ಕನ್ನಡಪ್ರಭ ವಾರ್ತೆ ಜಮಖಂಡಿ
ಬಡ, ಹಿಂದುಗಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯಲು ಬಾಗಲಕೋಟೆ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸಬೇಕಿದೆ ಎಂದು ಓಲೇಮಠದ ಆನಂದ ದೇವರು ಹೇಳಿದರು. ನಗರದ ಎ.ಜಿ. ದೇಸಾಯಿ ವೃತ್ತದ ಹತ್ತಿರ ಬಾಗಲಕೋಟೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ನಗರದ ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಬಾಗಲಕೋಟೆ ವಿಶ್ವವಿದ್ಯಾಲಯ ರದ್ದು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.ನಾನು ಯಾವ ಪಕ್ಷಕ್ಕೆ ಬೆಂಬಲ ಮತ್ತು ವಿರುದ್ಧವಾಗಿ ಮಾತನಾಡುವುದಿಲ್ಲ. ಈ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಡ ವಿದ್ಯಾರ್ಥಿಗಳು ದೂರದ ಜಿಲ್ಲೆಗೆ ಹೋಗಿ ಸ್ನಾತಕೋತ್ತರ ಪದವಿ ಪಡೆಯಬೇಕು ಎಂಬ ಅನಿವಾರ್ಯತೆ ಮತ್ತು ಆರ್ಥಿಕ ಹೊರೆ ಉಂಟಾಗುತ್ತಿದೆ. ಆ ಹಿನ್ನಲೆಯಲ್ಲಿ ಜಮಖಂಡಿಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಇಲ್ಲಿಯೇ ಉಳಿಯಬೇಕು. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂಬ ಹಿನ್ನಲೆಯಲ್ಲಿ ಸ್ವಾಭಿಮಾನಿಗಳಾಗಿ ಹೋರಾಟ ಮಾಡುತ್ತಿದ್ದಿರಿ. ಅದಕ್ಕೆ ನಮ್ಮ ಬೆಂಬಲ ಯವಾಗಲೂ ಇರುತ್ತದೆ. ಅದರಂತೆ ಸಂಘಟನೆಯ ಎಲ್ಲ ಪದಾಧಿಕಾರಿಗಳು ಸಮಾಜದ ಮುಖಂಡರು ಇದಕ್ಕೆ ಪಕ್ಷಾತೀತ ಜಾತ್ಯತೀತವಾಗಿ ಬೆಂಬಲ ನೀಡಿದರೆ ಈ ವಿಶ್ವವಿದ್ಯಾಲಯ ಉಳಿಸುವ ಕಾರ್ಯ ಯಶಸ್ವಿಯಾಗವುದು ಎಂದು ಹೇಳಿದರು.
ಪ್ರತಿಯೊಬ್ಬರಲ್ಲಿ ಸ್ವಾಭಿಮಾನ ಇರಬೇಕು. ಹೋರಾಟದ ಮೂಲಕ ವಿಶ್ವವಿದ್ಯಾಲಯ ಉಳಿಸುವ ಗುರಿಯಾಗಿರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ವಿವಿಧೆಡೆಯಲ್ಲಿ ಹಲವಾರು ಶೈಕ್ಷಣಿಕ ಕೊಡುಗೆಗಳನ್ನು ನೀಡಿದ್ದೀರಿ. ಕೆಲ ವಿದ್ಯಾರ್ಥಿಗಳು ಕೌಟಂಬಿಕ ಸಮಸ್ಯೆಗಳಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿಶ್ವವಿದ್ಯಾಲಯ ರದ್ದುಪಡಿಸುವ ನಿರ್ಧಾರ ಕೈಬಿಟ್ಟು ಉಳಿಸುವ ಕಾರ್ಯ ಮಾಡಬೇಕೆಂದು ಕೈ ಮುಗಿದು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.ಜಮಖಂಡಿ ಜನತೆ ಜಾಗೃತಿಯಾಗಿ ಮುಂದೊಂದು ದಿನ ಜಮಖಂಡಿಯೂ ಜಿಲ್ಲಾ ಕೇಂದ್ರವಾಗಿ ಹೊರಹೊಮ್ಮುತ್ತದೆ. ಆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಉಳಿಸುವ ಹೋರಾಟದಲ್ಲಿ ಎಲ್ಲರೂ ಸ್ವಾಭಿಮಾನಿಗಳಾಗಿ ಪಾಲ್ಗೊಳ್ಳಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ. ಅನುದಾನ ಕಡಿಮೆಯಾದರೆ ತಾವು ಸೂಚಿಸಿದಂತೆ ಎಲ್ಲ ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಮನೆಮನೆಗೆ ತೆರಳಿ ಬಿಕ್ಷೆ ಬೇಡಿ ಅನುದಾನಕ್ಕೆ ಪೂರಕವಾಗಿ ಹಣ ಸಂಗ್ರಹಿಸಿ ಸರ್ಕಾರಕ್ಕೆ ನೀಡುತ್ತೇವೆ ಎಂದು ಹೇಳಿದರು.
ವಿಜಯಕುಮಾರ ತಿಪ್ಪರಡ್ಡಿ, ಶಂಭು ಪಡಸಾಲಿ, ರಮೇಶ ಅಮಾತಿ, ಸಿದ್ದು ಸೊಗಲಿ, ಸಿದ್ದುಗೌಡ ನ್ಯಾಮಗೌಡ, ವಿಠ್ಠಲ ಮಾದರ, ವೆಂಕಟೇಶ ಬೆನಕಟ್ಟಿ, ಆನಂದ ಕಾಂಬಳೆ, ಬಸು ಹೊಸಕೊಟಿ, ಹಣಮಂತ, ಶಶಿಕುಮಾರ ಇತರರು ಇದ್ದರು.