ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ವಿರುದ್ಧ ನಾವು ವೈಯಕ್ತಿಕವಾಗಿ ಆರೋಪಗಳನ್ನು ಮಾಡುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸ್ಪಷ್ಟಪಡಿಸಿದರು.
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ವಿಳಾಸವನ್ನು ಚುನಾವಣೆ ಫಲಿತಾಂಶದ ನಂತರ ಹುಡುಕಿಕೊಂಡು ಹೋಗುವಂತಹ ಪರಿಸ್ಥಿತಿ ಬರುತ್ತದೆ ಎನ್ನುವ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಫಲಿತಾಂಶದ ನಂತರ ಅಲ್ವಾ, ನಾನು ಕೂಡ ಚುನಾವಣೆ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ಈಗ ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಟಾಂಗ್ ನೀಡಿದರು.
ರಮೇಶ ಜಾರಕಿಹೊಳಿ ಕಾಂಗ್ರೆಸ್ ನಾಯಕರನ್ನು ಸೈಲೆಂಟ್ ಆಗಿ ಬಿಜೆಪಿಗೆ ಸೆಳೆಯುತ್ತಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ನನಗೇನೂ ಹಾಗೆ ಅನಿಸುವುದಿಲ್ಲ, ಅವರ ತಂತ್ರವನ್ನು ಅವರು ಮಾಡುತ್ತಾರೆ. ನಮ್ಮ ತಂತ್ರವನ್ನು ನಾವು ಮಾಡುತ್ತೇವೆ. ಅಂತಿಮವಾಗಿ ಮತರಾರರು ಯಾರಿಗೆ ಆಶೀರ್ವಾದ ಮಾಡುತ್ತಾರೋ ಅವರು ಗೆಲ್ಲುತ್ತಾರೆ ಎಂದು ತಿಳಿಸಿದರು.ಸಿದ್ದರಾಮಯ್ಯ ಪ್ರಚಾರಕ್ಕೆ ಬರುತ್ತಾರಾ ಎನ್ನುವ ಪ್ರಶ್ನೆಗೆ, ಮೊದಲ ಹಂತದ ಚುನಾವಣೆ ಮುಗಿದ ನಂತರ ಸಿದ್ದರಾಮಯ್ಯ 2 ಬಾರಿ ಪ್ರಚಾರಕ್ಕೆ ಬರುತ್ತಾರೆ. ಬೆಳಗಾವಿ, ಚಿಕ್ಕೋಡಿ ಮತ್ತು ಕಿತ್ತೂರಿನಲ್ಲಿ ಪ್ರಚಾರ ಮಾಡುತ್ತಾರೆ ಎಂದು ತಿಳಿಸಿದರು.
ಮಹಾರಾಷ್ಟ್ರದ ಯಾವ ನಾಯಕರು ಬರುತ್ತಾರೆ ಎನ್ನುವ ಪ್ರಶ್ನೆಗೆ, ಸ್ಟಾರ್ ಪ್ರಚಾರಕರ ಪಟ್ಟಿಯನ್ನು ನಮ್ಮ ಪಕ್ಷದ ಹೈಕಮಾಂಡ್‌ನವರು ಬಿಡುಗಡೆ ಮಾಡಿದ್ದಾರೆ. ಅವರವರ ಜನಪ್ರಿಯತೆಯನ್ನು ಆಧರಿಸಿ ಸ್ಟಾರ್ ಪ್ರಚಾರಕರನ್ನು ಆಯಾ ಕ್ಷೇತ್ರಗಳಿಗೆ ಕಳಿಸುತ್ತಾರೆ ಎಂದರು.ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಬೆಳಗಾವಿ ಜಿಲ್ಲೆಯ ಜನರು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿರುವುದನ್ನು ರಾಜ್ಯದ ಜನರು ನೋಡಿದ್ದಾರೆ. ಆಗ ಯಾರ್‍ಯಾರು ನಮ್ಮ ವಿರುದ್ಧ ಕೆಲಸ ಮಾಡಿದ್ದರು, ಯಾರ್‍ಯಾರು ಗುಪ್ತ ಸಭೆ ಮಾಡಿದ್ದಾರೆ, ಯಾರ್‍ಯಾರು ದೊಡ್ಡ ದೊಡ್ಡ ಸಭೆಗಳನ್ನು ಮಾಡಿದ್ದಾರೆ ಎನ್ನುವುದನ್ನು ಎಲ್ಲರೂ ನೋಡಿದ್ದಾರೆ. ಆಗ ಜನರು ಏನು ಉತ್ತರ ಕೊಟ್ಟಿದ್ದಾರೆ ಎನ್ನುವುದನ್ನೂ ಜನರು ನೋಡಿದ್ದಾರೆ. ಈಗಲೂ ಜನರು ಅದೇ ರೀತಿ, ಅದಕ್ಕಿಂತ ದೊಡ್ಡ ಉತ್ತರವನ್ನು ಕೊಡುತ್ತಾರೆ ಎಂದರು.ಬೆಳಗಾವಿ, ಚಿಕ್ಕೋಡಿ ಮತ್ತು ಕೆನರಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಕುರಿತು ದಿನದಿಂದ ದಿನಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಜನರಿಗೆ ಸಂಪೂರ್ಣ ವಿಶ್ವಾಸ ಮೂಡಿದೆ. ಮೂರೂ ಕ್ಷೇತ್ರಗಳಲ್ಲಿ ಅತ್ಯಧಿಕ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ, ಸಚಿವೆ.