ಲಖನೌ: ಕರ್ನಾಟಕದ ಮಹದೇವಪುರದ ಮತದಾರ ಪಟ್ಟಿಯಲ್ಲಿ ಆದಿತ್ಯ ಶ್ರೀವಾಸ್ತವ ಮತ್ತು ವಿಶಾಲ್ ಸಿಂಗ್ ಎನ್ನುವ ಯುಪಿ ಮತದಾರರ ಹೆಸರು ನೋಂದಣಿಯಾಗಿದೆ ಎನ್ನುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಉತ್ತರ ಪ್ರದೇಶದ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ‘ಉತ್ತರ ಪ್ರದೇಶದಲ್ಲಿ ಅವರಿಬ್ಬರ ಹೆಸರನ್ನು ಈ ಹಿಂದೆಯೇ ತೆಗೆದು ಹಾಕಲಾಗಿತ್ತು’ ಎಂದಿದೆ.
ರಾಹುಲ್ ಗಾಂಧಿ ಗುರುವಾರ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಆದಿತ್ಯ ಶ್ರೀವಾಸ್ತವ ಮತ್ತು ವಿಶಾಲ್ ಸಿಂಗ್ ಎಂಬುವವರ ಹೆಸರು ಮಹದೇವಪುರದ ಮತದಾರ ಪಟ್ಟಿಯಲ್ಲಿದೆ. ಅದರ ಜೊತೆಗೆ ಲಖನೌ ಮತ್ತು ವಾರಾಣಸಿಯಲ್ಲಿ, ಮುಂಬೈನಲ್ಲಿಯೂ ಇದೆ ಎಂದು ಆರೋಪಿಸಿದ್ದರು.
ಇದಕ್ಕೆ ಉತ್ತರಪ್ರದೇಶದ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ‘ಆ.7ರಂದು ಪರಿಶೀಲಿಸಿದಾಗ ಆದಿತ್ಯ ಶ್ರೀವಾಸ್ತವ ಮತ್ತು ವಿಶಾಲ್ ಸಿಂಗ್ ಹೆಸರು ಲಖನೌ ಪೂರ್ವ ಮತ್ತು ವಾರಾಣಸಿ ಕ್ಷೇತ್ರದ ಮತಪಟ್ಟಿಯಲ್ಲಿ ಇಲ್ಲ. ಈ ಹಿಂದೆಯೇ ಅವರಿಬ್ಬರ ಹೆಸರನ್ನು ಮತಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಹೀಗಾಗಿ ಸದ್ಯ ಮಹದೇವಪುರದ ಮತಪಟ್ಟಿಯಲ್ಲಿ ಮಾತ್ರ ಅವರ ಹೆಸರಿದೆ. ರಾಹುಲ್ ಪ್ರದರ್ಶಿಸಿದ ದತ್ತಾಂಶ ಹಳೆಯವಾಗಿವೆ. ಅವು ಮಾ.16ರಂದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಡೆದ ಹಳೆಯ ಅಂಕಿಅಂಶ ಹೋಲುತ್ತದೆ’ ಎಂದಿದೆ.
ನಾ ಬೆಂಗ್ಳೂರಲ್ಲಿ ಮಾತ್ರ ಮತದಾರ; ಶ್ರೀವಾಸ್ತವ:ಆದಿತ್ಯ ಶ್ರೀವಾಸ್ತವ ಎಂಬಾತ ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಸುಳ್ಳು ಎಂದು ಸ್ವತಃ ಆದಿತ್ಯಶ್ರೀವಾಸ್ತವ ಸ್ಪಷ್ಟನೆ ನೀಡಿದ್ದಾರೆ. ‘ನಾನು ಕರ್ನಾಟಕದಲ್ಲಿ ಮತದಾನದ ಹಕ್ಕು ಹೊಂದಿದ್ದೇನೆ’ ಎಂದಿದ್ದಾರೆ.
ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಆದಿತ್ಯ ‘ ನಾನು ಮೂಲತಃ ಉತ್ತರಪ್ರದೇಶದವನು. ಆ ಬಳಿಕ ಮುಂಬೈಗೆ ಸ್ಥಳಾಂತರಗೊಂಡೆ. ಅಲ್ಲಿಗೆ ವೋಟರ್ ಐಡಿ ಪಡೆದೆ. 2019ರಲ್ಲಿ ಅಲ್ಲಿ ಮತ ಹಾಕಿದೆ. ಬಳಿಕ 2021ಕ್ಕೆ ಬೆಂಗಳೂರಿಗೆ ಸ್ಥಳಾಂತರಗೊಂಡು ಅಲ್ಲಿ ಈಗ ಮತದಾನದ ಹಕ್ಕು ಹೊಂದಿದ್ದೇನೆ’ ಹಳೆ ವಿವರಗಳು ಸ್ವಯಂಚಾಲಿತವಾಗಿ ಬದಲಾಗುತ್ತದೆ ಎಂದು ನಾನು ಭಾವಿಸಿದ್ದೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ. ರಾಹುಲ್ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಂಡಿದ್ದಕ್ಕೆ ಇದೇ ವೇಳೆ ಆದಿತ್ಯ ಅಸಮಾಧಾನ ಹೊರಹಾಕಿದ್ದಾರೆ.
ಘೋಷಣಾ ಪತ್ರಕ್ಕೆ ಸಹಿ ಮಾಡಿ; ರಾಹುಲ್‌ಗೆ ಆಯೋಗ ಸವಾಲು:ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರದಲ್ಲಿ ಮತಚೋರಿ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ ಬೆನ್ನಲ್ಲೇ, ‘ಈ ಬಗ್ಗೆ ಲಿಖಿತ ಘೋಷಣಾ ಪತ್ರಕ್ಕೆ ಸಹಿ ಮಾಡಿ ಸಲ್ಲಿಸಿ’ ಎಂದು ಚುನಾವಣಾ ಆಯೋಗ ಸೂಚಿಸಿದೆ. ಅಲ್ಲದೆ, ’ರಾಹುಲ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರು ಈ ಹಿಂದೆ ಸುಪ್ರೀಂ ಕೋರ್ಟಿಂದ ತಿರಸ್ಕಾರ ಆದ ಅಂಶಗಳನ್ನು ಪುನಃ ಪ್ರಸ್ತಾಪಿಸಿ, ‘ಹೊಸ ಬಾಟಲಲ್ಲಿ ಹಳೇ ಮದ್ಯ ಹಾಕಿದಂತೆ ವರ್ತಿಸುತ್ತಿದ್ದಾರೆ. ನ್ಯಾಯಾಂಗಕ್ಕೇ ಅವಮಾನ ಮಾಡುತ್ತಿದ್ದಾರೆ’ ಎಂದಿದೆ.ಗುರುವಾರ ಮಹದೇವಪುರ ಕ್ಷೇತ್ರದ ಮತಪಟ್ಟಿಯನ್ನು ಪ್ರದರ್ಶಿಸಿದ್ದ ರಾಹುಲ್, ಅದರಲ್ಲಿ ಹಲವು ನಕಲಿ ಮತದಾರರು ಇರುವುದನ್ನು ತೋರಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ‘ನಿಮ್ಮ ವಿಶ್ಲೇಷಣೆ ಮೇಲೆ ನಂಬಿಕೆಯಿದ್ದರೆ ಮತ್ತು ಅವು ನಿಜವಾಗಿದ್ದರೆ, ಘೋಷಣೆ ಪತ್ರಕ್ಕೆ ಸಹಿ ಮಾಡಲು ನಿಮಗೆ ಯಾವುದೇ ಸಮಸ್ಯೆಯಾಗಬಾರದು’ ಎಂದಿದೆ.‘ಒಂದು ವೇಳೆ, ಘೋಷಣಾ ಪತ್ರಕ್ಕೆ ಸಹಿ ಹಾಕಲಿಲ್ಲ ಎಂದರೆ ರಾಹುಲ್‌ಗೆ ತಮ್ಮದೇ ಆರೋಪದ ಮೇಲೆ ನಂಬಿಕೆ ಇಲ್ಲ ಎಂಬ ಅರ್ಥ ಬರುತ್ತದೆ. ಆರೋಪಗಳು ಸುಳ್ಳಾಗಿದ್ದರೆ, ದೇಶದೆದುರು ಕ್ಷಮೆ ಯಾಚಿಸಬೇಕು’ ಎಂದು ಹೇಳಿದೆ.
