ಹಾಸ್ಟೆಲ್‌ನಲ್ಲಿ ಸೋಪ್ ಇಲ್ಲ, ಚಿಕನ್, ಬಾಳೆಹಣ್ಣು ಕೊಡ್ತಿಲ್ಲ: ವಿದ್ಯಾರ್ಥಿಗಳ ಆರೋಪ

KannadaprabhaNewsNetwork |  
Published : Jan 22, 2025, 12:30 AM IST
ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಸಂವಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನಡೆಯಿತು. | Kannada Prabha

ಸಾರಾಂಶ

ಬಿಸಿಎಂ ವಿದ್ಯಾರ್ಥಿನಿಲಯಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿರುವ ನಮಗೆ ಅವರಿಗಿಂತ ಹೆಚ್ಚಿನ ಸೌಲಭ್ಯಗಳು ದೊರೆಯಬೇಕಿತ್ತು. ಆದರೆ ಇಲ್ಲಿ ನಮಗೆ ಊಟದಲ್ಲಿ ಚಿಕನ್ ಸರಿಯಾಗಿ ನೀಡುತ್ತಿಲ್ಲ. ಬಾಳೆಹಣ್ಣು ನೀಡುತ್ತಿಲ್ಲ. ಸೋಪ್ ಕಿಟ್ ನೀಡಿಲ್ಲ. 45 ವಿದ್ಯಾರ್ಥಿಗಳಿಗೆ ಒಂದೇ ಬಾತ್ ರೂಮ್ ಬಳಸಬೇಕಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಕಾರವಾರ: ಹಾಸ್ಟೆಲ್‌ನಲ್ಲಿ ಚಿಕನ್, ಬಾಳೆಹಣ್ಣು ನೀಡುತ್ತಿಲ್ಲ. 5 ವರ್ಷದಿಂದ ಹಾಸ್ಟೆಲ್‌ನಲ್ಲಿ ಮೆನು ಬದಲಾವಣೆ ಆಗಿಲ್ಲ. ಗೀಸರ್ ವ್ಯವಸ್ಥೆ ಸರಿಯಿಲ್ಲ, ಸಮಯಕ್ಕೆ ಸರಿಯಾಗಿ ಬಸ್ ಇಲ್ಲ. ನೋಟ್ ಬುಕ್ ನೀಡಿಲ್ಲ. ಇಂತಹ ಹಲವಾರು ಸಮಸ್ಯೆಗಳನ್ನು ಮಕ್ಕಳ ರಕ್ಷಣಾ ಆಯೋಗದ ಸದಸ್ಯರಿಗೆ ಸಲ್ಲಿಸಿದ ವಿದ್ಯಾರ್ಥಿಗಳು, ಸಮಸ್ಯೆಗಳನ್ನು ನೇರವಾಗಿ ಎಲ್ಲರ ಮುಂದೆ ಹೇಳಲಾಗದೇ ಬಗ್ಗೆ ಹಲವು ಸಮಸ್ಯೆಗಳನ್ನು ಲಿಖಿತವಾಗಿ ಪತ್ರದ ಮೂಲಕ ನೇರವಾಗಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ ಅವರಿಗೆ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ವಿವಿಧ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.

ಅಲ್ಪಸಂಖ್ಯಾತರ ಇಲಾಖೆ ವಸತಿನಿಲಯದ ವಿದ್ಯಾರ್ಥಿ ಮೆಹ್ತಾಬ್ ಮೂಸಾ ಮೊಗಲ್, ತನ್ನ ಹಾಸ್ಟೆಲ್‌ಗಳಲ್ಲಿನ ಸಮಸ್ಯೆಗಳ ಸರಮಾಲೆಯನ್ನು ವಿವರಿಸಿ, ಬಿಸಿಎಂ ವಿದ್ಯಾರ್ಥಿನಿಲಯಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿರುವ ನಮಗೆ ಅವರಿಗಿಂತ ಹೆಚ್ಚಿನ ಸೌಲಭ್ಯಗಳು ದೊರೆಯಬೇಕಿತ್ತು. ಆದರೆ ಇಲ್ಲಿ ನಮಗೆ ಊಟದಲ್ಲಿ ಚಿಕನ್ ಸರಿಯಾಗಿ ನೀಡುತ್ತಿಲ್ಲ. ಬಾಳೆಹಣ್ಣು ನೀಡುತ್ತಿಲ್ಲ. ಸೋಪ್ ಕಿಟ್ ನೀಡಿಲ್ಲ. 45 ವಿದ್ಯಾರ್ಥಿಗಳಿಗೆ ಒಂದೇ ಬಾತ್ ರೂಮ್ ಬಳಸಬೇಕಿದೆ.

