ಪಹಲ್ಗಾಂ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಕಂಪ್ಲಿ : ಪಹಲ್ಗಾಂ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಪಟ್ಟಣದ ರೈನ್ ಬೋ ಪಿಯು ಕಾಲೇಜಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ನರಮೇಧ ಅಮಾನವೀಯ ಕೃತ್ಯವಾಗಿದೆ. ಈ ಕುರಿತು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾದ ಕ್ರಮ ಅನುಸರಿಸುತ್ತಿದ್ದಾರೆ. ಯಾರಿಗೂ ಮುಲಾಜು ಹಿಡಿಯದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಈ ರೀತಿಯ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.
ಮೊದಲಿನ ರಾಜಕೀಯ ಬೇರೆ, ಈಗೀನ ರಾಜಕೀಯವೇ ಬೇರೆ. ಈಗೀನ ರಾಜಕೀಯದಲ್ಲಿ ನೈತಿಕತೆ ಇಲ್ಲ. ದುಡ್ಡಿನ ಮೇಲೆ ರಾಜಕೀಯ ನಡೆಯುತ್ತಿದೆ. ದುಡ್ಡು ಪಡೆದು ಓಟು ಹಾಕೋರು, ದುಡ್ಡು ಕೊಟ್ಟು ಓಟು ಹಾಕಿಸಿಕೊಳ್ಳೋರು ಇಬ್ಬರು ಒಂದೇ. ಈ ವ್ಯವಸ್ಥೆ ಬದಲಾಗುವವರೆಗೂ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಇದು ಒಂದು ರೀತಿಯಲ್ಲಿ ಕುದುರೆ ವ್ಯಾಪಾರವೇ. ಎಂ.ಪಿ. ಪ್ರಕಾಶ ಅವರು ಎಷ್ಟೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಆದರೂ ಚುನಾವಣೆಯಲ್ಲಿ ಸೋತರು. ಇದಕ್ಕೆ ಜಾತಿ ಹಾಗೂ ದುಡ್ಡೇ ಕಾರಣ ಎಂದರು.
ಇನ್ನು ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ ವಿಚಾರದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಪ್ರವೇಶ ಪರೀಕ್ಷೆಗಳಲ್ಲಿ ಜನಿವಾರ, ತಾಳಿ ತೆಗೆಸೋದು ನೂರಕ್ಕೆ ನೂರು ತಪ್ಪು. ಇಂದು ಜನಿವಾರ ತೆಗೆಸುತ್ತಾರೆ, ನಾಳೆ ಬಟ್ಟೆ ತೆಗೆಸುತ್ತಾರೆ, ಮಾನ-ಮಾರ್ಯಾದೆ ಇಲ್ಲವಾ ಅವರಿಗೆ? ಹೀಗಾಗಿ ಕಾರ್ಯದರ್ಶಿಗೆ ಹೇಳಿದ್ದೇನೆ. ಕಾಪಿ ಮಾಡಿದವರನ್ನು ಡಿಬಾರ್ ಮಾಡಿ, ನಾನು ಅದನ್ನು ಒಪ್ಪುತ್ತೇನೆ. ಆದರೆ ಪರೀಕ್ಷಾರ್ಥಿಗಳಿಗೆ ಜನಿವಾರ, ಲಿಂಗ ಕಟ್ಟಿಕೊಳ್ಳಬೇಡಿ ಎನ್ನುವುದು ಸರಿಯಲ್ಲ. ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ಪರೀಕ್ಷಾ ಪಾವಿತ್ರ್ಯತೆ ಕಾಪಾಡಿ ಎಂದರು.
18 ಜನ ಶಾಸಕರ ಅಮಾನತು ವಿಚಾರದ ಕುರಿತು ಪ್ರತಿಕ್ರಿಯಿಸಿ ಮಾತನಾಡಿ, ಸಭಾಧ್ಯಕ್ಷರಿಗೆ ತಮ್ಮದೇ ಆದ ಗೌರವವಿರುತ್ತದೆ. ಸದನ ಪ್ರಶ್ನಿಸುವಾಗ ಬೆರಳೆತ್ತುವುದು, ಸಭಾಧ್ಯಕ್ಷರ ಮೇಲೆ ಪೇಪರ್ ಹರಿದು ಎಸೆಯುವುದು ತಪ್ಪಲ್ಲವೇ? ನಾನು ಆ ಸ್ಥಾನದಲ್ಲಿದ್ದರೂ ಇದನ್ನೇ ಮಾಡುತ್ತಿದ್ದೆ. ವಿಧಾನಪರಿಷತ್, ವಿಧಾನಸಭೆಯಲ್ಲಿ ಶಿಸ್ತು ಪಾಲನೆಯಾಗಬೇಕು ಎಂದರು.
ಮಾಧ್ಯಮ ನಾಲ್ಕನೇ ಅಂಗ. ಇದ್ದಿದ್ದನ್ನು ಇದ್ದಂಗೆ ಏನೇನು ನಡಿತಾವ ಅವನ್ನು ಸ್ವಚ್ಛ ಮಾಡಿದ್ರೆ ನಿಮ್ಮಿಂದ ಏನಾದರೂ ಪ್ರಜಾಪ್ರಭುತ್ವ ಸುಧಾರಣೆ ಆಗುತ್ತದೆ ಎಂಬ ಆಶಯವಿದೆ. ನಮ್ಮಿಂದ (ರಾಜಕಾರಣಿಗಳಿಂದ) ಸುಧಾರಣೆ ಆಗೋದಿಲ್ಲ ಎಂದರು.
ಈ ಸಂದರ್ಭ ಪುರಸಭೆ ಅಧ್ಯಕ್ಷರಾದ ಭಟ್ಟ ಪ್ರಸಾದ್, ಸದಸ್ಯರಾದ ಕೆ.ಎಸ್. ಚಾಂದ್ ಬಾಷಾ, ಮುಖಂಡರಾದ ಧಾರವಾಡ ಬಸವರಾಜ್, ಬಿ.ಸಿದ್ದಪ್ಪ, ಕೆ.ಎಸ್. ಶಾರುಖ್, ಆದಿ ಶೇಷ, ವೆಂಕಟರಮಣ, ನಾಗೇಂದ್ರ ಇತರರಿದ್ದರು.