ಡಿ.9ರ ವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ: ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳಕನ್ನಡಪ್ರಭ ವಾರ್ತೆ ಯಾದಗಿರಿ
ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ ಕರಡು ಮತದಾರ ಪಟ್ಟಿಯನ್ನು ಕಲಬುರಗಿ ಪ್ರಾದೇಶಿಕ ಆಯುಕ್ತರು ಪ್ರಚುರಪಡಿಸಿದ್ದು, ಕರಡು ಮತದಾರ ಪಟ್ಟಿಯನ್ನು ಯಾದಗಿರಿ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರ ಹಾಗೂ ಜಿಲ್ಲೆಯ ಎಲ್ಲ ತಹಸೀಲ್ದಾರ್ ಕಾರ್ಯಾಲಯಗಳಲ್ಲಿ ಹಾಗೂ ಮತಗಟ್ಟೆಗಳಲ್ಲಿ ಪ್ರಚುರಪಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 14295 ಅರ್ಜಿಗಳು ಸ್ವೀಕೃತಗೊಂಡಿದ್ದು, ಈ ಪೈಕಿ 9896 ಪುರುಷರು ಹಾಗೂ 4395 ಮಹಿಳೆಯರು ಮತ್ತು ಇತರೆ 4 ಅರ್ಜಿಗಳು ಸ್ವೀಕೃತವಾಗಿವೆ. 402 ಅರ್ಜಿಗಳು ತಿರಸ್ಕೃತಗೊಂಡಿದ್ದು ಈ ಪೈಕಿ 271 ಪುರುಷರ ಹಾಗೂ 132 ಮಹಿಳೆಯರ ಅರ್ಜಿಗಳು ತಿರಸ್ಕೃತಗೊಂಡಿವೆ. ಕರಡು ಮತದಾರರ ಪಟ್ಟಿ ಅನ್ವಯ ಸದ್ಯ 13,892 ಅರ್ಜಿಗಳು ಸರಿಯಾಗಿವೆ.ಈ ಕರಡು ಮತದಾರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನ.23ರಿಂದ ಡಿ.9ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ತಮ್ಮ ಆಕ್ಷೇಪಣೆಗಳೇನಾದರು ಇದ್ದಲ್ಲಿ ಸಾರ್ವಜನಿಕರು ಮತದಾರ ನೋಂದಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದಲ್ಲಿ ಒಟ್ಟು 5159 ಮತದಾರರಿದ್ದರು. ಈ ಬಾರಿ ಜಿಲ್ಲಾಡಳಿತದ ಸೂಕ್ತ ಕ್ರಮ, ಬೂತ್ ಮಟ್ಟದ ಅಧಿಕಾರಿಗಳಿಂದ, ನೋಡಲ್ ಅಧಿಕಾರಿಗಳ ನೇಮಕದಿಂದ ಹಾಗೂ ಸಮೂಹ ಮಾಧ್ಯಮ ಮೂಲಕದ ಜಾಗೃತಿಯಿಂದಾಗಿ ಮತದಾರರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇನ್ನು ಅರ್ಜಿ ಸಲ್ಲಿಸದೆ ಬಾಕಿ ಉಳಿದಿರುವ ಅರ್ಹ ಮತದಾರರು ಅರ್ಜಿ ಕೊಟ್ಟಿಲ್ಲದಿದ್ದಲ್ಲಿ ಅರ್ಜಿ ಸಲ್ಲಿಸಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಚುನಾವಣೆ ತಹಸೀಲ್ದಾರ್ ಸಂತೋಷರಾಣಿ, ರಾಜಕೀಯ ಪಕ್ಷಗಳ ಮುಖಂಡರಾದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಈಟೆ, ಬಿಜೆಪಿಯ ಕಾರ್ಯದರ್ಶಿ ಶಂಕರ ಸೋನಾರ್, ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಮ್ ದಾದೂ, ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಮರಗಪ್ಪ ಸಾಲಿಕೇರಿ ಇತರರಿದ್ದರು.