ರಾಜ್ಯಕ್ಕೆ ಮರು ನಾಮಕರಣ ಬೇಡ: ಮೂಡ್ನಾಕೂಡು ಚಿನ್ನಸ್ವಾಮಿ

KannadaprabhaNewsNetwork | Published : Nov 4, 2023 12:31 AM

ಸಾರಾಂಶ

ಕರ್ನಾಟಕ ರಾಜ್ಯದ ಹೆಸರನ್ನು ಬಸವನಾಡು ಎಂಬುದಾಗಿ ಬದಲಿಸಲು ಕೆಲವು ಸಂಘಟನೆಗಳು, ಬುದ್ಧಿಜೀವಿಗಳು ಪ್ರಯತ್ನಿಸುತ್ತಿದ್ದಾರೆ. ಅಂತಹ ಪ್ರಯತ್ನಗಳನ್ನು ಕೈಬಿಡಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಏರ್ಪಡಿಸಿರುವ ಮೂರು ದಿನಗಳ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಆಲೋಚನೆಗಳಿಂದ ಬಡಿದಾಡುವ ಕೈಗಳಿಗೆ ಬಡಿಗೆ ಕೊಟ್ಟಂತಾಗುತ್ತದೆ ಎಂದು ಎಚ್ಚರಿಸಿದರು.