ಗೀಸರ್ ಇದ್ದರೂ ಎಲೆಕ್ಟ್ರಿಕಲ್ ಅವ್ಯವಸ್ಥೆಯ ಕಾರಣ ಬಿಸಿನೀರಿನ ಸೌಲಭ್ಯ ದೊರೆಯುತ್ತಿಲ್ಲ. ವಿದ್ಯುತ್ ವೈರ್‌ಗಳ ಸಂಪರ್ಕ ವ್ಯವಸ್ಥೆ ಸರಿಪಡಿಸುತ್ತಿಲ್ಲ. ಹಲವು ಸಮಸ್ಯೆಗಳಿದ್ದರೂ ಪ್ರಸ್ತುತ ಹೊಸ ಹಾಸ್ಟೆಲ್ ನಿರ್ಮಾಣವಾಗಿದ್ದರೂ ಅಲ್ಲಿಗೆ ಶಿಫ್ಟ್ ಮಾಡುತ್ತಿಲ್ಲ. ಒಟ್ಟಾರೆ ಹಾಸ್ಟೆಲ್‌ನಲ್ಲಿ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ದೂರುಗಳನ್ನು ಸಲ್ಲಿಸಿದರು.

ಈ ಕುರಿತಂತೆ ಹಾಸ್ಟೆಲ್ ವಾರ್ಡನ್‌ಗೆ ನೋಟಿಸ್ ನೀಡುವಂತೆ ಮತ್ತು ಜಿಲ್ಲಾ ಅಲ್ಪಸಂಖ್ಯಾತ ಇಲಾಖಾಧಿಕಾರಿಯಿಂದ ವರದಿ ಪಡೆಯುವಂತೆ ಡಾ. ತಿಪ್ಪೇಸ್ವಾಮಿ ಕೆ.ಟಿ. ಸೂಚನೆ ನೀಡಿದರು.ಹಿಂದೂ ಶಾಲೆಯ ವಿದ್ಯಾರ್ಥಿನಿ ತಾನು ಬರುವ ಬಸ್ ಜನರಿಂದ ತುಂಬಿರುತ್ತದೆ. ಹಲವು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸದಾಶಿವಗಡ- ಕಾರವಾರ ಮಾರ್ಗದಲ್ಲಿ ಶಾಲಾ ಸಮಯದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಒದಗಿಸುವಂತೆ ಕೋರಿದರು. ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯ ಸಿದ್ದರದ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಕಾಲೇಜಿಗೆ ತೆರಳಲು ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ ಎಂದು ಮನವಿ ಸಲ್ಲಿಸಿದರು. ಈ ಬಗ್ಗೆ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಯೋಗದ ಸದಸ್ಯರು ತಿಳಿಸಿದರು.

ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳು ಖಾಸಗಿ ಶಾಲೆಯ ಮಕ್ಕಳಿಗೂ ನೀಡಬೇಕು ಎಂದರು. ರಾಜ್ಯಾದ್ಯಂತ ಎಲ್ಲ ಶಾಲಾ ಮಕ್ಕಳಿಗೆ ಏಕರೂಪದ ಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಆಯೋಗದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಆಯೋಗದ ಸದಸ್ಯರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿರೂಪಾಕ್ಷ ಗೌಡ ಪಾಟೀಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ, ಡಿಎಸ್ಪಿ ಗಿರೀಶ್, ಕಾರ್ಮಿಕ ಅಧಿಕಾರಿ ಲಲಿತಾ, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸತೀಶ ನಾಯ್ಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ, ಧಾರವಾಡ ಮಹಾನಗರ ಅಭಿವೃದ್ಧಿಗೆ ಸಪ್ತಸೂತ್ರ
ಹಾನಗಲ್ಲಿನ 14 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