ಅಚ್ಚುಕಟ್ಟು ಕೊನೆಭಾಗಕ್ಕೆ ನೀರಿಲ್ಲ; ರೈತರ ಪ್ರತಿಭಟನೆ

KannadaprabhaNewsNetwork | Published : Jan 26, 2024 1:45 AM

ಸಾರಾಂಶ

ಭದ್ರಾ ಅಣೆಕಟ್ಟೆಯಿಂದ ನಾಲೆಗೆ ನೀರು ಬಿಟ್ಟು 12 ದಿನಗಳಾದರೂ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ತಲುಪಿಲ್ಲ. ತ್ಯಾವಣಿಗೆ 2ನೇ ನಾಲಾ ಉಪ ವಿಭಾಗದ ವ್ಯಾಪ್ತಿಯ ಕಂದಗಲ್ಲು, ಶ್ಯಾಗಲೆ, ಹೂವಿನಮಡು, ಮತ್ತಿ, ಗೋಣಿವಾಡ, ಹೊನ್ನಮರಡಿ, ಕುಕ್ಕುವಾಡ, ಕೊಳೇನಹಳ್ಳಿ, ನಾಗರಸನಹಳ್ಳಿ ಭಾಗಕ್ಕೆ ಇಂದಿಗೂ ನೀರು ತಲುಪಿಲ್ಲ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ, ಮಲೆಬೆನ್ನೂರು ವಿಭಾಗದ ಭದ್ರಾ ಮುಖ್ಯ ನಾಲೆಗಳಿಗೆ 11 ಅಡಿ ಬದಲು ಕೇವಲ 8 ಅಡಿ ನೀರು ಬರುತ್ತಿದ್ದು, ಇದರಿಂದ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ಬರುತ್ತಿಲ್ಲ ಎಂದು ಆಕ್ರೋಶಗೊಂಡ ಅಚ್ಚುಕಟ್ಟು ರೈತರು ಬೆಳ್ಳಿಗನೂಡು ವಿತರಣೆ ನಾಲೆ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಬೆಳ್ಳಿಗನೂರು ವಿತರಣೆ ನಾಲೆ ಬಳಿ ಜಮಾಯಿಸಿ ಈ ವೇಳೆ ಮಾತನಾಡಿದ ರೈತ ಒಕ್ಕೂಟದ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ, ಭದ್ರಾ ಅಣೆಕಟ್ಟೆಯಿಂದ ನಾಲೆಗೆ ನೀರು ಬಿಟ್ಟು 12 ದಿನಗಳಾದರೂ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ತಲುಪಿಲ್ಲ. ತ್ಯಾವಣಿಗೆ 2ನೇ ನಾಲಾ ಉಪ ವಿಭಾಗದ ವ್ಯಾಪ್ತಿಯ ಕಂದಗಲ್ಲು, ಶ್ಯಾಗಲೆ, ಹೂವಿನಮಡು, ಮತ್ತಿ, ಗೋಣಿವಾಡ, ಹೊನ್ನಮರಡಿ, ಕುಕ್ಕುವಾಡ, ಕೊಳೇನಹಳ್ಳಿ, ನಾಗರಸನಹಳ್ಳಿ ಭಾಗಕ್ಕೆ ಇಂದಿಗೂ ನೀರು ತಲುಪಿಲ್ಲ. 12 ದಿನ ನೀರು ಹರಿಸುವ ಐಸಿಸಿ ತೀರ್ಮಾನವೇ ಅವೈಜ್ಞಾನಿಕವಾಗಿದೆ. ಭದ್ರಾ ಡ್ಯಾಂನಿಂದ ನಾಲೆಗೆ ನೀರು ಹರಿಸಿ ನಾಳೆ(ಶುಕ್ರವಾರ)ಗೆ 12 ದಿನವಾಗುತ್ತದೆ. ಯಾವುದೇ ಕಾರಣಕ್ಕೂ ನಾಲೆಗೆ ನೀರು ನಿಲ್ಲಿಸಬಾರದು. 20 ದಿನಗಳವರೆಗೆ ನಾಲೆಗೆ ನೀರು ಮುಂದುವರಿಸಬೇಕು ಎಂದು ತಾಕೀತು ಮಾಡಿದರು.

ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ:

ಸ್ಥಳಕ್ಕೆ ಧಾವಿಸಿದ ನೀರಾವರಿ ನಿಗಮದ ದಾವಣಗೆರೆ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಆರ್.ಬಿ.ಮಂಜುನಾಥ ಮಾತನಾಡಿ, ಮುಖ್ಯ ನಾಲೆಯಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಹರಿಸುತ್ತಿಲ್ಲ. ಮುಖ್ಯ ನಾಲೆಯಲ್ಲಿ 11 ಅಡಿ ನೀರು ಹರಿಸಬೇಕು. ಆದರೆ, 8 ಅಡಿ ಮಾತ್ರ ಹರಿಯುತ್ತಿದೆ. 12 ದಿನ ನೀರು ಹರಿಸಬೇಕೆಂಬ ವೇಳಾಪಟ್ಟಿಯಂತೆ ಕೊನೆಯ ಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಅಲ್ಲದೇ, 2ನೇ ನಾಲಾ ಉಪ ವಿಭಾಗದ ಕಾಲುವೆಗೆ ಗೇಟ್ ಎತ್ತಿಸಿ, ಹೆಚ್ಚು ನೀರು ಹರಿಸುವಂತೆ ತಾತ್ಕಾಲಿಕವಾಗಿ ನೀರೊದಗಿಸುವ ಪ್ರಯತ್ನ ಮಾಡಿದರು.

ರೈತ ಮುಖಂಡರಾದ ಗೋಣಿವಾಡ ಎನ್.ಎಂ.ಮಂಜುನಾಥ, ಎನ್.ಡಿ.ಮುರುಗೇಶಪ್ಪ, ಪಿ.ಎ.ನಾಗರಾಜಪ್ಪ, ಎಸ್.ಕೆ.ನಾಗರಾಜಪ್ಪ, ಹೂವಿನಮಡು ಶಶಿ, ಓಬಳೇಶ್, ರವಿ, ಶ್ಯಾಗಲೆ ಕ್ಯಾಂಪ್ ಬೋಗೇಶ್ವರರಾವ್‌, ಸಿ.ಎಚ್.ಸತೀಶ, ಕೊಳೇನಹಳ್ಳಿ ಶರಣಪ್ಪ, ಸಿದ್ದಪ್ಪ ಇತರೆ ರೈತರು, ನೀರಾವರಿ ಇಲಾಖೆಯ ಇಂಜಿನಿಯರ್‌ಗಳಾದ ತಿಪ್ಪೇಸ್ವಾಮಿ, ಮಧು ಇದ್ದರು.

Share this article