ಉತ್ತರ ಕನ್ನಡ ಆನೆಕಾಲು ರೋಗಮುಕ್ತ ಜಿಲ್ಲೆ!

KannadaprabhaNewsNetwork | Published : Sep 4, 2024 1:53 AM

ಸಾರಾಂಶ

ಇದರಿಂದ ಆ ಪ್ರದೇಶದಲ್ಲಿನ ಮೈಕ್ರೋಫೈಲೇರಿಯಾ ಹೊಂದಿರುವ ವ್ಯಕ್ತಿಗಳ ದೇಹದಲ್ಲಿನ ಹುಳುಗಳನ್ನು ನಾಶಪಡಿಸುವ ಮೂಲಕ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಲಾಗುತ್ತಿದೆ.

ಕಾರವಾರ: ಆನೆಕಾಲು ನಿಯಂತ್ರಣಕ್ಕೆ ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದ ಆನೆಕಾಲು ರೋಗದ ಹೊಸ ಪ್ರಕರಣಗಳು ಕಂಡುಬರದೆ ಉತ್ತರ ಕನ್ನಡ ಆನೆಕಾಲು ರೋಗ ಮುಕ್ತವಾಗಿದೆ. ಆನೆಕಾಲು ರೋಗದ ನಿರ್ಮೂಲನೆಯ ದೃಢೀಕರಣ ಪತ್ರಕ್ಕಾಗಿ ಅವಶ್ಯವಿರುವ ದಾಖಲೆಗಳನ್ನು ಈಗಾಗಲೇ ಆರೋಗ್ಯ ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದ್ದು, ದೃಢೀಕರಣ ಪತ್ರ ಸಿಗುವುದು ಮಾತ್ರ ಬಾಕಿ ಇದೆ.ಈ ಹಿಂದೆ ಜಿಲ್ಲೆಯ ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಲ್ಲಿ ಆನೆಕಾಲು ರೋಗ ಕಾಣಿಸಿಕೊಂಡಿತ್ತು. ಅದರಲ್ಲೂ ಕುಮಟಾ ತಾಲೂಕಿನ ಗೋಕರ್ಣ ಹಾಗೂ ಭಟ್ಕಳ ತಾಲೂಕಿನ ನಗರ ಪ್ರದೇಶಗಳು ಈ ಕಾಯಿಲೆಯ ಕೇಂದ್ರಬಿಂದುಗಳಾಗಿ ಗುರುತಿಸಿಕೊಂಡಿದ್ದವು.ಜಿಲ್ಲೆಯಲ್ಲಿ 2004ನೇ ಇಸವಿಯಲ್ಲಿ ಸಮೀಕ್ಷೆ ನಡೆಸಿದಾಗ ಒಟ್ಟು 348 ಆನೆಕಾಲು ರೋಗಿಗಳು ಹಾಗೂ ಆನೆಕಾಲು ರೋಗದಲ್ಲಿ ಕಾಣಿಸಿಕೊಳ್ಳುವ ಹೈಡ್ರೋಸಿಲ್ ಪ್ರಕರಣಗಳು ಇದ್ದು, ಪ್ರಸ್ತುತ 129 ಆನೆಕಾಲು ರೋಗಿಗಳು ಇದ್ದಾರೆ ಹಾಗೂ 418 ಹೈಡ್ರೋಸಿಲ್ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಲಾಗಿದೆ. ಗೋಕರ್ಣ ಹಾಗೂ ಭಟ್ಕಳ ನಗರ ಪ್ರದೇಶದ ಚರಂಡಿಗಳಲ್ಲಿ ಕೊಳಚೆ ನೀರು ನಿಂತು ಕ್ಯೂಲೆಕ್ಸ್ ಜಾತಿಯ ಸೊಳ್ಳೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತಿದ್ದ ಕಾರಣ ಈ ಪ್ರದೇಶಗಳು ಕೇಂದ್ರಬಿಂದುಗಳಾಗಿದ್ದವು. ಸೊಳ್ಳೆಗಳಿಂದ ಹೊರಡುವ ಈ ರೋಗ ನಿಯಂತ್ರಣಕ್ಕೆ ಲಾರ್ವಾ ನಾಶ ಸೇರಿದಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಯಿತು.

ದೇಶದಲ್ಲಿ ಆನೆಕಾಲು ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಇಟ್ಟುಕೊಂಡು 2004ನೇ ಇಸವಿಯಲ್ಲಿ ರಾಷ್ಟ್ರೀಯ ಮಾರ್ಗಸೂಚಿ ಹೊರಡಿಸಿದ್ದು, ಈ ಮಾರ್ಗಸೂಚಿಯ ಪ್ರಕಾರ ಆನೆಕಾಲು ರೋಗ ಎಂಡಮಿಕ್ ಇರುವ ಪ್ರದೇಶಗಳಲ್ಲಿರುವ ಎಲ್ಲ ವ್ಯಕ್ತಿಗಳಿಗೆ ಹಾಗೂ ಆಲ್ಬೆಂಡಜೋಲ್ ಮಾತ್ರೆಗಳನ್ನು ನೀಡುವ ಸಮೂಹ ಔಷಧ ಚಿಕಿತ್ಸೆಯನ್ನು ವರ್ಷಕ್ಕೊಮ್ಮೆ ನೀಡಲು ಪ್ರಾರಂಭಿಸಲಾಯಿತು.

