ವಿದ್ಯುತ್‌ ಸಮಸ್ಯೆ ಇಲ್ಲ, ಮುಂದೆಯೂ ಆಗಲ್ಲ- ಲಾಡ್‌

KannadaprabhaNewsNetwork | Published : Nov 2, 2023 1:01 AM

ಸಾರಾಂಶ

, ಮುಂದಿನ ಬೇಸಿಗೆ ಕಾಲ ಗಮನದಲ್ಲಿಟ್ಟು ವಿದ್ಯುತ್ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಆರು ಗಂಟೆಗಳ ಕಾಲ ವಿದ್ಯುತ್‌ನ್ನು ಹಗಲು ನಾಲ್ಕು ಮತ್ತು ರಾತ್ರಿ ಎರಡು ಗಂಟೆಯಂತೆ ಪೂರೈಸಲಾಗುತ್ತಿದೆ ಎಂದು ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ

ಕನ್ನಡಪ್ರಭ ವಾರ್ತೆ ಧಾರವಾಡ

ಮನೆ, ತೋಟದ ಮನೆ, ಕಾರ್ಖಾನೆ, ವಾಣಿಜ್ಯ ಚಟುವಟಿಕೆಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇಲ್ಲಿ ವರೆಗೆ ವಿದ್ಯುತ್ ವಿತರಣೆ ಕುರಿತು ಸಮಸ್ಯೆ ಉಂಟಾಗಿಲ್ಲ. ಮುಂದೆಯೂ ಸಮಸ್ಯೆ ಆಗದಂತೆ ಹೆಸ್ಕಾಂ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಲು ಕಾರ್ಮಿಕ ಹಾಗೂ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ವಿದ್ಯುತ್ ಪೂರೈಕೆ ಸಮಿತಿ ಸಭೆ ಜರುಗಿಸಿದ ಅವರು, ಮುಂದಿನ ಬೇಸಿಗೆ ಕಾಲ ಗಮನದಲ್ಲಿಟ್ಟು ವಿದ್ಯುತ್ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಆರು ಗಂಟೆಗಳ ಕಾಲ ವಿದ್ಯುತ್‌ನ್ನು ಹಗಲು ನಾಲ್ಕು ಮತ್ತು ರಾತ್ರಿ ಎರಡು ಗಂಟೆಯಂತೆ ಪೂರೈಸಲಾಗುತ್ತಿದೆ. ಕಬ್ಬು ಹಾಗೂ ಭತ್ತ ಬೆಳೆಯುವ ರೈತರಿಗೆ ಬೇಡಿಕೆ ಅನುಸಾರವಾಗಿ ಆರು ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಬರಗಾಲವಿದ್ದರೂ ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ರೈತರಿಗೆ ಬೆಳೆಗಳಿಗೆ ನೀರುಣಿಸಲು ಅನುಕೂಲವಾಗುವಂತೆ ಪ್ರತಿದಿನ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗದಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ರೈತರು ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಬಳಸಲು ಹೆಸ್ಕಾಂ ಸಿಬ್ಬಂದಿ ಜಾಗೃತಿ ಮೂಡಿಸಬೇಕೆಂದರು.

ಕೃಷಿ ಪಂಪ್‌ಸೆಟ್‌ಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಹೊಂದಿದ್ದ ರೈತರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಸಕ್ರಮಗೊಳಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು. ಸಾಕಷ್ಟು ಜನ ರೈತರು ಈ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಈಗಲೂ ಕೆಲವು ರೈತರು ತಮ್ಮ ಪಂಪ್‌ಸೆಟ್‌ಗಳಿಗೆ ಜಮೀನು ಹತ್ತಿರದ ಟಿ.ಸಿ.ಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುವದರಿಂದ ಟಿ.ಸಿ.ಗೆ ಓವರ್ ಲೋಡ್ ಉಂಟಾಗಿ ಟಿಸಿ ಸುಡುತ್ತಿವೆ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ.

