ಕನ್ನಡಪ್ರಭ ವಾರ್ತೆ ಮಂಗಳೂರು
ಸಂವಿಧಾನ ಉಳಿಸಲು ರಾಜ್ಯ ಸರ್ಕಾರ ಸಮಾವೇಶ ಮಾಡುವುದು ತಪ್ಪಲ್ಲ. ನಾವು ಕೂಡ ಅದನ್ನು ಗೌರವಿಸುತ್ತೇವೆ. ಆದರೆ ಸಂವಿಧಾನ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿಕೊಂಡು ರಾಜಕೀಯ ಮಾಡುವುದನ್ನು ಕೈಬಿಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಕಾರ್ಯಕ್ರಮದ ಮೂಲಕ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಅವರನ್ನು ನಿಂದಿಸುವ ಕೆಲಸಕ್ಕೆ ಜನರ ತೆರಿಗೆ ಹಣ ಪೋಲು ಮಾಡುವುದು ಸರಿಯಲ್ಲ. ರಾಜಕೀಯ ದ್ವೇಷಕ್ಕೆ ಸಂವಿಧಾನ, ಅಂಬೇಡ್ಕರ್ ಹೆಸರು ಬಳಕೆ ಸಲ್ಲದು ಎಂದರು.
ರಾಜಕಾರಣಕ್ಕಾಗಿಯೇ ಅಂಬೇಡ್ಕರ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಸಂವಿಧಾನ ರಚನೆ ಸಮಯದಲ್ಲಿ ಕಾಂಗ್ರೆಸ್ ಮಾಡಿದ ಕೃತ್ಯಗಳು ಜನರಿಗೆ ಗೊತ್ತಿವೆ ಎಂದ ಕೋಟ, ದೇಶವನ್ನು ಜೋಡಿಸುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಈಗ ರಾಹುಲ್ ಗಾಂಧಿ ಕೇವಲ ರಾಜಕೀಯಕ್ಕಾಗಿ ಯಾತ್ರೆ ಆರಂಭ ಮಾಡಿದ್ದಾರೆ ಎಂದು ಟೀಕಿಸಿದರು.ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ.ಮಂಜುನಾಥ್ ಅವರು ದೇವೇಗೌಡರ ಕುಟುಂಬ ಎಂಬ ಒಂದೇ ಕಾರಣಕ್ಕೆ ಅವರ ವಿರುದ್ಧ ತನಿಖೆ ಮಾಡುವ ಕೃತ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಜನಹಿತದ ಬಗ್ಗೆ ಗಮನ ಕೊಡಬೇಕಾದ ಸರ್ಕಾರ ರಾಜಕಾರಣವನ್ನು ಯಾವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ಕೋಟ ಆರೋಪಿಸಿದರು.
ಟಿಕೆಟ್ ಅಪೇಕ್ಷೆ ತಪ್ಪಲ್ಲ: ದಕ್ಷಿಣ ಕನ್ನಡ ಲೋಕಸಭೆ ಚುನಾವಣೆಗೆ ಟಿಕೆಟ್‌ಗಾಗಿ ಕಾರ್ಯಕರ್ತರು ಅಪೇಕ್ಷೆ ಪಡುವುದು ತಪ್ಪಲ್ಲ. ಅರುಣ್ ಪುತ್ತಿಲ, ಸತ್ಯಜಿತ್ ಸುರತ್ಕಲ್, ರಾಮಚಂದರ್ ಬೈಕಂಪಾಡಿ ಉತ್ತಮ ಕಾರ್ಯಕರ್ತರು. ಅವರು ಟಿಕೆಟ್‌ಗಾಗಿ ಅಪೇಕ್ಷೆ ವ್ಯಕ್ತಪಡಿಸಿದ ಮಾತ್ರಕ್ಕೆ ಅದು ಪಕ್ಷದ ಅಶಿಸ್ತು ಆಗಲ್ಲ. ಅಂತಿಮವಾಗಿ ಪಕ್ಷದ ವರಿಷ್ಠರು ಟಿಕೆಟ್ ನೀಡಿದ ಮೇಲೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಲೋಕಸಭಾ ಕ್ಷೇತ್ರದ ಸಂಚಾಲಕ ನಿತಿನ್ ಕುಮಾರ್ ಮತ್ತಿತರರು ಇದ್ದರು. ರಾಹುಲ್ ಹೇಳಿಕೆ: ಮಹಿಳಾ ಮೋರ್ಚಾ ಖಂಡನೆ
ಮಹಿಳೆಯರನ್ನು ಗೌರವದಿಂದ ಕಾಣುವ ಭಾರತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಟಿ ಐಶ್ವರ್ಯ ರೈ ಕುರಿತು ಕೀಳು ಮಟ್ಟದ ಪದ ಬಳಕೆ ಮಾಡಿದ್ದು ಖಂಡನೀಯ ಎಂದು ದ.ಕ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಆಕ್ಷೇಪಿಸಿದೆ.ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ಇತ್ತೀಚೆಗೆ ಕಾಂಗ್ರೆಸ್ ನಾಯಕರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಕರಾವಳಿ ಮೂಲದ ನಟಿ ಐಶ್ವರ್ಯ ರೈ ದೇಶಕ್ಕೆ ಕೀರ್ತಿ ತಂದುಕೊಟ್ಟವರು. ಅವರ ನಟನೆ ಇಡೀ ಜಗತ್ತಿಗೆ ಗೊತ್ತಿದೆ. ಡ್ಯಾನ್ಸಿಂಗ್, ಮಾಡೆಲಿಂಗ್ ಕ್ಷೇತ್ರದಲ್ಲಿ ಮಹಿಳೆಯರು ಇರಬಾರದಾ? ಕರ್ನಾಟಕದ ಮಹಿಳೆಯ ಬಗ್ಗೆ ಮಾತನಾಡುವಾಗ ಸಿದ್ದರಾಮಯ್ಯ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪೂಜಾ ಪೈ, ಕಾರ್ಯದರ್ಶಿ ಪೂರ್ಣಿಮಾ, ಪ್ರ.ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್ ಇದ್ದರು.