ಶಿಗ್ಗಾಂವಿ: ಧಾರವಾಡ ಪಶ್ಚಿಮ ಪದವೀಧರ ಕ್ಷೇತ್ರದ ವ್ಯಾಪ್ತಿಯ ಪದವೀಧರರಿಗೆ ಸರ್ಕಾರ ಹಾಗೂ ಖಾಸಗಿ ಉದ್ಯೋಗಗಳಲ್ಲಿ ಸೂಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪದವೀಧರರ ಪರವಾಗಿ ಧ್ವನಿ ಎತ್ತುವುದಾಗಿ ಪಕ್ಷೇತರ ಅಭ್ಯರ್ಥಿ ಸುರೇಶ ಬಿಷ್ಠನಗೌಡ್ರ ಭರವಸೆ ನೀಡಿದರು.
ಧಾರವಾಡ, ಹಾವೇರಿ, ಗದಗ ಸೇರಿದಂತೆ ಉತ್ತರ ಕನ್ನಡ ಕ್ಷೇತ್ರದ ವಿವಿಧ ಭಾಗಗಳಲ್ಲಿರುವ ಪದವೀಧರರಿಗೆ ಉದ್ಯೋಗದ ಅವಕಾಶಗಳು, ಶಿಕ್ಷಣ ಮತ್ತು ನೇಮಕಾತಿ ಕುರಿತ ಮಾಹಿತಿಯನ್ನು ಒದಗಿಸುವ ವ್ಯವಸ್ಥೆ, ಗ್ರಾಮೀಣ ಭಾಗದ ಪದವೀಧರರಿಗೂ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಪದವೀಧರರ ಸಮಸ್ಯೆಗಳ ಪರಿಹಾರ, ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಹಾಗೂ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಕುರಿತು ಸರ್ಕಾರದ ಮೇಲೆ ಒತ್ತಡ ತರುವುದಾಗಿ ತಿಳಿಸಿದರು.
ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವುದು, ಅವರನ್ನು ಕಾಯಂಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವುದು, ಅನುದಾನ ರಹಿತ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಒತ್ತಾಯಿಸುತ್ತೇನೆ, ಸರ್ಕಾರಿ ನೇಮಕಾತಿಯಲ್ಲಿ ಪಾರದರ್ಶಕತೆ, ಸಮಯಕ್ಕೆ ಸರಿಯಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹಾಗೂ ಅರ್ಹ ಪದವೀಧರರಿಗೆ ಉದ್ಯೋಗಾವಕಾಶ ದೊರೆಯುವಂತೆ ಕ್ರಮ ಕೈಗೊಳ್ಳುವ ಕುರಿತು ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತುವುದಾಗಿ ಅವರು ತಿಳಿಸಿದರು.ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅವರ ಹಕ್ಕು ಹಾಗೂ ಭವಿಷ್ಯಕ್ಕಾಗಿ ಸದಾ ಧ್ವನಿ ಎತ್ತುವ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಪ್ರಬುದ್ಧ ಯುವ ಪದವೀಧರ ಮತದಾರರು, ಅವಕಾಶ ನೀಡಿದ್ದೇ ಆದರೆ ಅವರ ಆಶೋತ್ತರಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುವೆ, ಮುಖ್ಯವಾಗಿ ನಮ್ಮ ತೆರಿಗೆ ಸಲಹೆಗಾರರ ಸಂಘದಿಂದ ಪ್ರತಿ ಜಿಲ್ಲೆಯಲ್ಲಿ ಬೆಂಬಲ ನೀಡಿದ್ದು, ನೀವು ಕಣದಲ್ಲಿಯೇ ಇರಬೇಕು ನಾವು ನಿಮಗೆ ಬೆಂಬಲ ಕೊಡಿಸಿ, ನಾವು ಸಹಿತ ನಿಮ್ಮ ಜೊತೆ ನಿಲ್ಲುವುದಾಗಿ ತಿಳಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುರೇಶ ಬಿಷ್ಠನಗೌಡ್ರ ಹೇಳಿದರು.