ಮಂಡ್ಯ ಮಂಜುನಾಥ
ಪ್ರಗತಿಪರ ಸಂಘಟನೆಯವರು ಮದ್ದೂರಿನಲ್ಲಿ ಸೆ.೨೨ರಂದು ನಡೆಸಲು ಉದ್ದೇಶಿಸಿರುವ ಸಾಮರಸ್ಯ ನಡಿಗೆಗೆ ಅನುಮತಿ ನೀಡದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಇದರ ನಡುವೆಯೂ ಸಾಮರಸ್ಯ ನಡಿಗೆ ಮಾಡಿಯೇ ತೀರುವುದಾಗಿ ಪ್ರಗತಿಪರ ಸಂಘಟನೆಗಳು ಹಠಕ್ಕೆ ಬಿದ್ದಿವೆ. ಮತ್ತೊಂದೆಡೆ ಇದು ಸಾಮರಸ್ಯ ನಡಿಗೆಯಲ್ಲ, ಒಂದು ಕೋಮಿನ ನಡಿಗೆ. ಇದು ನಡೆದರೆ ನಾವೂ ಬೃಹತ್ ಮಟ್ಟದಲ್ಲಿ ರ್ಯಾಲಿ ಆಯೋಜಿಸುವುದಾಗಿ ಹಿಂದೂ ಕಾರ್ಯಕರ್ತರು ಸವಾಲೆಸೆದಿದ್ದಾರೆ.
ಸೆ.೭ರಂದು ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ನಡೆಸಿದ ಕಲ್ಲು ತೂರಾಟ ಪ್ರಕರಣದಲ್ಲಿ ಮುಸ್ಲಿಮರಿಂದ ತಪ್ಪಾಗಿದೆ ಎಂದು ಬಹಿರಂಗವಾಗಿಯೇ ತಪ್ಪೊಪ್ಪಿಕೊಂಡಿದ್ದ ಜಾಮೀಯಾ ಮಸೀದಿ ಅಧ್ಯಕ್ಷ ಆದಿಲ್ ಖಾನ್, ಸಾಮರಸ್ಯ ನಡಿಗೆಗೆ ಬೇಕಾದ ಆರ್ಥಿಕ ನೆರವನ್ನೆಲ್ಲಾ ನೀಡಲು ಸಿದ್ಧ ಎಂಬುದಾಗಿ ತಿಳಿಸಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಇದನ್ನೇ ಮುಂದಿಟ್ಟುಕೊಂಡು ಹಿಂದೂ ಸಂಘಟನೆಯವರು ಇದು ಸಾಮರಸ್ಯ ನಡಿಗೆಯಲ್ಲ, ಇದು ಒಂದು ಕೋಮಿನ ನಡಿಗೆ. ಇದರಿಂದ ಮತ್ತೊಂದು ಕೋಮಿನ ಜನರನ್ನು ಪ್ರಚೋದಿಸಿದಂತಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾ ಆರಕ್ಷಕ ಅಧೀಕ್ಷಕರಿಗೆ ದೂರು ನೀಡಿದ್ದಾರೆ.ಇದೊಂದು ಸಾಮರಸ್ಯದ ನಡಿಗೆಯಾಗಿದ್ದು, ಇದರಲ್ಲಿ ಸಾಮರಸ್ಯ ಬಯಸುವವರು ಯಾರು ಬೇಕಾದರೂ ಭಾಗವಹಿಸಬಹುದು. ಮದ್ದೂರಿನ ಪ್ರೊ.ನಂಜುಂಡಸ್ವಾಮಿ ಪ್ರತಿಮೆಯಿಂದ ಶಿವಪುರ ಧ್ವಜ ಸತ್ಯಾಗ್ರಹ ಸೌಧದವರೆಗೆ ಮೆರವಣಿಗೆ ನಡೆಯಲಿದೆ. ಇದಾವುದೋ ಒಂದು ಕೋಮಿನ ನಡಿಗೆಯಲ್ಲ. ಶಾಂತಿಯುತವಾಗಿ ನಡೆಯುವಂತಹ ನಡಿಗೆ. ಇದರಲ್ಲಿ ಎಲ್ಲರೂ ಭಾಗವಹಿಸುವುದಕ್ಕೆ ಅವಕಾಶವಿದೆ. ನೂರಕ್ಕೆ ನೂರರಷ್ಟು ಸಾಮರಸ್ಯ ನಡಿಗೆ ನಡೆಸಿಯೇ ತೀರಲು ಪ್ರಗತಿಪರರು ಹಠಕ್ಕೆ ಬಿದ್ದಿದ್ದಾರೆ.
