ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರ ಜಾಲತಾಣಕ್ಕೆ ಮತ್ತೆ ಸೈಬರ್ ಕಳ್ಳರು ಕನ್ನ ಹಾಕಿದ್ದಾರೆ. ಈ ಹಿಂದೆ ಪೊಲೀಸ್ ಕಮಿಷನರ್ ಆಗಿದ್ದ ಶಶಿಕುಮಾರ್ ಅವರ ಜಾಲತಾಣ ಕೂಡ ಹ್ಯಾಕ್ ಆಗಿತ್ತು. ಇದೀಗ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಜಾಲತಾಣಕ್ಕೂ ಸೈಬರ್ ಖದೀಮರು ದಾಳಿ ನಡೆಸಿದ್ದಾರೆ. ನನ್ನ ಹೆಸರಿನಲ್ಲಿಯೂ ನಕಲಿ ಕರೆ ಮಾಡಿ ವಂಚಿಸುವ ಯತ್ನ ನಡೆದಿದೆ. ನಕಲಿ ಕರೆಗಳಿಗೆ ಯಾರು ಕೂಡ ಸ್ಪಂದಿಸಬಾರದು ಎಂದು ಅವರು ತಿಳಿಸಿದ್ದಾರೆ. ವ್ಯಕ್ತಿಯೋರ್ವ ನಕಲಿ ವಾಟ್ಸಪ್ ಪ್ರೊಫೈಲ್‌ನಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಪೊಟೋ ಹಾಕಿ ತನ್ನನ್ನು ಪೊಲೀಸ್ ಆಯುಕ್ತನೆಂದು ಪರಿಚಯಿಸಿಕೊಂಡು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆಯುಕ್ತರ ಹಲವು ಮಂದಿ ಪರಿಚಿತರಿಗೆ ಸಂದೇಶ ಕಳುಹಿಸಿದ್ದಾನೆ. ‘ನಾನು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್. ನಾನು ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ಹಣ ಬೇಕಾಗಿದೆ. ನನ್ನ ಯುಪಿಐ ವರ್ಕ್ ಮಾಡುತ್ತಿಲ್ಲ. ತುರ್ತಾಗಿ ಹಣ ವರ್ಗಾವಣೆ ಮಾಡಿ. ಒಂದು ತಾಸಿನೊಳಗೆ ವಾಪಸ್ ಮಾಡುತ್ತೇನೆ’ ಎಂದು ತಿಳಿಸಿದ್ದಾನೆ. ಅಲ್ಲದೆ ಕರೆ ಕೂಡ ಮಾಡಿದ್ದಾನೆ. ಇದು ನಕಲಿಯಾಗಿದ್ದು, ಯಾರೂ ಕೂಡ ಸ್ಪಂದಿಸಬಾರದು. ಅನಾಮಿಕ ಕರೆಗಳನ್ನು ನಂಬಬಾರದು. ಈ ರೀತಿ ಹ್ಯಾಕ್ ಮಾಡಿದ ವ್ಯಕ್ತಿ ರಾಜಸ್ತಾನದ ಮೂಲದ ಭರತ್‌ಪುರದಾತ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಕಮಿಷನರ್ ಅನುಪಮ್ ಅಗರ್‌ವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.