ಯಾವ ಧರ್ಮವೂ ಸಣ್ಣದಲ್ಲ, ದೊಡ್ಡದೂ ಅಲ್ಲ

KannadaprabhaNewsNetwork | Published : Mar 29, 2025 12:30 AM

ಸಾರಾಂಶ

ಭಾರತದಲ್ಲಿರುವ ಎಲ್ಲ ಧರ್ಮೀಯರೂ ಭಾರತೀಯರೇ. ನಮ್ಮ ಧರ್ಮ ದೊಡ್ಡದು, ಇನ್ನೊಬ್ಬರ ಧರ್ಮ ಸಣ್ಣದು ಎನ್ನುವ ಮನೋಭಾವ ಬಿಡಬೇಕು. ಸಹೋದರರಂತೆ ಬಾಳ್ವೆ ನಡೆಸುವ ಮೂಲಕ ಇಡೀ ವಿಶ್ವಕ್ಕೆ ಮಾದರಿ ಆಗಬೇಕು ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದಿದ್ದಾರೆ.

- ಸೌಹಾರ್ದ ಇಫ್ತಿಯಾರ್‌ ಕೂಟದಲ್ಲಿ ವಿರಕ್ತ ಮಠದ ಡಾ.ಬಸವಪ್ರಭು ಶ್ರೀ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತದಲ್ಲಿರುವ ಎಲ್ಲ ಧರ್ಮೀಯರೂ ಭಾರತೀಯರೇ. ನಮ್ಮ ಧರ್ಮ ದೊಡ್ಡದು, ಇನ್ನೊಬ್ಬರ ಧರ್ಮ ಸಣ್ಣದು ಎನ್ನುವ ಮನೋಭಾವ ಬಿಡಬೇಕು. ಸಹೋದರರಂತೆ ಬಾಳ್ವೆ ನಡೆಸುವ ಮೂಲಕ ಇಡೀ ವಿಶ್ವಕ್ಕೆ ಮಾದರಿ ಆಗಬೇಕು ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದರು.

ನಗರದ ಅಶೋಕ ರಸ್ತೆಯ ಪಂಪಾಪತಿ ಭವನದಲ್ಲಿ ಸೋಮವಾರ ಸಂಜೆ ಸುರೇಶ್, ಶೇಖರಪ್ಪ, ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಇಫ್ತಿಯಾರ್‌ ಕೂಟದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದೇಶದ ಎಲ್ಲ ಧರ್ಮೀಯರು ಸಮನ್ವಯತೆಯಿಂದ ಬಾಳುವ ಮೂಲಕ ಸಮಾನತೆ ಸಮಗ್ರತೆ ಮತ್ತು ಭಾವೈಕ್ಯತೆಯಿಂದ ಮುನ್ನಡೆಯಬೇಕಾಗಿದೆ. ಭಾರತದ ಶಾಂತಿಯನ್ನು, ಏಕತೆಯನ್ನು ಇಡೀ ವಿಶ್ವಕ್ಕೆ ತೋರಿಸುವ ಮೂಲಕ ಆದರ್ಶ ರಾಷ್ಟ್ರವಾಗಿ ಮೆರೆಯಬೇಕಾಗಿದೆ. ಈ ಮೂಲಕ ರಾಷ್ಟ್ರವನ್ನು ಸ್ವರ್ಗವನ್ನಾಗಿ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ರಾಘವೇಂದ್ರ ಕೆ. ನಾಯರಿ ಮಾತನಾಡಿ, ನಮ್ಮ ದೇಶ ಬಲಾಢ್ಯವಾಗಿ ಬೆಳೆಯಬೇಕಾಗಿದೆ. ಮುಸ್ಲಿಮರು ಕೂಡ ದೇಶದ ಅವಿಭಾಜ್ಯ ಅಂಗ. ಯಾವುದೇ ವದಂತಿಗಳಿಗೆ ಕಿವಿಗೊಡದೇ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಶಾಂತಿಯಿಂದ ಆಚರಿಸಬೇಕು. ಯಾವುದೇ ಜಾತಿ-ಧರ್ಮ ಮತಗಳು ಹೇಳುವುದು ಶಾಂತಿಯನ್ನು ಮಾತ್ರವಲ್ಲದೇ ಬಹುತ್ವ ಬಂದು ಹೋಗಬೇಕಾಗಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಯಾವುದೇ ಧರ್ಮದವರಾಗಲಿ ಕರ್ನಾಟಕದಲ್ಲಿದ್ದರೆ ಅವರು ಕನ್ನಡವನ್ನು ಕಡ್ಡಾಯವಾಗಿ ಮಾತನಾಡಲೇಬೇಕು. ಕನ್ನಡ ಕಸ್ತೂರಿ ಇದ್ದಂತೆ. ಇದು ನಮ್ಮ ಮಾತೃಭಾಷೆಯಾಗಿದೆ. ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರೂ ವ್ಯಾವಹಾರಿಕವಾಗಿ ಕನ್ನಡ ಭಾಷೆಯನ್ನೇ ನಾವು ಮಾತನಾಡಬೇಕಾಗಿದೆ. ಆ ಮೂಲಕ ವಿವಿಧತೆಯಲ್ಲಿ ಏಕತೆ ತೋರಿಸುವ ನಿಟ್ಟಿನಲ್ಲಿ ಹಬ್ಬಗಳನ್ನು ಆಚರಿಸಬೇಕಾಗಿದೆ ಎಂದು ಹೇಳಿದರು.

