ಮೆಕ್ಕೆಜೋಳಕ್ಕಿಲ್ಲ ಬೆಲೆ: ರಾಶಿ ಮಾಡಲು ಮುಂದಾಗದ ರೈತ

KannadaprabhaNewsNetwork |  
Published : Nov 20, 2025, 01:30 AM IST
ಪೋಟೊ18ಕೆಎಸಟಿ2: ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದ ರೈತ ಬಸವರಾಜ ಜಿಗೇರಿಯ ಜಮೀನಿನಲ್ಲಿರುವ ಮೆಕ್ಕೆಜೋಳ ಬೆಳೆಯನ್ನು ರಾಶಿ ಮಾಡದೆ ಹಾಗೆ ಬಿಟ್ಟಿರುವದು. | Kannada Prabha

ಸಾರಾಂಶ

ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಪ್ರಾರಂಭಿಸುವ ಮೂಲಕ ಕಷ್ಟಕ್ಕೀಡಾಗಿರುವ ರೈತರನ್ನು ಕಾಪಾಡಬೇಕು

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಕೆಲವು ರೈತರು ಬಂದಿರುವ ಬೆಳೆಯನ್ನು ರಾಶಿ ಮಾಡದೇ ಜಮೀನಿನಲ್ಲಿಯೆ ಬಿಟ್ಟಿರುವ ದೃಶ್ಯಗಳು ತಾಲೂಕಿನಲ್ಲಿ ಕಂಡು ಬರುತ್ತಿವೆ.

ಹೌದು. ತಾಲೂಕಿನ ಕಡೇಕೊಪ್ಪ ಗ್ರಾಮದ ಬಸವರಾಜ ಜಿಗೇರಿ ಎಂಬ ರೈತರು ಐದು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಫಸಲು ಸಮೃದ್ಧವಾಗಿ ಬಂದಿದ್ದರೂ ಸೂಕ್ತ ಬೆಲೆ ಇಲ್ಲದೆ ಮೆಕ್ಕೆಜೋಳ ತೆನೆ ಮುರಿಯದೆ ಹಾಗೇ ಬಿಟ್ಟಿದ್ದಾರೆ.

ದರ ಕಡಿಮೆ:ಮೆಕ್ಕೆಜೋಳಕ್ಕೆ ಪ್ರತಿ ವರ್ಷವೂ ಅಂದಾಜು ₹2500 ಇರುತ್ತಿತ್ತು, ಆದರೆ ಮೆಕ್ಕೆಜೋಳವೂ ಯಥೇಚ್ಛ ಪ್ರಮಾಣದಲ್ಲಿ ಆವಕವಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ಕ್ವಿಂಟಲ್‌ ಜೋಳಕ್ಕೆ ಕೇವಲ ₹1700-1800 ಇದೆ. ಇಷ್ಟು ಕಡಿಮೆ ದರಕ್ಕೆ ಮಾರಾಟ ಮಾಡಿದ್ದಲ್ಲಿ ಬಿತ್ತನೆಯ ಖರ್ಚು ಸಹಿತ ಬರುವುದಿಲ್ಲ ಎಂದು ಅರಿತು ರೈತರು ರಾಶಿ ಮಾಡದೆ ಹಾಗೆ ಬಿಟ್ಟಿದ್ದಾರೆ.

ಸಾವಿರಾರು ಖರ್ಚು: ಬಿತ್ತನೆಯ ಸಮಯದಲ್ಲಿ ಗೊಬ್ಬರ, ಬೀಜ ಖರೀದಿ, ಬಿತ್ತನೆ ಖರ್ಚು, ಕೂಲಿ ಆಳು, ಕ್ರಿಮಿನಾಶಕ ಸಿಂಪಡಣೆ ಸೇರಿದಂತೆ ಅನೇಕ ಕೃಷಿ ಕಾರ್ಯಗಳ ಸಲುವಾಗಿ ಒಂದು ಎಕರೆಗೆ ಸುಮಾರು ₹10 ಸಾವಿರಗಳಂತೆ ಸಾವಿರಾರು ಖರ್ಚು ಮಾಡಿಕೊಂಡಿರುವ ಮೆಕ್ಕೆಜೋಳ ಬೆಳೆದ ರೈತನ ಬಾಳು ಹೇಳತೀರದಾಗಿದೆ.

ಖರೀದಿ ಕೇಂದ್ರಕ್ಕೆ ಒತ್ತಾಯ: ಕುಷ್ಟಗಿ ತಾಲೂಕಿನ ಬಹುತೇಕ ರೈತರು ಮೆಕ್ಕೆಜೋಳವನ್ನು ಮನೆಯಲ್ಲಿ ಇಟ್ಟುಕೊಂಡಿದ್ದು, ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಪ್ರಾರಂಭಿಸುವ ಮೂಲಕ ಕಷ್ಟಕ್ಕೀಡಾಗಿರುವ ರೈತರನ್ನು ಕಾಪಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕಡೇಕೊಪ್ಪ ಗ್ರಾಮದ ಐದು ಎಕರೆಯ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು, ಸಮೃದ್ಧವಾಗಿ ಬೆಳೆ ಬಂದಿದ್ದರೂ ಸಹಿತ ದರ ಕಡಿಮೆ ಇರುವ ಕಾರಣ ಇನ್ನೂ ರಾಶಿ ಮಾಡಲು ಮುಂದಾಗಿಲ್ಲ. ತಾಲೂಕಿನಲ್ಲಿ ಬಹುತೇಕ ರೈತರು ಮೆಕ್ಕಜೋಳ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿಲ್ಲ, ಸಾಲ ಮಾಡುವ ಮೂಲಕ ಬೆಳೆ ಬೆಳೆಯಲಾಗಿದ್ದು, ಸರ್ಕಾರ ರೈತರ ಕಷ್ಟ ಅರಿತುಕೊಂಡು ತಾಲೂಕಿನಲ್ಲಿ ಖರೀದಿ ಕೇಂದ್ರ ಪ್ರಾರಂಭ ಮಾಡಿದರೆ ರೈತರಿಗೆ ಅನೂಕೂಲಕರವಾಗಲಿದೆ ಎಂದು ಕಡೇಕೊಪ್ಪ ಗ್ರಾಮದ ರೈತ ಬಸವರಾಜ ಜಿಗೇರಿ ತಿಳಿಸಿದ್ದಾರೆ.

PREV

Recommended Stories

ಡಿ. 4 ರಂದು ಕೊಡಗಿನ ಹುತ್ತರಿ ಹಬ್ಬ
ಬಿಹಾರದಲ್ಲಿ ಕಪಾಳಮೋಕ್ಷ, ರಾಹುಲ್ ಗಾಂಧಿ ಕಾಣೆ: ಬಿ.ವೈ.ವಿಜಯೇಂದ್ರ