ಇದರಿಂದ ಆ ಪ್ರದೇಶದಲ್ಲಿನ ಮೈಕ್ರೋಫೈಲೇರಿಯಾ ಹೊಂದಿರುವ ವ್ಯಕ್ತಿಗಳ ದೇಹದಲ್ಲಿನ ಹುಳುಗಳನ್ನು ನಾಶ ಪಡಿಸುವ ಮೂಲಕ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಲಾಗುತ್ತಿದೆ. ಇದನ್ನು ಜಿಲ್ಲೆಯಲ್ಲಿ 2004ರಿಂದ 2013ರ ವರೆಗೆ 9 ಸುತ್ತಿನಲ್ಲಿ ನಡೆಸಲಾಗಿತ್ತು ಹಾಗೂ ಪ್ರತಿ ಬಾರಿಯು ಶೇ. 98ಕ್ಕಿಂತ ಹೆಚ್ಚಿನ ಅರ್ಹ ಫಲಾನುಭವಿಗಳಿಗೆ ಮಾತ್ರೆಗಳನ್ನು ನುಂಗಿಸಲಾಯಿತು. ಪ್ರತಿ ಸುತ್ತಿನ ನಂತರ ಆಯ್ದ ಪ್ರದೇಶಗಳಲ್ಲಿ ಮೈಕ್ರೋಫೈಲೇರಿಯಾ ಪತ್ತೆಗಾಗಿ ರಾತ್ರಿ ರಕ್ತಲೇಪನ ಶಿಬಿರಗಳನ್ನು ಹಮ್ಮಿಕೊಂಡು, ರಕ್ತಲೇಪನ ಸಂಗ್ರಹಿಸಿ ಪರೀಕ್ಷಿಸಲಾಯಿತು. 2004ರಲ್ಲಿ ಶೇ. 2ರಷ್ಟಿದ್ದ ಮೈಕ್ರೋಫೈಲೇರಿಯಾದ ಸರಾಸರಿ 2013ರಲ್ಲಿ ಶೇ. 0.04ಕ್ಕೆ ಇಳಿಕೆ ಆಯಿತು.

ಈ ಕಾರ್ಯಕ್ರಮ ಪ್ರಾರಂಭಿಸಿದ ನಂತರ ಹುಟ್ಟಿದ ಮಕ್ಕಳಲ್ಲಿ(5- 7 ವರ್ಷದ) ಆನೆಕಾಲು ರೋಗ ಇರುವಿಕೆಯನ್ನು ಪತ್ತೆ ಹಚ್ಚಲು ಜಿಲ್ಲೆಯ ಆಯ್ದ ಶಾಲೆಗಳ ಒಂದನೇ ಹಾಗೂ 2ನೇ ತರಗತಿಯ ವಿದ್ಯಾರ್ಥಿಗಳಲ್ಲಿ ರೋಗ ಪ್ರಸಾರ ನಿರ್ಧಾರಣಾ ಸಮೀಕ್ಷೆಯನ್ನು 2015, 2017 ಹಾಗೂ 2019ರಲ್ಲಿ ಕೈಗೊಳ್ಳಲಾಯಿತು. ಈ ಸಮೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದಿದ್ದು, ಜಿಲ್ಲೆಯಲ್ಲಿ ಆನೆಕಾಲು ರೋಗ ನಿರ್ಮೂಲನೆ ಆಗಿರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ 2013ರ ನಂತರ ಸಮೂಹ ಔಷಧ ಚಿಕಿತ್ಸೆಯನ್ನು ನಿಲ್ಲಿಸಲಾಗಿದ್ದು, ಆನೆಕಾಲು ರೋಗ ನಿರ್ಮೂಲನೆಯ ದೃಢೀಕರಣ ಪತ್ರಕ್ಕಾಗಿ ಅವಶ್ಯವಿರುವ ದಾಖಲೆಗಳನ್ನು ಈಗಾಗಲೇ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದ್ದು, ದೃಢೀಕರಣ ಪತ್ರ ಸಿಗುವುದು ಮಾತ್ರ ಬಾಕಿ ಇದೆ. ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಆನೆಕಾಲು ರೋಗಮುಕ್ತವಾಗಿವೆ ಎಂಬುದು ಗಮನಾರ್ಹ.

Share this article