ಬಸವಣ್ಣನನ್ನು ರಾಜ್ಯಕ್ಕೆ ಸೀಮಿತ ಮಾಡಬೇಡಿ | ಸಿರಿಗೆರೆಯ ತರಳಬಾಳು ಮಠದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಪ್ರತಿಪಾದನೆಕನ್ನಡಪ್ರಭ ವಾರ್ತೆ ಸಿರಿಗೆರೆಕರ್ನಾಟಕ ರಾಜ್ಯದ ಹೆಸರನ್ನು ಬಸವನಾಡು ಎಂಬುದಾಗಿ ಬದಲಿಸಲು ಕೆಲವು ಸಂಘಟನೆಗಳು, ಬುದ್ಧಿಜೀವಿಗಳು ಪ್ರಯತ್ನಿಸುತ್ತಿದ್ದಾರೆ. ಅಂತಹ ಪ್ರಯತ್ನಗಳನ್ನು ಕೈಬಿಡಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಏರ್ಪಡಿಸಿರುವ ಮೂರು ದಿನಗಳ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಆಲೋಚನೆಗಳಿಂದ ಬಡಿದಾಡುವ ಕೈಗಳಿಗೆ ಬಡಿಗೆ ಕೊಟ್ಟಂತಾಗುತ್ತದೆ ಎಂದು ಎಚ್ಚರಿಸಿದರು.ಕರುನಾಡಿಗೆ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಂತಹುದರಲ್ಲಿ ಕರ್ನಾಟಕವನ್ನು ಬಸವ ಕರ್ನಾಟಕ ಮಾಡುವುದು ಸೂಕ್ತವಲ್ಲ. ಇದು ಬಾಲಿಶತನವಾಗುತ್ತದೆ. ಇದರಿಂದ ಬಸವಣ್ಣನವರನ್ನು ರಾಜ್ಯಕ್ಕೆ ಸೀಮಿತಗೊಳಿಸಿದಂತಾಗುತ್ತದೆ. ಬಸವಣ್ಣನವರ ವಚನ ಸಾಹಿತ್ಯ ಅರಿತವರು ಈ ಪ್ರಯತ್ನ ಕೈ ಹಾಕಲಾರರು. ಅವರು ಬುದ್ಧನ ಚಿಂತನೆಗಳು ಹೇಗೆ ಜಗತ್ತಿನಾದ್ಯಂತ ಪ್ರಚಲಿತವಾದವೋ ಹಾಗೆಯೇ ವಚನ ಸಾಹಿತ್ಯ ವಿಶ್ವದಾದ್ಯಂತ ಪ್ರಚಲಿತವಾಗಿವೆ. ಹಾಗಾಗಿಯೇ ಅವರನ್ನು ನಾವೆಲ್ಲ ವಿಶ್ವಗುರು ಬಸವಣ್ಣನೆಂದು ಕರೆಯುತ್ತೇವೆ. ಬಸವ ಕರ್ನಾಟಕ ಎಂದು ಮರು ನಾಮಕರಣ ಮಾಡಿದರೆ ಅವರ ಚಿಂತನೆಗಳಿಗೆ ನಾವು ಒಂದು ಚೌಕಟ್ಟನ್ನು ಹಾಕಿದಂತೆ. ಅದಕ್ಕಾಗಿಯೇ ಕರ್ನಾಟಕಕ್ಕೆ ಮರು ನಾಮಕರಣ ಮಾಡುವ ಚಿಂತನೆ ಕೂಡಲೇ ಕೈಬಿಡಬೇಕು. ಇದನ್ನು ಸರ್ಕಾರ ಗಂಭೀರವಾಗಿ ಗಮನಿಸಿಬೇಕು ಎಂದರು. ನಮ್ಮ ಸಮಾಜವು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮನುಷ್ಯನ ಮನಸು ಜಾತಿಯ ಸಂಕೋಲೆಗಳಿಂದ ಕಲುಷಿತಗೊಂಡಿದೆ. ಜಾತಿಯ ಸಮಸ್ಯೆಗಳಿಂದ ಹೊರಬೇಕಾದ ಅಗತ್ಯ ಇದೆ. ಸಮಾನತೆ ಇಲ್ಲದ ಧರ್ಮ, ಧರ್ಮವೇ ಅಲ್ಲ. ಬಾಯಾರಿದವನಿಗೆ ನೀರು ಕೊಡದ ಧರ್ಮ ಧರ್ಮವೇ ಅಲ್ಲ. ಜಾತೀಯತೆಯಿಂದ ಹೊರಬರದೇ ಇದ್ದಲ್ಲಿ ಅದು ಭವ್ಯ ಭಾರತವೆನಿಸುವುದಿಲ್ಲ. ಸಮಾನತೆ, ಸಹೋದರತೆಗಳು ಸಂವಿಧಾನದಲ್ಲಿವೆಯೇ ಹೊರತು ಸಮಾಜದಲ್ಲಿಲ್ಲ. ಅವುಗಳನ್ನು ಸಾಮಾಜಿಕವಾಗಿ ಜಾರಿಗೆ ತರಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ. ಜಾತಿಯ ಸಂಕೋಲೆಗಳಿಂದ ಮುಕ್ತಗೊಳಿಸುವ ಹೋರಾಟ ನಡೆಯಬೇಕಾಗಿದ್ದು ತರಳಬಾಳು ಶ್ರೀಗಳು ಅದರ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದರು.ಚಿಕ್ಕಮಗಳೂರಿನ ಪ್ರಾಧ್ಯಾಪಕ ಹಾಗು ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಮಾತನಾಡಿ, ನಮ್ಮ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ನೆಲ, ಜಲ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲಿದೆ. ಕನ್ನಡವನ್ನು ಪ್ರೀತಿಸುವ ಮತ್ತು ಭಾಷೆಯನ್ನು ಗೌರವಿಸುವ ವಿಚಾರವನ್ನು ನಾವು ಮಕ್ಕಳಿಗೆ ಹೇಳಿಕೊಟ್ಟರೆ ಮುಂದಿನ ಜನಾಂಗಕ್ಕೆ ಅದನ್ನು ತಲುಪಿಸಿದಂತಾಗುತ್ತದೆ ಎಂದರು.ಕನ್ನಡ ಪ್ರಾಧ್ಯಾಪಕ ಡಾ. ಟಿ.ಯಲ್ಲಪ್ಪ ದಲಿತ ಬಂಡಾಯ ಕಾವ್ಯದ ವಿಭಿನ್ನ ಆಯಾಮಗಳು ಎನ್ನುವ ವಿಷಯವನ್ನು ತಿಳಿಸಿದರು. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶುಭ ಮರವಂತೆ ‘ನಡುಗನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಎನ್ನುವ ವಿಷಯವನ್ನು ಮಂಡಿಸಿದರು. ಆಶೀರ್ವಚನ ನೀಡಿದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸ್ವಾತಂತ್ರ್ಯ ನಂತರ ಭಾಷವಾರು ಪ್ರಾಂತ್ಯಗಳ ವಿಂಗಡಣೆಯಾದ ರೀತಿಯಲ್ಲಿಯೇ ಆಯಾಯ ರಾಜ್ಯಗಳ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು. ಮಾತೃಭಾಷಾ ಶಿಕ್ಷಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷ ವಾಮದೇವಪ್ಪ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಧಾರವಾಡ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ತುಮಕೂರು ಕಸಾಪ ಅಧ್ಯಕ್ಷ ಸಿದ್ಧಲಿಂಗಪ್ಪ, ತರಳಬಾಳು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್.ಬಿ. ರಂಗನಾಥ್‌, ಆಡಳಿತಾಧಿಕಾರಿ ಡಾ. ಎಚ್.ವಿ. ವಾಮದೇವಪ್ಪ, ಮಠದ ಪ್ರಧಾನ ಕಾರ್ಯದರ್ಶಿ ರಂಗನಾಥ್ ಮುಂತಾದವರು ಭಾಗವಹಿಸಿದ್ದರು. ಕನ್ನಡ ಉಪನ್ಯಾಸಕ ಈ. ದೇವರಾಜು ನಿರೂಪಣೆ ಮಾಡಿದರು. ಕನ್ನಡ ಶಿಕ್ಷಕಿ ಚೇತನ ಗಣೇಶ್‌ ಸ್ವಾಗತಿಸಿದರು. ಉಪನ್ಯಾಸಕಿ ರಮ್ಯಾ ವಂದಿಸಿದರು.--------------------

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡಲ್ಲೇ ನಡೆಸಿ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೇಂದ್ರ ಸರ್ಕಾರವು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ನಡೆಸುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು. ರಾಜ್ಯದ ಬ್ಯಾಂಕುಗಳಲ್ಲಿ ಕನ್ನಡ ಗೊತ್ತಿಲ್ಲದ ಜನ ಬಂದು ಸೇರಿಕೊಳ್ಳುತ್ತಿದ್ದಾರೆ. ಕನ್ನಡಿಗರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಹೇಳಿದ ಚಿನ್ನಸ್ವಾಮಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಣೆ ಮಾಡಿ ಹಲವು ವರ್ಷಗಳೇ ಕಳೆದಿವೆ. ಆದರೆ ಕೇಂದ್ರವು ಸರಿಯಾದ ಅನುದಾನ ನೀಡುತ್ತಿಲ್ಲ ಎಂದರು.

Share this article