ಆದ್ದರಿಂದ ರೈತರು ಟಿ.ಸಿ. ಸಾಮರ್ಥ್ಯಕ್ಕೆ ತಕ್ಕಂತೆ ವಿದ್ಯುತ್ ಸಂಪರ್ಕಪಡೆಯಬೇಕು. ಈ ಕುರಿತು ಹೆಸ್ಕಾಂ ಜಾಗೃತದಳ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲಿ ಎಂದರು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ತಾಂತ್ರಿಕ ನಿರ್ದೇಶಕ ಶ್ರೀಕಾಂತ್ ಸಸಾಲಟ್ಟಿ ಮಾತನಾಡಿ, ಜಿಲ್ಲೆಗೆ ನಿತ್ಯ ಐದು ಮಿಲಿಯನ್ ಯೂನಿಟ್ ವಿದ್ಯುತ್ ಅಗತ್ಯವಿದೆ. ಈಗಾಗಲೇ 4.5 ಮಿಲಿಯನ್ ಯೂನಿಟ್ ವಿದ್ಯುತ್ ಪೂರೈಕೆಯಾಗುತ್ತಿದ್ದು, ಯಾವುದೇ ಸಮಸ್ಯೆ ಇಲ್ಲದೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರೈತರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ವಿತರಿಸಲಾಗುತ್ತಿದೆ. ಜಿಲ್ಲೆಯ ನರೇಂದ್ರದಲ್ಲಿ 400 ಕೆ.ವಿ ಮತ್ತು 220 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ, 220 ಕೆ.ವಿ ಹುಬ್ಬಳ್ಳಿ, 220 ಕೆ.ವಿ, ಬಿಡ್ನಾಳ್ ಹಾಗೂ 110 ಕೆ.ವಿ.ಯ 22 ಮತ್ತು 33 ಕೆ.ವಿ. ಯ 10 ವಿದ್ಯುತ್ ವಿತರಣಾ ಕೇಂದ್ರಗಳಿವೆ. ಜಿಲ್ಲೆಯಲ್ಲಿ ಒಟ್ಟು ವಿವಿಧ ಸಾಮರ್ಥ್ಯದ 36 ವಿದ್ಯುತ್ ವಿತರಣಾ ಕೇಂದ್ರಗಳಿದ್ದು, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ತಾಂತ್ರಿಕ ನಿರ್ದೇಶಕ ಶ್ರೀಕಾಂತ್ ಸಸಾಲಟ್ಟಿ ತಿಳಿಸಿದರು.

ಜಿಲ್ಲೆಯಲ್ಲಿ ರೈತರ ಹಾಗೂ ಕೈಗಾರಿಕೆಗಳ ಅನುಕೂಲಕ್ಕಾಗಿ ಕಲಘಟಗಿಯಲ್ಲಿ ಒಂದು, ಹುಬ್ಬಳ್ಳಿಯಲ್ಲಿ ಎರಡು ವಿದ್ಯುತ್ ಪರಿವರ್ತಕಗಳ (ಟಿಸಿ) ರಿಪೇರಿ ಕೇಂದ್ರಗಳಿವೆ ಎಂಬ ಮಾಹಿತಿ ಸಹ ನೀಡಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮತ್ತು ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಬರುವುದರಿಂದ ವಿದ್ಯುತ್ ಸರಬರಾಜುವಿನಲ್ಲಿ ಅಡಚಣೆಯಾಗದಂತೆ ಅಧಿಕಾರಿಗಳು ನಿರಂತರ ನಿಗಾವಹಿಸಬೇಕು.

ಸಭೆಯಲ್ಲಿ ಜಿಪಂ ಸಿಇಒ ಸ್ವರೂಪಾ ಟಿ.ಕೆ., ಎಸ್ಪಿ ಡಾ. ಗೋಪಾಲ್ ಬ್ಯಾಕೋಡ, ಹೆಸ್ಸಾಂ ಅಧಿಕಾರಿಗಳಾದ ಎಸ್.ಎಸ್. ಜಂಗಿನ್, ನಿರ್ಮಲಾ ಸಿ.ಸಿ., ಎಂ.ಟಿ. ದೊಡ್ಡಮನಿ, ಎಂ.ಎಂ. ನದಾಫ್, ಸುಜಾತಾ.ಎಂ ಮತ್ತಿತರರು ಇದ್ದರು.

ಉಚಿತ ಸಹಾಯವಾಣಿಯ ಸಹಾಯ ಪಡೆಯಲು ಕರೆ

ವಿದ್ಯುತ್ ಬಳಕೆದಾರರಿಗೆ ಉಂಟಾಗುವ ಸಮಸ್ಯೆಗಳ ನಿವಾರಣೆಗೆ ತಕ್ಷಣ ಕ್ರಮ ಜರುಗಿಸಲು ಅನುಕೂಲವಾಗಲು ಉಚಿತ ಸಹಾಯವಾಣಿ 1912 ಅಥವಾ 18004251033 ಕರೆ ಮಾಡಬಹುದು ಮತ್ತು ವಿಶೇಷವಾಗಿ ವಿದ್ಯುತ್ ಪರಿವರ್ತಕ (ಟಿ.ಸಿ) ಸಮಸ್ಯೆಗಳಿದ್ದರೆ ಟೋಲ್ ಫ್ರೀ ನಂಬರ್ 18004254754ಗೆ ಕರೆ ಮಾಡಿ ತಮ್ಮ ದೂರು ದಾಖಲಿಸಬಹುದು. ಸಂಬಂಧಿತ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಾರೆ. ರೈತರು, ಸಾರ್ವಜನಿಕರು ಈ ಉಚಿತ ಸಹಾಯವಾಣಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಚಿವ ಲಾಡ್‌ ಸಾರ್ವಜನಿಕರಿಗೆ ಸಭೆಯಲ್ಲಿ ಮನವಿ ಮಾಡಿದರು.

Share this article