ಸಹಕಾರ ಕ್ಷೇತ್ರದ ಸ್ವಾಯುತ್ತತೆಗೆ ಧಕ್ಕೆ

KannadaprabhaNewsNetwork |  
Published : Nov 20, 2025, 02:00 AM IST
51 | Kannada Prabha

ಸಾರಾಂಶ

ನಾನೊಬ್ಬ ಸಹಕಾರಿ ಎನ್ನುವ ಹೆಮ್ಮೆ ನನಗಿದೆ. ದೇಶಾದ್ಯಂತ ಲಕ್ಷಾಂತರ ಸಹಕಾರ ಸಂಘಗಳು ದೇಶದ ಆರ್ಥಿಕತೆಗೆ ಬೆನ್ನಲುಬಾಗಿನಿಂತಿವೆ.

ಕನ್ನಡಪ್ರಭ ವಾರ್ತೆ ಹುಣಸೂರುರಾಜ್ಯದ ಆರ್ಥಿಕತೆಗೆ ಬೆನ್ನೆಲುಬಾಗಿ ನಿಂತಿರುವ ಸಹಕಾರ ಕ್ಷೇತ್ರದ ಸ್ವಾಯುತ್ತತೆಗೆ ಧಕ್ಕೆ ತರುವ ಕಾರ್ಯವನ್ನು ಪ್ರಸ್ತುತ ಸರ್ಕಾರ ಮಾಡಬಾರದು. ಕಾಲಚಕ್ರ ಹೀಗೆ ಇರುತ್ತದೆ ಎಂದು ಯಾರೂ ಭಾವಿಸಬಾರದು ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್‌ ಗೌಡ ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾನೊಬ್ಬ ಸಹಕಾರಿ ಎನ್ನುವ ಹೆಮ್ಮೆ ನನಗಿದೆ. ದೇಶಾದ್ಯಂತ ಲಕ್ಷಾಂತರ ಸಹಕಾರ ಸಂಘಗಳು ದೇಶದ ಆರ್ಥಿಕತೆಗೆ ಬೆನ್ನಲುಬಾಗಿನಿಂತಿವೆ. ಸಹಕಾರ ಕ್ಷೇತ್ರಕ್ಕೆ ಸರ್ಕಾರದ ಕೊಡುಗೆ ಏನೂ ಇರುವುದಿಲ್ಲ. ಸಹಕಾರಿಗಳು ನೀಡುವ ಷೇರುಹಣವನ್ನೆ ನಂಬಿಕೊಂಡು ಸಹಕಾರ ಸಂಘಗಳು ನಡೆಯುತ್ತವೆ. ಹೀಗಿದ್ದೂ ಸಹಕಾರ ಕ್ಷೇತ್ರಗಳ ಸ್ವಾಯುತ್ತತೆಯನ್ನು ಕಿತ್ತುಕೊಳ್ಳಲು ರಾಜ್ಯ ಸರ್ಕಾರ ಹೊರಟಿರುವುದು ವಿಷಾದನೀಯ ಸಂಗತಿಯಾಗಿದೆ. ಕಾಲಚಕ್ರ ಹೀಗೆ ಇರುವುದಿಲ್ಲವೆನ್ನುವ ಸತ್ಯ ನಮಗೆ ತಿಳಿದಿರಬೇಕು ಎಂದರು. ಮೀಸಲಾತಿಗೆ ವಿರೋಧವಿಲ್ಲ ರಾಜ್ಯ ಸರ್ಕಾರ ಸಹಕಾರ ಸಂಘ ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ತಂದಿದೆ. ಮೀಸಲಾತಿ ನೀಡುವುದಾಗಿ ತಿಳಿಸಿದೆ. ಮೀಸಲಾತಿಗೆ ನಮ್ಮ ವಿರೋಧವೇನಿಲ್ಲ. ಸರ್ಕಾರ ಹೇಳುವ ಮೊದಲೇ ನಾನು ನನ್ನ ಕ್ಷೇತ್ರದಲ್ಲಿ ಮೀಸಲಾತಿ ನೀತಿ ಅನುಸರಿಸಿದ್ದೇನೆ. ಆದರೆ ತಿದ್ದುಪಡಿಯ ಹೆಸರಿನಲ್ಲಿ ಸಹಕಾರಿಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ನೀತಿ ಸರಿಯಲ್ಲ. ಎರಡೂವರೆ ವರ್ಷಗಳ ಕಾಲ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಸದೇ ಕುಳಿತು ನೀವು ಸಾಧಿಸಿದ್ದಾದರೂ ಏನು? ಎಂದು ಅವರು ಪ್ರಶ್ನಿಸಿದರು.2018ರಲ್ಲಿ ಸಹಕಾರಿಗಳ ಹಣವನ್ನು ಲೂಟಿ ಹೊಡೆದರೆನ್ನುವ ಆರೋಪಿಗಳನ್ನು ಇಂದು ಆಯಕಟ್ಟಿನ ಜಾಗದಲ್ಲಿ ಮೇಲ್ವಿಚಾರಕರಾಗಿ ಕೂರಿಸಿದ್ದೀರಲ್ಲ? ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಇದು ಆಗಿದೆಯಲ್ಲ ಸರಿಯೇ? ಹಾಲು ಉತ್ಪಾದಕರ ಸಂಘಕ್ಕೆ ಸರ್ಕಾರದಿಂದ ಕೊಡುಗೆಯೇನಿದೆ? ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶೇ. 5.6ರ ಬಡ್ಡಿ ರಿಯಾಯಿತಿ ನೀಡುವುದನ್ನು ಹೊರತುಪಡಿಸಿ ಇನ್ನೇನು ನೀಡುತ್ತಿದ್ದೀರಿ? ಕಳೆದೆರಡು ವರ್ಷಗಳಿಂದ ಎಷ್ಟು ರೈತರಿಗೆ ಹೊಸ ಸಾಲಾ ನೀಡಿದ್ದೀರಿ? ಎಷ್ಟು ಡೆಪಾಸಿಟ್ ಹೆಚ್ಚಿಸಿದ್ದೀರಿ ಎಂದು ಸರ್ಕಾರವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ. ಈರೇಗೌಡ ಮಾತನಾಡಿ, ಸಹಕಾರ ಕ್ಷೇತ್ರ ರಾಜಕೀಯ ಬರಬಾರದು, ಜಾತಿಗೆ ಅವಕಾಶವಿರಬಾರದು ಮತ್ತು ಹಾಲಿಗೆ ನೀರು ಬೆರಸಬಾರದು. ಹೀಗಾದಲ್ಲಿ ಮಾತ್ರ ಸಹಕಾರ ಕ್ಷೇತ್ರ ಹೆಮ್ಮರವಾಗಿ ಬೆಳೆಯಲು ಸಾಧ್ಯವೆಂದರು.

ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಬಿ.ಎನ್. ಸದಾನಂದ ಮಾತನಾಡಿ, ಸರ್ಕಾರ ಸಹಕಾರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಲು ಪರೋಕ್ಷವಾಗಿ ಪ್ರಯತ್ನಿಸುತ್ತಿದೆ. ಇದು ಲಕ್ಷಾಂತರ ಸಹಕಾರಿಗಳು ಬೀದಿಪಾಲಗುವ ಪರಿಸ್ಥಿತಿ ತಂದೊಡ್ಡಬಹುದು. ಸಹಕಾರ ಕ್ಷೇತ್ರವನ್ನು ಸರ್ಕಾರ ಆಶ್ರಯತಾಣವನ್ನಾಗಿಸಲು ಪ್ರಯತ್ನಿಸಬಾರದು ಎಂದು ಎಚ್ಚರಿಸಿದರು.ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕೆ.ಎಸ್. ಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎ.ಟಿ. ಸೋಮಶೇಖರ್, ಕೆ. ಉಮಾಶಂಕರ್, ಶಿವಗಾಮಿ, ಕೆ.ಬಿ. ಮಹೇಶ್ ಕುಳುಹಟ್ಟಿ, ಡಿ. ಮಹದೇವಸ್ವಾಮಿ, ರಾಮಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್. ಪ್ರೇಮ್‌ ಕುಮಾರ್,ಉಪಾಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ, ಎಚ್.ಆರ್. ಉದಯಕುಮಾರ್, ಲೀಲಾವತಿ ನಾಗರಾಜ್, ದಾಕ್ಷಾಯಿಣಿ, ರಂಜಿತ ಚಿಕ್ಕಮಾದು, ತಾಲೂಕಿನ ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳು ಇದ್ದರು. ಭರ್ಜರಿ ಮೆರವಣಿಗೆವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಆಂಜನೇಯಸ್ವಾಮಿ ದೇವಾಲಯದಿಂದ 2 ಸಾವಿರಕ್ಕೂ ಹೆಚ್ಚು ಪೂರ್ಣಕುಂಭ ಹೊತ್ತ ಮಹಿಳೆಯರು ಜಾನಪದ ಕಲಾತಂಡಗಳೊಂದಿಗೆ ಮೈದಾನಕ್ಕೆ ಮೆರವಣಿಗೆ ಮೂಲಕ ಸಾಗಿ ಬಂದರು. ಶಾಸಕ ಜಿ.ಡಿ. ಹರೀಶ್‌ ಗೌಡ ಮತ್ತಿತರ ಮುಖಂಡರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದು ವೇದಿಕೆ ಸಮಾರಂಭದಲ್ಲಿ ಪಾಲ್ಗೊಂಡರು. ಇತ್ತೀಚಿಗೆ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್‌ಗೌಡ ಅವರಿಗೆ ಸಹಕಾರಿಗಳು ಅದ್ಧೂರಿಯಾಗಿ ಸನ್ಮಾನಿಸಿ ಸಂಭ್ರಮಿಸಿದರು.