ಪ್ರಗತಿಪರರು ಹಾಗೂ ಹಿಂದೂ ಸಂಘಟನೆಯವರ ಹಠದ ನಡುವೆ ಪೊಲೀಸರಿಗೆ ತಲೆಬಿಸಿ ಉಂಟುಮಾಡಿದೆ. ಮದ್ದೂರಿನ ಗಣೇಶನನ್ನು ನೆನೆಸಿಕೊಂಡರೆ ಹಲವು ಅಧಿಕಾರಿಗಳಿಗೆ ಚಳಿಜ್ವರ ಬರುವಂತಾಗಿದೆ. ಈ ಮಧ್ಯೆ ಪ್ರಗತಿಪರ ಮುಖಂಡರನ್ನು ಕರೆದು ಸಭೆ ನಡೆಸಿ ಸಾಮರಸ್ಯ ನಡಿಗೆ ನಡೆಸದಂತೆ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಮತ್ತೆ ಪಟ್ಟಣದಲ್ಲಿ ಶಾಂತಿ ಕದಡಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಸಾಮರಸ್ಯ ನಡಿಗೆಗೆ ಪ್ರತಿಯಾಗಿ ಹಿಂದೂ ಸಂಘಟನೆಯವರು ರ್ಯಾಲಿ ನಡೆಸಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಹಾಗಾಗಿ ಯಾವುದನ್ನೂ ಮುಂದುವರೆಸದೆ ಎಲ್ಲದಕ್ಕೂ ಇಲ್ಲಿಗೇ ಫುಲ್‌ಸ್ಟಾಪ್ ಹಾಕಲು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ ದಿನದಿಂದ ಆರಂಭವಾಗಿ ಇಲ್ಲಿಯವರೆಗೂ ಪೊಲೀಸರು ಸುಧಾರಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತೊಮ್ಮೆ ಇಂತಹ ಗಲಾಟೆಗಳು ನಡೆಯುವುದಕ್ಕೆ ಅವಕಾಶ ನೀಡಿದರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರಕ್ಷಕ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿ ಕೈತೊಳೆದುಕೊಂಡಿದ್ದಾರೆ. ವಿದೇಶದಿಂದ ವಾಪಸಾಗಿರುವ ಶಾಸಕ ಕೆ.ಎಂ.ಉದಯ್ ಅವರೂ ಕೂಡ ಈ ವಿಷಯವಾಗಿ ಇನ್ನೂ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸದೆ ಮೌನ ವಹಿಸಿದ್ದಾರೆ. ಹೀಗಾಗಿ ಮದ್ದೂರಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.ಕೋಮು ಸಾಮರಸ್ಯ ನಡಿಗೆಗೆ ಅವಕಾಶ ನೀಡದಿರಲು ನಿರ್ಧರಿಸಿದ್ದೇವೆ. ಜಾಮೀಯಾ ಮಸೀದಿ ಅಧ್ಯಕ್ಷ ಆದಿಲ್ ಎಂಬುವರು ಸಾಮರಸ್ಯ ನಡಿಗೆಗೆ ಹಣ ವಿನಿಯೋಗಿಸುವುದಾಗಿ ಹೇಳಿದ್ದಾರೆ. ಇದರಿಂದ ಪ್ರಚೋದನೆ ನೀಡಿದಂತಾಗುತ್ತದೆ. ಈ ಕುರಿತಂತೆ ಹಿಂದೂ ಹಿತರಕ್ಷಣಾ ವೇದಿಕೆಯವರು ದೂರು ನೀಡಿದ್ದಾರೆ. ಮತ್ತೆ ಮದ್ದೂರಿನಲ್ಲಿ ಶಾಂತಿ ಕದಡಲು ಅವಕಾಶವಾಗದಂತೆ ಸಾಮರಸ್ಯ ನಡಿಗೆಗೆ ಅವಕಾಶ ನೀಡುವುದಿಲ್ಲ.
- ಸಂತೋಷ್, ಎಳನೀರು ವರ್ತಕನಾವು ಸಾಮರಸ್ಯ ನಡಿಗೆ ಮಾಡೇ ಮಾಡುತ್ತೇವೆ. ಅದನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ಪೊಲೀಸರು ಅದಕ್ಕೆ ಅನುಮತಿ ನೀಡುವುದಿಲ್ಲ ಎನ್ನುವುದರಲ್ಲಿ ಅರ್ಥವಿಲ್ಲ. ಬೇಕಾದರೆ ನಮ್ಮನ್ನು ಬಂಧಿಸಲಿ. ಸಾಮರಸ್ಯ ನಡಿಗೆಯಲ್ಲಿ ಇಂತಹವರೇ ಭಾಗವಹಿಸಬೇಕೆಂಬ ನಿಯಮವೇನಿಲ್ಲ. ಸಾಮರಸ್ಯ ಬಯಸುವವರೆಲ್ಲರೂ ಭಾಗವಹಿಸಬಹುದು. ಇದಕ್ಕಾಗಿ ಪ್ರತ್ಯೇಕವಾಗಿ ಯಾರೊಂದಿಗೂ ಸಭೆ ನಡೆಸಿಲ್ಲ.