ಕೋರ್ಟ್ ಮೇಲೆ ರಾಗಾಗೆ ಗೌರವವಿಲ್ಲ:‘ಈ ಹಿಂದೆ ಮಧ್ಯಪ್ರದೇಶದಲ್ಲಿ ಚುನಾವಣಾ ಆಕ್ರಮ ನಡೆದಿದೆ. 36 ಮತದಾರರ ಡೂಪ್ಲಿಕೇಷನ್ ಆಗಿದೆ. ಇದನ್ನು ಹುಡುಕಲು ಸರ್ಚೆಬಲ್ (ಶೋಧಿಸಬಲ್ಲ) ಡಿಜಿಟಲ್ ಮತಪಟ್ಟಿ ನೀಡಲು ಆದೇಶಿಸಬೇಕು ಎಂದು ಅಲ್ಲಿನ ಕಾಂಗ್ರೆಸ್ ನಾಯಕ ಕಮಲ್ ನಾಥ್ ಸುಪ್ರೀಂ ಕೋರ್ಟಿಗೆ ದೂರಿದ್ದರು. ಆದರೆ ಅವರ ಮನವಿಯನ್ನು 2019ರಲ್ಲೇ ಕೋರ್ಟು ತಿರಸ್ಕರಿಸಿ, ಆಯೋಗವು ಪಿಡಿಎಫ್ ನಮೂನೆಯಲ್ಲಿ ವೋಟರ್ ಲಿಸ್ಟ್ ಪ್ರಕಟಿಸುವುದು ಸರಿ ಇದೆ. ನಮೂನೆ ಯಾವ ರೀತಿ ಇರಬೇಕು ಎಂದು ನಿರ್ಧರಿಸುವ ಅಧಿಕಾರ ಆಯೋಗಕ್ಕೆ ಇದೆ ಎಂದು ತೀರ್ಪು ನೀಡಿತ್ತು. ಆದರೆ ಈಗ ಸುಪ್ರೀಂನಿಂದ ತಿರಸ್ಕಾರವಾದ ತಮ್ಮ ಹಳೇ ವಾದವನ್ನೇ ರಾಹುಲ್ ಮುಂದಿಟ್ಟುಕೊಂಡು ಡಿಜಿಟಲ್ ಮತಪಟ್ಟಿಗೆ ಆಗ್ರಹಿಸುತ್ತಿದ್ದಾರೆ. ಇದು ಕೋರ್ಟ್‌ಗೆ ಅಗೌರವ’ ಎಂದು ಆಯೋಗ ಕಿಡಿಕಾರಿದೆ.‘
ಚುನಾವಣೆ ಫಲಿತಾಂಶದ 45 ದಿನದೊಳಗೆ ಅಭ್ಯರ್ಥಿಗಳಿಗೆ ಫಲಿತಾಂಶದ ಬಗ್ಗೆ ದೂರಲು ಅವಕಾಶವಿದೆ. ಅಲ್ಲಿಯವರೆಗೆ ಸಿಸಿಟೀವಿ ಸೇರಿ ತಾಂತ್ರಿಕ ಸಲಕರಣೆಗಳನ್ನು ಆಯೋಗ ಶೇಖರಿಸಿ ಇಟ್ಟುಕೊಂಡಿರುತ್ತದೆ. ಆಎರೆ ಇದ್ಯಾವುದನ್ನೂ 2024ರ ಚುನಾವಣೆ ಬಳಿಕ ರಾಹುಲ್ ಮಾತನಾಡಿಲ್ಲ. ಒಂದೂ ದೂರು ನೀಡಿಲ್ಲ. ಈಗ ಏಕಾಏಕಿ ಚುನಾವಣೆ ನಡೆದ ಹಲವು ತಿಂಗಳ ಬಳಿಕ ಅವರು ಈ ರೀತಿ ದೂರುವುದು ಸರಿಯಲ್ಲ’ ಎಂದು ಅದು ತಿರುಗೇಟು ನೀಡಿದೆ.
