ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ತಾಲೂಕಿನ ಬಿಜಿಕೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ಘಟಕಗಳು ಕೆಟ್ಟು ದಶಕದ ಸಮೀಪಕ್ಕೆ ಬಂದರೂ ದುರಸ್ತಿಯಾಗದೆ ಸಾರ್ವಜನಿಕರು ಕುಡಿಯುವ ನೀರಿಗಾಗಿ ಮೂರು ಕಿಮೀ ಸುತ್ತುವಂತಾ ಅನಿವಾರ್ಯತೆ ಎದುರಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಮೌನಕ್ಕೆ ಶರಣಾಗಿದ್ದಾರೆ.ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಒಂದಾಗಿರುವ ಬಿಜಿಕೆರೆ 5 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಪರಿಶಿಷ್ಟ ಜಾತಿ, ಪಂಗಡ ಸಮುದಾಯ ಹೆಚ್ಚಾಗಿ ವಾಸ ಮಾಡುತ್ತಿದೆ. ಶುದ್ಧ ಕುಡಿಯುವ ನೀರು ನೀಡಲೆಂದು ತಲೆ ಎತ್ತಿರುವ 4 ನೀರಿನ ಘಟಕಗಳ ಪೈಕಿ ಮೂರು ಸ್ಥಗಿತಗೊಂಡು ದಶಕದ ಸನಿಹಕ್ಕೆ ಬಂದರೂ ದುರಸ್ತಿಯಾಗಿಲ್ಲ. ಪರಿಣಾಮ ಬಹುತೇಕ ಜನರು ಪ್ಲೋರೈಡ್ ನೀರನ್ನೇ ಸೇವಿಸುವಂತಾ ಸ್ಥಿತಿ ತಲೆ ದೂರಿದೆ.ಬಸವೇಶ್ವರ ನಗರ, ಕೆಇಬಿ, ಪಂಚಾಯಿತಿ ಸಮೀಪ, ದಲಿತ ಕಾಲೋನಿ ಸೇರಿದಂತೆ ಗ್ರಾಮ ವ್ಯಾಪ್ತಿಯಲ್ಲಿ ಒಟ್ಟು 4 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಈ ಪೈಕಿ ಕೇವಲ ಬಸವೇಶ್ವರ ನಗರದ ಘಟಕ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಉಳಿದ ಮೂರು ಘಟಕಗಳು ಕೆಟ್ಟಿವೆ. ಇರುವ ಒಂದು ಘಟಕದಿಂದ ಇಡೀ ಗ್ರಾಮಕ್ಕೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ.ನೀರಿನ ಘಟಕಗಳು ಕೇವಲ ನೆಪ ಮಾತ್ರ ಎನ್ನುವಂತಾಗಿದೆ.
ಮೂರು ಘಟಕಗಳು ಪಾಳು ಬಿದ್ದಿವೆ. ಕಟ್ಟಡದ ಬಿಡಿ ಭಾಗಗಳು ಮುರಿದು ಹಾಳಾಗಿ ದೂಳು ತುಂಬಿವೆ. ಅಲ್ಲಿನ ಯಂತ್ರಗಳು ಕಾರ್ಯನಿರ್ವಹಿಸದೆ ಎಷ್ಟೋ ವರ್ಷಗಳು ಕಳೆದಿವೆ. ಇದರಿಂದಾಗಿ ನೀರು ಸಂಗ್ರಹ ತೊಟ್ಟಿಯೂ ತುಕ್ಕು ಹಿಡಿದಿವೆ. ಸಮರ್ಪಕ ನಿರ್ವಹಣೆ ಇಲ್ಲದೆ ಕಟ್ಟಡಗಳು ಶಿತಿಲಾವಸ್ಥೆಗೆ ತಲುಪಿದ್ದು ಮಕ್ಕಳಿಗೆ ಆಟದ ಸ್ಥಳವಾಗಿ ರೂಪು ಗೊಂಡಿದ್ದರೂ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಚಕಾರ ಎತ್ತುತ್ತಿಲ್ಲ.ಆಗೊಮ್ಮೆ ಈಗೊಮ್ಮೆ ಕಾರ್ಯನಿರ್ವಹಿಸಿದ್ದ ನೀರಿನ ಘಟಕಗಳು ಕಳೆದ ಹಲವು ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸಮರ್ಪಕವಾದ ನೀರಿನ ಘಟಕಗಳು ಇಲ್ಲದೆ ಗ್ರಾಮದ ಬಹುತೇಕ ಜನರು 3ಕಿಮೀ ದೂರದ ಮೊಗಲಹಳ್ಳಿ ಅಥವಾ ಮುತ್ತಿಗಾರಹಳ್ಳಿಗೆ ತೆರಳಿ ನೀರು ತರುವಂತಾ ಸ್ಥಿತಿ ಎದುರಾಗಿದೆ. ವಾಹನ ಸೌಕರ್ಯ ಇದ್ದವರು ದೂರಕ್ಕೆ ತೆರಳಿ ನೀರು ತಂದರೆ ವಾಹನ ಸೌಕರ್ಯ ಇಲ್ಲದವರು ಪರಿತಪಿಸುವಂತಾಗಿದೆ. ಘಟಕಗಳ ದುರಸ್ತಿಗೆ ಹಲವು ಬಾರಿ ಸಾರ್ವಜನಿಕರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎನ್ನುವ ದೂರುಗಳು ವ್ಯಾಪಕವಾಗಿವೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಸಂಪೂರ್ಣವಾಗಿ ಹಾಳಾಗುವ ಮುನ್ನಾ ಇಲ್ಲಿನ ನೀರಿನ ಘಟಕಗಳನ್ನು ದುರಸ್ತಿಗೊಳಿಸಬೇಕೆನ್ನುವುದು ಜನತೆಯ ಆಗ್ರಹವಾಗಿದೆ.