ಶಕ್ತಿಯಿಂದಾಗಿ ಸಾರಿಗೆ ವಲಯಕ್ಕೆ ನಿಶ್ಯಕ್ತಿ!

KannadaprabhaNewsNetwork | Updated : Feb 17 2024, 01:24 PM IST

ಸಾರಾಂಶ

ಶಕ್ತಿ ಯೋಜನೆಯತ್ತಲೇ ಹೆಚ್ಚು ಕೇಂದ್ರೀಕರಿಸಿದ ಕಾರಣದಿಂದಾಗಿ ರಾಜ್ಯ ಬಜೆಟ್‌ನಲ್ಲಿ ಸಾರಿಗೆ ಇಲಾಖೆಗೆ ಅಷ್ಟಾಗಿ ಒತ್ತು ನೀಡಿಲ್ಲ.

ಬೆಂಗಳೂರು: ಶಕ್ತಿ ಯೋಜನೆಯತ್ತಲೇ ಹೆಚ್ಚು ಕೇಂದ್ರೀಕರಿಸಿದ ಕಾರಣದಿಂದಾಗಿ ರಾಜ್ಯ ಬಜೆಟ್‌ನಲ್ಲಿ ಸಾರಿಗೆ ಇಲಾಖೆಗೆ ಅಷ್ಟಾಗಿ ಒತ್ತು ನೀಡಿಲ್ಲ.

ಸಾರಿಗೆ ಇಲಾಖೆಯಿಂದ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣದಂತಹ ಸಣ್ಣಪುಟ್ಟ ಯೋಜನೆಗಳಿಗಷ್ಟೇ ಬಜೆಟ್‌ನಲ್ಲಿ ಇಲಾಖೆಯ ಕಾರ್ಯಕ್ರಮಗಳನ್ನು ಸೀಮಿತಗೊಳಿಸಲಾಗಿದೆ.

ಹೊಸ ಬಸ್‌ ಖರೀದಿ ಇಲ್ಲ: ಶಕ್ತಿ ಯೋಜನೆ ಜಾರಿ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣದಿಂದಾಗಿ ಬಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು ಎಂಬ ಬೇಡಿಕೆಯಿತ್ತು. 

ಅಲ್ಲದೆ, ಅದಕ್ಕೆ ರಾಜ್ಯ ಬಜೆಟ್‌ನಲ್ಲಿ ಉತ್ತರ ದೊರೆಯಲಿದೆ ಎಂಬ ನಿರೀಕ್ಷೆಯನ್ನೂ ಹೊಂದಲಾಗಿತ್ತು. ಆದರೆ, ಬಿಎಂಟಿಸಿ ಹೊರತುಪಡಿಸಿದರೆ ಬೇರೆ ನಿಗಮಗಳಿಗೆ ಹೊಸ ಬಸ್‌ಗಳ ಖರೀದಿ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ.

ಕೇಂದ್ರಕ್ಕೆ ಮೆಟ್ರೋ ಪ್ರಸ್ತಾವನೆ: ಬಿಎಂಟಿಸಿಗೆ 1,334 ಎಲೆಕ್ಟ್ರಿಕ್‌ ಬಸ್‌ ಹಾಗೂ 820 ಬಿಎಸ್‌6 ಡೀಸೆಲ್‌ ಬಸ್‌ಗಳ ಸೇರ್ಪಡೆ ಮಾಡುವುದಾಗಿ ತಿಳಿಸಲಾಗಿದೆ. 

ಅದನ್ನು ಹೊರತುಪಡಿಸಿದರೆ ನಮ್ಮ ಮೆಟ್ರೋ 3ಎ ಹಂತದಲ್ಲಿ ಸರ್ಜಾಪುರದಿಂದ ಅಗರ, ಕೋರಮಂಗಲದಿಂದ ಡೇರಿ ವೃತ್ತ, ಮೇಖ್ರಿವೃತ್ತ ಮೂಲಕ ಹೆಬ್ಬಾಳ ಸಂಪರ್ಕಿಸುವ ಮಾರ್ಗದ ಕರಡು ಡಿಪಿಆರ್‌ಗೆ ಅನುಮೋದನೆ ಕೋರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಲಾಗಿದೆ.

ಪರೀಕ್ಷಾ ಪಥ: ಸಾರಿಗೆ ಇಲಾಖೆಯಿಂದ ಉಡುಪಿ, ಚಿಕ್ಕಬಳ್ಳಾಪುರ, ನೆಲಮಂಗಲ, ಮಡಿಕೇರಿ, ಮಧಗಿರಿ ಮತ್ತು ಹುಣಸೂರಿನಲ್ಲಿ 36 ಕೋಟಿ ರು. ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಹಾಗೂ ದೇವನಹಳ್ಳಿ ಮತ್ತು ತುಮಕೂರಿನಲ್ಲಿ 10 ಕೋಟಿ ರು. ವೆಚ್ಚದಲ್ಲಿ ಸೀಜಿಂಗ್‌ ಯಾರ್ಡ್‌ಗಳನ್ನು ನಿರ್ಮಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. 

ಹಾಗೆಯೇ, ಅರ್ಹತಾ ಪತ್ರ ನವೀಕರಣಕ್ಕೆ ಬರುವ ಎಲ್ಲ ಸಾರಿಗೆ ವಾಹನಗಳಿಗೆ ಅರ್ಹತಾ ಪರೀಕ್ಷೆ ಕೈಗೊಳ್ಳಲು ಖಾಸಗಿ ಸಗಭಾಗಿತ್ವದಲ್ಲಿ 32 ಕಡೆ ಸ್ವಯಂ ಚಾಲಿತ ಪರೀಕ್ಷಾ ಕೇಂದ್ರ ಅಭಿವೃದ್ಧಿ ಪಡಿಸುವ ಕುರಿತು ಉಲ್ಲೇಖಿಸಲಾಗಿದೆ.

Share this article