-- ಬಾಕ್ಸ್--

- ಸಾಲ ನೀಡುತ್ತಿಲ್ಲ..ಡೆಪಾಸಿಟ್ ತಳ ಸೇರಿದೆ --ನಾನು ಡಿಸಿಸಿ ಬ್ಯಾಂಕ್‌ ಅಧ್ಯಕ್ಷನಾಗಿದ್ದ ಅವಧಿಯಲ್ಲಿ (2018-23) ಕಳೆದ 60 ವರ್ಷಗಳಲ್ಲಿ ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ 380 ಕೋಟಿ ರು. ಡೆಪಾಸಿಟ್ ಹೊಂದಿ, 600 ಕೋಟಿ ರು. ಗಳ ಸಾಲಸೌಲಭ್ಯ (45 ಸಾವಿರ ಫಲಾನುಭವಿಗಳು) ನೀಡಲಾಗುತ್ತಿತ್ತು. ತಮ್ಮ ಅವಧಿಯಲ್ಲಿ ಒಂದು ಸಾವಿರ ಕೋಟಿ ರು. ಡೆಪಾಸಿಟ್ ಮಾಡಲಾಗಿತ್ತು. ಅಲ್ಲದೇ 1600 ಕೋಟಿ ರು. ಗಳ ಸಾಲ ಸೌಲಭ್ಯವನ್ನು 1.5 ಲಕ್ಷ ರೈತ ಫಲಾನುಬವಿಗಳು ಪಡೆದುಕೊಂಡಿದ್ದರು. ಹುಣಸೂರಿನಲ್ಲಿ ಕೇವಲ 22 ಕೋಟಿ ರು. ಸಾಲ ಸಿಗುತ್ತಿತ್ತು. ತಮ್ಮ ಅವಧಿಯಲ್ಲಿ ಇದು 200 ಕೋಟಿ ರು. ಗಳಿಗೆ ಏರಿತು. ಇದೀಗ ಮತ್ತೆ ಪಾತಾಳ ಕಾಣುತ್ತಿದೆ. ಇದಕ್ಕೆ ಸರ್ಕಾರದ ಸಹಕಾರ ವಿರೋಧಿ ನೀತಿ ಕಾರಣವಲ್ಲವೇ ಎಂದು ಶಾಸಕ ಜಿ.ಡಿ. ಹರೀಶ್‌ ಗೌಡ ಹೇಳಿದರು.

PREV

Recommended Stories

ಗೌರವ ಧನ ಹೆಚ್ಚಳವೇ ಮತ್ತೊಂದು ಗ್ಯಾರಂಟಿ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ
ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