ಕನ್ನಡಪ್ರಭ ವಾರ್ತೆ ಬೀಳಗಿ
ಶ್ರೀರಾಮ ಎಂದರೆ ಧರ್ಮ. ಅಂತಹ ಧರ್ಮ ಪ್ರತಿಷ್ಠಾಪನೆ. ಇದು ಎಲ್ಲ ಕಡೆಯೂ ಆಗಬೇಕು. ಬೀಳಗಿಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿರುವುದು ಒಳ್ಳೆಯ ಕಾರ್ಯ. ಎಲ್ಲ ಸಮಾಜಗಳ ಉದ್ಧಾರವಾಗಲಿ, ಎಲ್ಲರ ಜೀವನ ಸುಖಕರವಾಗಲಿ ಎಂಬುದೇ ಧರ್ಮ ಪ್ರತಿಷ್ಠಾಪನೆ ಉದ್ದೇಶ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೇಳಿದರು.ಬೀಳಗಿ ಕ್ರಾಸ್ ಬಳಿಯಲ್ಲಿ ಶ್ರೀರಾಮ ಮಂದಿರ ದೇವಸ್ಥಾನ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ೨೧೮ಕ್ಕೆ ಹೊಂದಿಕೊಂಡಿರುವ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾದ ಶ್ರೀರಾಮ ಮಂದಿರ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಉಚಿತ ಸಾಮೂಹಿಕ ವಿವಾಹ, ಉಪನಯನ ಸಮಾರಂಭದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾನ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಯಾರ ಹತ್ತಿರ ಪ್ರಯತ್ನವಿರುವುದಿಲ್ಲವೋ ಅಂತವರು ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಪ್ರಯತ್ನ ಹೆಚ್ಚಾಗಬೇಕು. ಅದು ಸ್ವಾರ್ಥ, ಸುಖಕ್ಕಾಗಿ ಆಗಿರಬಾರದು, ಇನ್ನೊಬ್ಬರಿಗೆ ದುಃಖ ಉಂಟುಮಾಡಿ ನಾವು ಸುಖವಾಗಿ ಇರಲು ಸಾಧ್ಯವಿಲ್ಲ. ಯಾರಿಗೂ ತೊಂದರೆಯಾಗದಂತೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಶ್ರೀರಾಮನ ತತ್ವಾದರ್ಶಗಳನ್ನು ಅರಿತು ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಸಾಗಬೇಕು. ರಾಮ ಒಳ್ಳೆಯದಕ್ಕೆ ಹೆಸರಾದರೆ, ರಾವಣ ಸ್ವಾರ್ಥಕ್ಕೆ ಹೆಸರಾಗಿದ್ದ. ಕೊನೆಯ ತನಕ ಉಳಿಯುವುದು ಒಳ್ಳೆತನವೇ ಹೊರತು ಕೆಟ್ಟದ್ದಲ್ಲ. ಒಳ್ಳೆಯದನ್ನು ನೋವಿಸುವವರು ಯಾರೂ ಉದ್ಧಾರವಾಗಿಲ್ಲ. ನಾವು ನಮಗಾಗಿ ಎನ್ನುವುದನ್ನು ಬಿಟ್ಟು ಇತರರು ನಮ್ಮವರು ಎನ್ನುವ ಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಮುರುಗೇಶ ನಿರಾಣಿ, ಅಯೋಧ್ಯೆಯಲ್ಲಿ ವರ್ಷದ ಹಿಂದೆ ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಅಲ್ಲಿಗೆ ಈಗ ದೇಶ, ವಿದೇಶಗಳ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಎಲ್ಲ ಸಮಾಜಗಳಲ್ಲೂ ಶ್ರೀರಾಮನ ಆರಾಧಿಸುತ್ತಾರೆ. ಎಲ್ಲರಿಗೂ ಶ್ರೀರಾಮ ಮಂದಿರಕ್ಕೆ ಬಂದಾಗ ವಿಶೇಷ ಅನುಭವವಾಗುತ್ತದೆ ಎಂಬುದಕ್ಕೆ ಶ್ರೀರಾಮನ ತತ್ವಾದರ್ಶಗಳು ಕಾರಣ. ಅಯೋಧ್ಯೆ ಮಂದಿರದಂತೆ ಬೀಳಗಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮಮಂದಿರ ಹೆಸರು ಪಡೆದು ಎಲ್ಲ ಭಕ್ತರಿಗೆ ಸುಖವನ್ನು ನೀಡುವಂತಾಗಲಿ, ಮುಂದೆ ಈ ಮಂದಿರಕ್ಕಾಗಿ ಯಾವುದೇ ಸಹಾಯ ಸಹಕಾರ ಬೇಕಾದರೂ ನಾವು ಸಿದ್ಧರಿದ್ದು, ಸಮಿತಿಯವರು ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ಹುಚ್ಚಪ್ಪಯ್ಯಮಠದ ಫಕೀರಯ್ಯ ಸ್ವಾಮಿಗಳು, ರಾಜ್ಯ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಸೂಜ ಹೆಗಡೆ, ವಿಪ ಸದಸ್ಯ ಹಣಮಂತ ನಿರಾಣಿ ಮಾತನಾಡಿದರು. ಚಾಮರಾಜ ದೇಸಾಯಿ ಘನ ಅಧ್ಯಕ್ಷತೆ ವಹಿಸಿದ್ದರು. ಹಣಮಂತ ದೊಡಮನಿ ಅಧ್ಯಕ್ಷತೆ ವಹಿಸಿದ್ದರು. ಅಕ್ಕಲಕೋಟದ ಸದ್ಗುರು ಪಾಂಡುರಂಗ ಮಹಾರಾಜರು, ಗೋಕಾಕದ ವಿಜಯ ಸಿದ್ದೇಶ್ವರ ಸ್ವಾಮಿಗಳು, ಬೀರಕಬ್ಬಿಯ ವೀರತಯ್ಯ ಹಿರೇಮಠ ಸ್ವಾಮಿಗಳು, ಹಿರಿಯರಾದ ಡಿ.ಎಸ್. ಕಣವಿ, ರಾಮನಗೌಡ ಜಕ್ಕನಗೌಡರ, ರಾಮನಗೌಡ ಪಾಟೀಲ, ಡಾ.ಶೇಖರ ಮಾನೆ, ಕುಮಾರ ಯಳ್ಳಿಗುತ್ತಿ, ಎಸ್.ಆರ್. ಮೇಲ್ನಾಡ, ಶಿವಾನಂದ ನಿಂಗನೂರ, ಹನುಮಂತ ಕಾಖಂಡಕಿ ಇತರರು ಇದ್ದರು.ದಾಂಪತ್ಯ ಜೀವನಕ್ಕೆ ಕಾಲಿಟ್ಟ ೮ ಜೋಡಿ:
ಇದೇ ವೇಳೆ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ೮ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪೇಜಾವರ ಶ್ರೀ, ಸೇರಿದಂತೆ ವಿವಿಧ ಶ್ರೀಗಳು, ಗಣ್ಯರು ನವದಂಪತಿಗೆ ಆಶೀರ್ವದಿಸಿದರು. ಟಕ್ಕಳಕಿ ಗೋವಿನದಿನ್ನಿ ಮಾರುತಿ ಮಂದಿರದಿಂದ ೫೦೧ ಸುಮಂಗಲೆಯರ ಕುಂಭಮೇಳ, ವಾದ್ಯ ವೈಭವಗಳೊಂದಿಗೆ ಕನಕ ವೃತ್ತದ ಮೂಲಕ ಸಾಗಿ ಶ್ರೀರಾಮ ಮಂದಿರಕ್ಕೆ ತಲುಪಿತು.