ಕರಡಹಳ್ಳಿ ಸೀತಾರಾಮು
ಬೇಸಿಗೆ ಸುಡುಬಿಸಿಲು, ತಾಪಮಾನ ಏರಿಕೆಯಿಂದ ತತ್ತರಿಸುತ್ತಿರುವ ತಾಲೂಕಿನ ಜನತೆ ದಿನ ಕಳೆದಂತೆ ಕುಡಿಯುವ ನೀರಿಗಾಗಿ ಹಾತೊರೆಯುವ ಪರಿಸ್ಥಿತಿ ಎದುರಾಗುತ್ತಿದೆ. ಇನ್ನೊಂದು ತಿಂಗಳು ಕಳೆದರೆ ನೀರಿಗಾಗಿ ತೀವ್ರ ಹಾಹಾಕಾರ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ತಾಲೂಕಿಗೆ ಬರ ಮತ್ತು ಕುಡಿಯುವ ನೀರಿನ ಸಮಸ್ಯೆ ಎನ್ನುವುದು ಹೊಸದೇನಲ್ಲ. ಆದರೂ ಅಂತರ್ಜಲ ಕುಸಿತ, ವೋಲ್ಟೇಜ್ ಸಮಸ್ಯೆ ಜೊತೆಗೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಈಗಾಗಲೇ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. 18 ಹಳ್ಳಿಗಳಿಗೆ ರೈತರ ಖಾಸಗಿ ಕೊಳವೆಬಾವಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.ಮಳೆಯಾಶ್ರಿತ ಪ್ರದೇಶವಾಗಿರುವ ತಾಲೂಕಿನಲ್ಲಿ ನಾಗಮಂಗಲ ಉಪ ವಿಭಾಗದ 64 ಹಾಗೂ ಯಡಿಯೂರು ಉಪ ವಿಭಾಗದ 58 ಸೇರಿ ಒಟ್ಟು 120ಕ್ಕೂ ಹೆಚ್ಚು ಕೆರೆಗಳು ಹೇಮಾವತಿ ವ್ಯಾಪ್ತಿಗೆ ಒಳಪಡಲಿವೆ. ಇವುಗಳಲ್ಲಿ ನಾಗಮಂಗಲ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಸೂಳೆಕೆರೆಯಲ್ಲಿ ಶೇ.30ರಷ್ಟು ಮಾತ್ರ ನೀರಿದ್ದರೆ, ಬೆಳ್ಳೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದಾಸನಕೆರೆಯಲ್ಲಿಯೂ ಕಡಿಮೆ ಪ್ರಮಾಣದ ನೀರಿದೆ.
ಹೇಮಾವತಿ ವ್ಯಾಪ್ತಿಗೆ ಬಾರದ ಸಣ್ಣ ಪುಟ್ಟ ಕೆರೆ ಹಾಗೂ ನೀರಿನ ಕಟ್ಟೆಗಳಲ್ಲಿ ಒಂದು ಹನಿ ನೀರಿಲ್ಲ. ತಾಲೂಕಿನ ಯಾವುದೇ ಹಳ್ಳಿಗಳಲ್ಲಿಯೂ ಕನಿಷ್ಠ 900 ಅಡಿ ಆಳದ ಕೊಳವೆ ಬಾವಿಕೊರೆಸಿದರೂ ನೀರು ಬರುತ್ತಿಲ್ಲ. ಹೀಗಾಗಿ ಅಂತರ್ಜಲ ಸಂಪೂರ್ಣ ನೆಲಕಚ್ಚುವಂತ ಪರಿಸ್ಥಿತಿ ಎದುರಾಗುತ್ತಿದೆ.
ಜಾನುವಾರುಗಳ ಸ್ಥಿತಿಗತಿ ಏನು?
ಈಗಾಗಲೇ ಊರಿನ ಹೊರ ವಲಯದ ಜಮೀನುಗಳಲ್ಲಿ ದನ ಕರುಗಳಿಗೆ ತಿನ್ನಲು ಮೇವು ಕುಡಿಯಲು ನೀರು ಸಿಗುತ್ತಿಲ್ಲ. ಪಂಪ್‌ಸೆಟ್ ಹೊಂದಿರುವ ರೈತರು ಮಾತ್ರ ಬರುವ ಅಲ್ಪ ಸ್ವಲ್ಪ ನೀರಿನಲ್ಲಿ ಹಸಿ ಮೇವು ಬೆಳೆದುಕೊಂಡು ದನ ಕರುಗಳನ್ನು ರಕ್ಷಣೆ ಮಾಡಿಕೊಂಡರೆ, ಇನ್ನುಳಿದ ರೈತರಿಗೆ ಮಾತ್ರ ಸಂಕಷ್ಟ ತಪ್ಪಿದ್ದಲ್ಲ.
ಅಂತರ್ಜಲ ಕುಸಿತದಿಂದ ಗ್ರಾಮೀಣ ಪ್ರದೇಶದ ಅದೆಷ್ಟೋ ರೈತರ ಕೊಳವೆಬಾವಿಗಳಲ್ಲಿ ನೀರಿಲ್ಲದೆ ಈಗಾಗಲೇ ನಿಂತುಹೋಗಿವೆ. ಬಹುತೇಕ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಸಾಲ ಮಾಡಿ ಕಷ್ಟಪಟ್ಟು ಬೆಳೆದಿರುವ ವಿವಿಧ ತರಕಾರಿ ಬೆಳೆಗಳು ಹಾಗೂ ಜಾನುವಾರುಗಳ ಹಸಿ ಮೇವು ತರಗೆಲೆಯಂತೆ ಒಣಗಿ ನಿಂತಿವೆ. ಮಳೆ ಬಿದ್ದರೆ ಸಾಕೆನ್ನುವಂತೆ ದಿನ ಬೆಳಗಾದರೆ ತಲೆಗೆ ಕೈಕೊಟ್ಟು ಮುಗಿಲತ್ತ ತೋಡುತ್ತಿರುವ ಹಳ್ಳಿಗಾಡಿನ ರೈತಾಪಿ ಜನರ ಬದುಕು ನಿಜಕ್ಕೂ ಹೇಳತೀರದಂತಾಗಿದೆ.
- ನಯೀಂಉನ್ನೀಸಾ, ತಹಸೀಲ್ದಾರ್, ನಾಗಮಂಗಲಸರ್ಕಾರದ ನಿರ್ದೇಶನದಂತೆ ಪ್ರತಿ ಗುರುವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಬ್ಬ ಮತ್ತು ಜಾತ್ರೆಗಳ ವೇಳೆ ಜನರಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ನೀರಿನ ಮಿತ ಬಳಕೆಗೆ ಹಳ್ಳಿಗಳಲ್ಲಿ ಧ್ವನಿವರ್ಧಕದ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
-ಡಾ.ಕುಮಾರ್, ಸಹಾಯಕ ನಿರ್ದೇಶಕರು, ಪಶು ಇಲಾಖೆ ನಾಗಮಂಗಲ