ರಾಣಿಬೆನ್ನೂರು: ಬೆಂಗಳೂರಿನಲ್ಲಿ ಕರ್ನಾಟಕ ಎಸ್‌ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಸೋಮವಾರ ಶಿವಶರಣ ನುಲಿಯ ಚಂದಯ್ಯ ಕೊರಮ ಸಮಾಜ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬೆಂಗಳೂರಿನಲ್ಲಿ ಇತ್ತೀಚೆಗೆ ಮಾಜಿ ಸಚಿವ ಎಚ್. ಆಂಜನೇಯ ಅವರ ಸಮ್ಮುಖದಲ್ಲಿ ಸಭೆ ನಡೆಯುತ್ತಿರುವಾಗ ಅಲೆಮಾರಿ ಪಟ್ಟಿಯಲ್ಲಿ ಕೊರಮ ಮತ್ತು ಕೊರಚ ಜಾತಿ ಕೈಬಿಟ್ಟಿರುವುದನ್ನು ಕರ್ನಾಟಕ ಎಸ್‌ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಪ್ರಶ್ನಿಸಿದರು.
ಆಗ ಲೋಹಿತಾಶ್ವ, ಬಸವರಾಜ ನಾರಾಯಣಕರ, ಸುಭಾಸ ಚವ್ಹಾಣ ಸೇರಿದಂತೆ ಏಳು ಜನರ ಗುಂಪು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಅವರು ಧರಿಸಿದ್ದ ವಸ್ತ್ರಗಳನ್ನು ಎಳೆದು ಅಗೌರವ ತೋರಿದ್ದಾರೆ. ಅಲೆಮಾರಿ ನಿಗಮದ ಅಧ್ಯಕ್ಷರಿಗೆ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ.ಆದ್ದರಿಂದ ಘಟನೆಗೆ ಕಾರಣರಾದವರ ಮೇಲೆ ಈಗಾಗಲೇ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಪಟ್ಟಿಯಲ್ಲಿನ 51 ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಅರುಣಕುಮಾರ ಕೊರವರ, ಹನುಮಂತಪ್ಪ ಕೊರವರ, ಪುಟ್ಟಪ್ಪ ಭಜಂತ್ರಿ, ಸುಭಾಸ ಮೇಲಿನಮನಿ, ರಮೇಶ ಕೊರವರ, ಲಕ್ಷ್ಮಣ ಭಜಂತ್ರಿ, ರಮೇಶ ಹುಲಿಹಳ್ಳಿ ಮತ್ತಿತರರಿದ್ದರು.10ರಂದು ಗುರುಪೂರ್ಣಿಮಾ, ಜ್ಞಾನವಾಹಿನಿ ಮಾಸಿಕ ಧರ್ಮಸಭೆ
ರಾಣಿಬೆನ್ನೂರು: ನಗರದ ಚನ್ನೇಶ್ವರ ಮಠದಲ್ಲಿ ಹೊನ್ನಾಳಿ ಚನ್ನಮಲ್ಲಿಕಾರ್ಜುನ ಸಂಸ್ಕೃತಿ ಪ್ರಸಾರ ಪರಿಷತ್ ವತಿಯಿಂದ ಜು. 10ರಂದು ಸಂಜೆ 6ಕ್ಕೆ ಗುರುಪೂರ್ಣಿಮಾ, ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಏರ್ಪಡಿಸಲಾಗಿದೆ.ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಗುರುಪೂರ್ಣಿಮೆ ಅಂಗವಾಗಿ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಗುವುದು.ಬಿಸಿಎಂ ಇಲಾಖೆ ನಿವೃತ್ತ ಜಿಲ್ಲಾಧಿಕಾರಿ ವಿ.ಎಂ. ಹಿರೇಮಠ, ಕಾಂತೆಬೆನ್ನೂರಿನ ಮೈಲಮ್ಮ ದೇವಿ ಆರಾಧಕ ಮಂಜುನಾಥ ಕಡತಿ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಗುರುವಿನ ಮಹಿಮೆ ಕುರಿತು ಹರಿಹರದ ವಿಶ್ರಾಂತ ಪ್ರಾ. ಎಚ್.ಎ. ಭಿಕ್ಷಾವರ್ತಿಮಠ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.