ಕುಮಟಾ: ಹರಯದ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಹಲವಾರು ರೂಪಗಳಲ್ಲಿ ಮಾದಕ ದ್ರವ್ಯಗಳ ಸೆಳೆತಕ್ಕೆ ಒಳಗಾಗಿ ದುರಂತಗಳ ಸರಮಾಲೆಯನ್ನು ಅಂಥವರ ಕುಟುಂಬಗಳು ಕಾಣುತ್ತಿರುವುದು ಅತ್ಯಂತ ನೋವಿನ ಸಂಗತಿ. ಇಂಥ ಅಪರಾಧಿಕ ಕೃತ್ಯಗಳಿಗೆ ಯಾರೂ ಬಲಿಯಾಗುವಂತಾಗಬಾರದು ಎಂದು ಪಿಎಸ್‌ಐ ಮಂಜುನಾಥ ಗೌಡರ್ ಹೇಳಿದರು.
ಶಾಲಾ ಪರಿಸರದಲ್ಲಿ ಅಕ್ರಮ ಚಟುವಟಿಕೆಗಳು ಕಂಡಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಮೊಬೈಲ್ ಬಳಕೆಯನ್ನು ಸಮರ್ಪಕವಾಗಿ ಮಾಡದಿದ್ದರೆ ಅದರಿಂದಲೂ ಸಮಸ್ಯೆ ಎದುರಿಸಬೇಕಾಗುತ್ತದೆ. ಸೈಬರ್ ಅಪರಾಧಗಳಿಗೆ ಬಲಿಯಾಗದೇ ಎಚ್ಚರಿಕೆ ವಹಿಸಿ ಎಂದರು.
ಪಿಎಸ್ಐ ರವಿ ಗುಡ್ಡಿ ಮಾತನಾಡಿ, ಪರವಾನಗಿ ಇಲ್ಲದೇ ವಾಹನ ಚಲಾಯಿಸಿದರೆ ದಂಡ ತೆರಬೇಕಾಗುತ್ತದೆ. ಕೆಲವು ವಿದ್ಯಾರ್ಥಿಗಳು ಇಂತಹ ಪ್ರಮಾದ ಮಾಡುತ್ತಾರೆ. ಅಪ್ರಾಪ್ತರು ವಾಹನ ಚಲಾಯಿಸಿದರೆ ವಾಹನ ಮಾಲೀಕರು ₹೨೫ ಸಾವಿರವರೆಗೂ ದಂಡ ತೆರಬೇಕಾಗುತ್ತದೆ. ದ್ವಿಚಕ್ರ ವಾಹನ ಸವಾರಿಯಲ್ಲಿ ಹೆಲ್ಮೆಟ್ ಕಡ್ಡಾಯ ಧರಿಸಿ ಎಂದರು.ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜುಕೇಶನ್ ಟ್ರಸ್ಟ್ನ ವಿಶ್ವಸ್ಥ ರಮೇಶ ಪ್ರಭು, ವಿದ್ಯಾರ್ಥಿಗಳು ಕಾನೂನು ಪಾಲನೆ, ಆದರ್ಶ, ನೈತಿಕತೆ, ಪಾಲಕರ ಮೇಲಿನ ಪ್ರೀತಿ ಮೊದಲಾದ ಸದ್ಗುಣಗಳನ್ನು ಹೊಂದಿ ಸದೃಢ ಭಾರತದ ನಿರ್ಮಾತೃಗಳಾಗಬೇಕು ಎಂದರು.
ವೇದಿಕೆಯಲ್ಲಿ ವಿಧಾತ್ರಿ ಅಕಾಡೆಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮ ಪ್ರಯುಕ್ತ ನಡೆಸಿದ ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರಾಚಾರ್ಯ ಕಿರಣ ಭಟ್ ಸ್ವಾಗತಿಸಿದರು. ಶ್ರೇಯಾ, ದಿಶಾ ಪ್ರಾರ್ಥಿಸಿದರು. ಉಪನ್ಯಾಸಕರಾದ ಡಾ. ಗೌರಿ ಹೆಗಡೆ, ಕಾಗಲ ಚಿದಾನಂದ ಭಂಡಾರಿ, ಗುರುರಾಜ ಶೆಟ್ಟಿ ನಿರ್ವಹಿಸಿದರು.