ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿ ಅಹಿಂದ ಒಕ್ಕೂಟ ಪ್ರತಿಭಟನೆ

KannadaprabhaNewsNetwork | Published : Dec 17, 2024 1:00 AM

ಸಾರಾಂಶ

ಸರ್ಕಾರ ಕೂಡ ಈ ವರದಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದೆ.

ಹೊಸಪೇಟೆ: ಸಾಮಾಜಿಕ, ಶೈಕ್ಷಣಿಕ, ಜಾತಿವಾರು ಜನಗಣತಿ ವರದಿ ಬಿಡುಗಡೆಗೊಳಿಸಬೇಕು. ಮುಂದುವರಿದ ಜನಾಂಗದವರಿಗೆ ಪ್ರವರ್ಗ 2ಎನಲ್ಲಿ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿ ಬೆಳಗಾವಿಯಲ್ಲಿ ಡಿ.18ರಂದು ಬೃಹತ್ ಪ್ರತಿಭಟನಾ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಅಹಿಂದ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪಗೆ ಮನವಿ ರವಾನಿಸಿದರು.ಅಂಬೇಡ್ಕರ್‌ ಬರೆದ ಸಂವಿಧಾನದ 340ನೇ ವಿಧಿ ಪ್ರಕಾರ ದೇಶದಲ್ಲಿ, ರಾಜ್ಯದಲ್ಲಿ ಯಾರು ನಿಜವಾಗಿ ಹಿಂದುಳಿದಿದ್ದಾರೋ, ಶೋಷಣೆಗೆ ಒಳಪಟ್ಟಿದ್ದಾರೋ ಅಂತಹವರನ್ನು ಗುರುತಿಸಿ ಹಿಂದುಳಿದ ವರ್ಗದ ಮೀಸಲಾತಿ ನೀಡಬೇಕು ಎಂದು ಹೇಳಲಾಗಿದೆ. 2002ರಲ್ಲಿ ಚಿನ್ನಪ್ಪರೆಡ್ಡಿ ಆಯೋಗ ಹಿಂದುಳಿದ ವರ್ಗಗಳ ಒಂದು ಪಟ್ಟಿ ಮಾಡಿ ಆ ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಾಗುತ್ತಿದೆ. 2016ರಲ್ಲಿ ಸಿದ್ದರಾಮಯ್ಯ ಜಾತಿಗಣತಿ ಮಾಡಿಸಿದ್ದಾರೆ. 1931ರ ಬಳಿಕ ಯಾವುದೇ ರಾಜ್ಯ ಜಾತಿವಾರು ಗಣತಿ ಮಾಡಿಲ್ಲ. ಯಾವ ರಾಜ್ಯದಲ್ಲಿ ಯಾವ ಜಾತಿ ಜನಾಂಗದವರು ಮೀಸಲಾತಿ ಪಡೆದುಕೊಂಡು ಮುಂದೆ ಹೋಗಿದ್ದಾರೆ. ಹಿಂದುಳಿದಿದ್ದಾರೆ. ಎಂಬುದನ್ನು ತಿಳಿಯಲು ₹165 ಕೋಟಿ ಖರ್ಚು ಮಾಡಿ ಜಾತಿವಾರು ಜನಗಣತಿ ನಡೆಸಲಾಗಿದೆ. ಈ ಜನಗಣತಿ ಪಟ್ಟಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಕಾಂತರಾಜ್‌ ಆಯೋಗ ಕೂಡ ವರದಿ ನೀಡಿದೆ. ಸರ್ಕಾರ ಕೂಡ ಈ ವರದಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದೆ. ಆದರೆ, ಇದುವರೆಗೆ ವರದಿ ಬಿಡುಗಡೆಯಾಗಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಮುಂದುವರೆದ ಜನಾಂಗದವರು ಕೂಡ ಹಿಂದುಳಿದ ವರ್ಗದ ಮೀಸಲಾತಿ ಪ್ರವರ್ಗ-2ಎನಲ್ಲಿ ಸೇರ್ಪಡೆ ಮಾಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ, ನಿಜವಾದ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಪ್ರವರ್ಗ-2ಎ ನಲ್ಲಿ ಈಡಿಗ, ಅಗಸ, ಮಡಿವಾಳ, ಸವಿತಾ, ಕುಂಬಾರ, ಕಮ್ಮಾರ, ವಿಶ್ವಕರ್ಮ, ನೇಕಾರ, ನಾಮಧಾರಿ, ತಿಗಳ, ದೇವಾಡಿಗ, ಕುರುಬ ಹೀಗೆ 102 ಜಾತಿಗಳಿವೆ. ಹಿಂದುಳಿದ ಜಾತಿಗಳಿಗೆ ಶೇ.15 ಮೀಸಲಾತಿ ಇದೆ. ಆದರೆ, ಹಿಂದುಳಿದ ಆಯೋಗದ ವರದಿ ಇಲ್ಲದೇ ಇದ್ದರೂ ರಾಜಕೀಯ ಪಿತೂರಿಯಿಂದ ಮುಂದುವರೆದ ಜಾತಿಯವರು ಪ್ರವರ್ಗ-2ಎನಲ್ಲಿ ಬರಲು ಹವಣಿಸುತ್ತಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು. ಈ ಕುರಿತು ಡಿ.18ರಂದು ಬೆಳಗಾವಿ ಸುವರ್ಣಸೌಧದ ಎದುರು ಬೃಹತ್‌ ಪ್ರತಿಭಟನಾ ಹೋರಾಟ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲಾ ಅಹಿಂದ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಎಂ. ಹಾಲಪ್ಪ, ಮುಖಂಡರಾದ ಎಲ್.ಸಿದ್ದನಗೌಡ, ನಿಂಬಗಲ್ ರಾಮಕೃಷ್ಣ, ಎಂ.ನಾಗರಾಜ, ಆರ್. ಕೊಟ್ರೇಶಪ್ಪ, ಕೆ.ರವಿಕುಮಾರ, ಬಂದಿ ಭರಮಪ್ಪ, ಮಜ್ಜಿಗೆ ನಾಗರಾಜ್, ಕೆ.ಬಸವರಾಜ, ಮರಡಿ ಮಂಜುನಾಥ, ಡಿ. ಚನ್ನಪ್ಪ, ಕೆ.ರಮೇಶ, ಗೋವಿಂದಪ್ಪ, ಪಲ್ಲೇದ ಸಿದ್ದೇಶ್, ಎಂ.ಡಿ. ರಫೀಕ್, ಹೊನ್ನೂರಪ್ಪ, ಎಚ್. ಪರಶುರಾಮ, ಜಿ.ಶಿವಕುಮಾರ, ಚಿತ್ತವಾಡ್ಗೆಪ್ಪ. ನಾಗರಾಜ್, ಕೆ.ಇಮ್ತಿಯಾಜ್, ಏಕಾಂಬ್ರೇಶ ನಾಯ್ಕ, ಶಫೀ ಖುರೇಷಿ ಮತ್ತಿತರರಿದ್ದರು.

ಹೊಸಪೇಟೆಯಲ್ಲಿ ಅಹಿಂದ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Share this article