ದಾಂಡೇಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಆದರ್ಶ, ಅವರ ವ್ಯಕ್ತಿತ್ವ ಸದಾ ಸ್ಮರಣೀಯವಾಗಿದೆ. ಅಹಿಂಸಾತ್ಮಕ ಹೋರಾಟದ ಮೂಲಕ ಇಡೀ ರಾಷ್ಟ್ರದ ಜನರನ್ನು ಸೇರಿಸಿ ಸ್ವಾತಂತ್ರ್ಯಕ್ಕಾಗಿ ಶಾಂತಿಯುತ ಹೋರಾಟ ಕೈಗೊಂಡಿದ್ದು, ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ್ ತಿಳಿಸಿದರು.ತಾಲೂಕಾಡಳಿತ, ನಗರಾಡಳಿತ, ವೆಸ್ಟ್‌ಕೊಸ್ಟ್ ಕಾಗದ ಕಾರ್ಖಾನೆ, ಪೊಲೀಸ್ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಬಂಗೂರನಗರದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧಿಜಿಯವರ ಸ್ವಚ್ಛ ಭಾರತ ಕನಸು ನನಸು ಮಾಡುವ ಮಹೋನ್ನತ ಜವಾಬ್ದಾರಿಯನ್ನು ಪ್ರಾಮಾಣಿವಾಗಿ ನಿರ್ವಹಿಸಬೇಕು ಎಂದರು.
ಅಂಕೋಲಾ: ಪಟ್ಟಣದ ಜಿ.ಸಿ. ಕಾಲೇಜಿನ ಎನ್‌ಸಿಸಿ ಮತ್ತು ಎನ್ಎಸ್ಎಸ್ ಘಟಕಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬುಧವಾರ ಸಮೀಪದ ನದಿಭಾಗ ಕಡಲ ತೀರದಲ್ಲಿನ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಕಡಲತೀರವನ್ನು ಸ್ವಚ್ಛಗೊಳಿಸುವ ಮೂಲಕ ಮಹಾತ್ಮ ಗಾಂಧೀಜಿಯರವರ ಜನ್ಮದಿನವನ್ನು ವಿನೂತನವಾಗಿ ಆಚರಿಸಿದರು.
ಪ್ರಾರಂಭದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ ಶಾಸ್ತ್ರೀ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಾಚಾರ್ಯ ಡಾ. ಎಸ್.ವಿ. ವಸ್ತ್ರದ ಮಹಾತ್ಮರು ಕಂಡ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ಕಾರವಾರ ಎನ್‌ಸಿಸಿ ಬೆಟಾಲಿಯನ್ ತರಬೇತುದಾರ ಹವಾಲ್ದಾರ ಎಚ್.ಬಿ. ಕಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು. ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ನಂಜುಂಡಯ್ಯ, ಎನ್‌ಸಿಸಿ ಅಧಿಕಾರಿ ಹರಿಪ್ರಸಾದ ದೇಸಾಯಿ ಉಪಸ್ಥಿತರಿದ್ದರು.ಬೊಬ್ರವಾಡ ಗ್ರಾಪಂ ಪಿಡಿಒ ನಾಗೇಂದ್ರ ಮಾದೇವ ನಾಯ್ಕ, ಕಾರ್ಯದರ್ಶಿ ಓಂಕಾರ ಹಳದನಕರ ವಿದ್ಯಾರ್ಥಿಗಳ ಶ್ರಮದಾನವನ್ನು ಶ್ಲಾಘಿಸಿದರು. ಉಪನ್ಯಾಸಕರಾದ ಪ್ರದೀಪ ಗೌಡ, ವೈಭವ ಶೆಟ್ಟಿ ಸಹಕರಿಸಿದರು.