕೆ ಬರ್ತಾರೆ ಎಂದು ಅವಾಗ ನೋಡೋಣ ಎಂದರು.ಬಾಕ್ಸ್‌

ಬಿಜೆಪಿಯವರು ಸ್ವಂತ ದುಡ್ಡಲ್ಲಿ ಕಟ್ಟಿದ್ದಾರಾ?

ಮಂಗಳೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡದೆ ಬಿಜೆಪಿ ನಾಯಕರು ಉದ್ಘಾಟನೆ ಮಾಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ದಿನೇಶ್‌ ಗುಂಡೂರಾವ್‌, ಶಾಸಕ ವೇದವ್ಯಾಸ್ ಕಾಮತ್ ಮಂಗಳೂರಿನ ಪಾಳೆಗಾರನಾ? ಯಾವುದೇ ಕಾಮಗಾರಿಗಳ ಉದ್ಘಾಟನೆ ಶಿಷ್ಟಾಚಾರದ ಪ್ರಕಾರ ಆಗಬೇಕು. ಅರೋಗ್ಯ ಇಲಾಖೆ ನನ್ನ ಇಲಾಖೆ, ನನಗೆ ಅದರ ಜವಾಬ್ದಾರಿ ಇದೆ. ಬಿಜೆಪಿಯವರು ಉದ್ಘಾಟನೆ ಮಾಡಲು ಸ್ವಂತ ದುಡ್ಡು ಹಾಕಿ ಕಟ್ಟಿದ್ದಾರಾ? ಅವರ ಭೂಮಿಯಲ್ಲಿ ಮಾಡಿದ್ದಾರಾ? ಇದು ಸರ್ಕಾರದ ಹಣ, ಆಸ್ತಿ. ಉದ್ಘಾಟನೆ ವಿಚಾರದಲ್ಲಿ ಅಧಿಕಾರಿಗಳ ತಪ್ಪಿರಬಹುದು, ಆದರೆ ಬಿಜೆಪಿಯವರಿಗೆ ಗೊತ್ತಿಲ್ವಾ? ನಾನು ವೇದವ್ಯಾಸ ಕಾಮತ್ ಅವರ ಕ್ಷೇತ್ರದಲ್ಲಿ ಯಾರನ್ನೂ ಕರೆಯದೆ ಉದ್ಘಾಟನೆ ಮಾಡಿ ಹೋಗ್ಲಾ? ಪ್ರಾಥಮಿಕ ಆರೋಗ್ಯ ಕೇಂದ್ರ ಎರಡು ದಿನ ಬಂದ್‌ ಆಗುವ ವಾತಾವರಣ ನಿರ್ಮಾಣ ಮಾಡಿದ್ದು ಬಿಜೆಪಿಯ ಶಾಸಕರು ಎಂದು ಹರಿಹಾಯ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