ರಜಾವುಲ್ಲಾ- ಮುಸ್ತಫಾ- ದ-ಬರ್ಕಾತಿಯಾ ದಾರುಲ್ ಯತಾಮಾ ಸಂಸ್ಥಾಪಕ ಅಧ್ಯಕ್ಷ ಮೌಲಾನ್ ಮಹಮ್ಮದ್ ಹನೀಫ್ ರಜ್ಜಾ ಖಾದ್ರಿ ಸಾನ್ನಿಧ್ಯ ವಹಿಸಿದ್ದರು. ರೈತ-ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಚ್.ಜಿ. ಉಮೇಶ್ ಅಧ್ಯಕ್ಷತೆ ವಹಿಸಿದ್ದರು.

ಭಾರತ್ ಕಮ್ಯೂನಿಸ್ಟ್ ಪಕ್ಷ ಮತ್ತು ರೈತ-ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಆವರಗೆರೆ ಚಂದ್ರು, ಖಜಾಂಚಿ ಜಿ.ಯಲ್ಲಪ್ಪ, ಅಬ್ದುಲ್ ಹಮೀದ್, ಪೀರ್ ಸಾಬ್ ಬಾಗೂರ್, ಎಂ.ಖಾದರ್ ಬಾಷ, ಎಸ್.ಆನಂದಪ್ಪ, ಬಿ.ಅಜೇಯ, ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ್, ರಮೇಶ್ ಸಿ. ದಾಸರ್, ನರೇಗಾ ರಂಗನಾಥ್, ಸರೋಜಾ, ಐರಣಿ ಚಂದ್ರು, ಎಚ್.ಪಿ. ಉಮಾಪತಿ, ದಾದಾಪೀರ್, ಸುರೇಶ್ ಮುದಹದಡಿ, ಶಿವಕುಮಾರ್ ಡಿ. ಶೆಟ್ಟರ್, ಎಸ್.ಎಂ. ಸಿದ್ದಲಿಂಗಪ್ಪ, ಕೆಜೆಡಿ ಬಸವರಾಜ್, ಕೆ.ಜಿ.ಶಿವಮೂರ್ತಿ, ಮಹಮ್ಮದ್ ರಫೀಕ್, ವಿಶ್ವನಾಥ್ ಇತರರು ಇದ್ದರು.

- - - -25ಕೆಡಿವಿಜಿ32.ಜೆಪಿಜಿ:

ದಾವಣಗೆರೆಯಲ್ಲಿ ಸುರೇಶ, ಶೇಖರಪ್ಪ, ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಸೌಹಾರ್ದ ಇಫ್ತಿಯಾರ್‌ ಕೂಟ ನಡೆಯಿತು.

Share this article