2ನೇ ದಿನಕ್ಕೆ ಕಾಲಿಟ್ಟ ಅಲೆಮಾರಿಗಳ ಪ್ರತಿಭಟನೆ

KannadaprabhaNewsNetwork |  
Published : Aug 23, 2025, 02:01 AM IST
ಅಲೆಮಾರಿಗಳ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ಎನ್. ರವಿಕುಮಾರ್ ಮತ್ತಿತರರು ಭಾಗವಹಿಸಿದರು. | Kannada Prabha

ಸಾರಾಂಶ

ಅಲೆಮಾರಿಗಳ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ಬಿಜೆಪಿ ಮುಖಂಡ ಎನ್. ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಲೆಮಾರಿಗಳಿಗೆ ಒಳಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಶೇ.1ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಡಕಟ್ಟು ಅಲೆಮಾರಿಗಳ ಒಕ್ಕೂಟದಿಂದ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ರಾಜಕೀಯ ನಾಯಕರು, ಚಿಂತಕರು, ಪ್ರಗತಿಪರರು ಹೋರಾಟಕ್ಕೆ ಬೆಂಬಲಿಸಿದ್ದಾರೆ.

ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಸ್ವಾತಂತ್ರ್ಯ ಪಡೆದು 79 ವರ್ಷಗಳಾದರೂ ಊರು, ಸೂರು, ಭೂ ಒಡೆತನ, ಶಿಕ್ಷಣ ಇಲ್ಲದೇ ಎಲ್ಲಾ ಸಂಪನ್ಮೂಲಗಳಿಂದ ವಂಚಿತರಾದ ಒಂದು ಸಮುದಾಯ ನಮ್ಮ ದೇಶದಲ್ಲಿದ್ದಾರೆ ಎಂದರೆ ಅದು ದುರಂತವೇ ಸರಿ. ಎಷ್ಟೋ ಸರ್ಕಾರಗಳು ಬಂದು ಹೋದರೂ, ಆಡಳಿತ ನಡೆಸಿದರೂ ಸಮಾಜದ ಕಟ್ಟ ಕಡೆಯ ಸಮುದಾಯಗಳ ಬಗ್ಗೆ ಕಾಳಜಿ ತೋರಿಸಿಲ್ಲ. ಹೀಗಾಗಿ, ದಶಕಗಳಿಂದ ಆಗಿರುವ ಅನ್ಯಾಯದ ನೋವು ಅರ್ಥವಾಗಿ ಅಲೆಮಾರಿಗಳು ತಾವಾಗಿಯೇ ಪ್ರತಿಭಟನೆಗೆ ಇಳಿದಿದ್ದಾರೆ. ಈ ಪ್ರತಿಭಟನೆಗೆ ಎಲ್ಲರೂ ನೈತಿಕ ಹೊಣೆ ಹೊತ್ತು ಬೆಂಬಲಿಸಬೇಕು ಎಂದರು.

ಅಲೆಮಾರಿಗಳು ತಮ್ಮ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ಸಂಘಟಿತವಾಗಬೇಕು. ಈ ಒಕ್ಕೂಟದಿಂದ ಮೊದಲೇ ಹೋರಾಟ ಮಾಡಿದ್ದರೆ ಒಳಮೀಸಲಾತಿ ಹಂಚಿಕೆ ವೇಳೆಯೇ ಶಕ್ತಿ ಸಿಗುತ್ತಿತ್ತು. ಮೀಸಲಾತಿಗೆ ಅರ್ಹತೆ ಇರುವವರಿಗೆ ನ್ಯಾಯ ಕೊಡಿಸಲು ಆಡಳಿತ ನಡೆಸುವವರಿಗೆ ತಾಯಿಯ ಅಂತಃಕರಣ ಇರಬೇಕು. ಅಲೆಮಾರಿಗಳ ಸಮಸ್ಯೆಗಳು, ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ನೋಡಿ ನ್ಯಾಯ ಮತ್ತು ಹಕ್ಕು ಕೊಡಿಸಲು ಪ್ರಯತ್ನಿಸಬೇಕು ಎಂದು ಎಸ್.ಜಿ. ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಮುಖಂಡರಿಂದಲೂ ಬೆಂಬಲ

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡರು, ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಅದರಂತೆ ಎಲ್ಲಾ ರೀತಿಯ ಅವಕಾಶಗಳು, ಹುದ್ದೆಗಳಿಂದ ವಂಚಿತರಾಗಿರುವ ಸಣ್ಣ ಅಲೆಮಾರಿ ಸಮುದಾಯಕ್ಕೆ ಸರ್ಕಾರ ನ್ಯಾಯ ಒದಗಿಸಬೇಕು. ಒಂದು ವೇಳೆ ಸರ್ಕಾರ ನ್ಯಾಯ ಕೊಡಿಸದೇ ಇದ್ದರೆ ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದರು.ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ಯಾವುದೇ ನೆಲೆ, ಶಿಕ್ಷಣ ಇಲ್ಲದ, ಅವಕಾಶ ವಂಚಿತರು, ಧ್ವನಿ ಇಲ್ಲದವರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಮ್ಮ ಪಕ್ಷದಿಂದ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

PREV

Recommended Stories

ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ₹48.88 ಕೋಟಿ
ವರದಾ-ಬೇಡ್ತಿ ನದಿ ಜೋಡಣೆ ಕೇಂದ್ರದ ಒಪ್ಪಿಗೆ: ಬೊಮ್ಮಾಯಿ