ಇದೇ ವೇಳೆ, 3 ರಾಜ್ಯಗಳಲ್ಲಿ ಅಕ್ರಮ ನಡೆದಿದೆ ಎಂದಿದ್ದ ರಾಹುಲ್‌ಗೆ, ‘ನಕಲಿ ಮತದಾರರ ಹೆಸರುಗಳ ಪಟ್ಟಿ ನೀಡಿ. ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಆ ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತರು ಆಗ್ರಹಿಸಿದ್ದಾರೆ.
ಆದರೆ, ‘ನಾನು ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯುವುದಾಗಿ ಸಂಸತ್ತಿನಲ್ಲಿ ಪ್ರಮಾಣ ಮಾಡಿದ್ದೇನೆ’ ಎಂಬ ಕಾರಣ ನೀಡಿ ಘೋಷಣಾ ಪತ್ರಕ್ಕೆ ಸಹಿ ಹಾಕಲು ರಾಹುಲ್ ನಿರಾಕರಿಸಿದ್ದಾರೆ.
ರಾಹುಲ್ ಆರೋಪದ ಬಗ್ಗೆ ತನಿಖೆ ಆಗಲಿ: ಪ್ರಿಯಾಂಕಾ
ನವದೆಹಲಿ: ಚುನಾವಣಾ ಆಯೋಗವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮಾಡಿರುವ ಚುನಾವಣಾ ವಂಚನೆಯ ಆರೋಪಗಳನ್ನು ತನಿಖೆ ಮಾಡುವಂತೆ ಆಯೋಗಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ, ತಾನು ಬಿಜೆಪಿಗೆ ಮಾತ್ರ ಉತ್ತರದಾಯಿ ಎಂದು ಅದು ಭಾವಿಸಿದ್ದರೆ ಪುನರ್ವಿಮರ್ಶಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
‘ರಾಹುಲ್ ಅಕ್ರಮವನ್ನು ಬಹಿರಂಗಪಡಿಸಿದ್ದಾರೆ. ಆ ಅಕ್ರಮಗಳು ಉದ್ದೇಶಪೂರ್ವಕ ಅಲ್ಲದಿದ್ದರೆ ತನಿಖೆ ಮಾಡಿ. ನೀವೇಕೆ ನಮಗೆ ಯಂತ್ರ ಓದಬಲ್ಲ ರೂಪದಲ್ಲಿ ಮತದಾರರ ಪಟ್ಟಿಯನ್ನು ಕೊಡುತ್ತಿಲ್ಲ? ತನಿಖೆಯನ್ನೇಕೆ ಮಾಡುತ್ತಿಲ್ಲ?’ ಎಂದು ಪ್ರಶ್ನಿಸಿದ್ದಾರೆ. ಅಂತೆಯೇ, ‘ನಾವು ಸಂಸತ್ತಿನಲ್ಲೇ ಪ್ರಮಾಣ ಮಾಡಿದ್ದೇವೆ ಮತ್ತು ಸಾರ್ವಜನಿಕವಾಗಿ ಸಾಕ್ಷಿ ತೋರಿಸುತ್ತಿದ್ದೇವೆ. ಒಂದು ಕ್ಷೇತ್ರದಲ್ಲಿ 1 ಲಕ್ಷ ನಕಲಿ ಮತದಾರರು ಪತ್ತೆಯಾಗಿದ್ದಾರೆಂದರೆ, ಅವರು ಯಾರಿಗೆ ಮತ ಹಾಕುತ್ತಾರೋ ಅವರೇ ಗೆಲ್ಲುತ್ತಾರೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.