ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಶಾಂತಿಯುತ ಮತದಾನ

KannadaprabhaNewsNetwork |  
Published : Oct 24, 2026, 01:30 AM IST
23ಕೆಪಿಆರ್ಸಿಆರ್‌ 01:  | Kannada Prabha

ಸಾರಾಂಶ

ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆಯಿತು.

ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿ ದೇವದುರ್ಗ, ಸಿರವಾರ, ಮಾನ್ವಿ, ಮಸ್ಕಿ, ಲಿಂಗಸುಗೂರು ಹಾಗೂ ಸಿಂಧನೂರು ತಾಲೂಕುಗಳಲ್ಲಿ ಒಟ್ಟು 16 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯು ಬಹುತೇಕ ಸುಸೂತ್ರವಾಗಿ ಜರುಗಿದವು. ಒಟ್ಟು 3,178 ಪುರುಷರು, 2,224 ಮಹಿಳೆಯರು ಸೇರಿ ಒಟ್ಟು 5,402 ಮತದಾರರ ಪೈಕಿ 2,787 ಪುರುಷರು, 1,860 ಮಹಿಳೆಯರು ಸೇರಿ ಒಟ್ಟು 4,647 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಶೇ.86.02ರಷ್ಟು ಮತದಾನವಾಗಿದೆ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭ ಕಂಡ ಮತದಾನ 10 ಗಂಟೆ ವೇಳೆಗೆ ಚುರುಕುಗೊಂಡಿತು. ಮತದಾರರು ಗುರುತಿನ ಚೀಟಿಯನ್ನು ಹಿಡಿದು ಮತಗಟ್ಟೆಗಳಿಗೆ ಧಾವಿಸಿ ಸಾಲಲ್ಲಿ ನಿಂತು ಪ್ರಾಶಸ್ತ್ಯ ಮತವನ್ನು ಚಲಾಯಿಸಿದರು.

ಡಿಸಿ, ಎಸ್ಪಿ, ಸಿಇಒ ಭೇಟಿ: ಬಿಗಿ ಭದ್ರತೆಯಲ್ಲಿ ನಡೆಯುತ್ತಿದ್ದ ಮತದಾನದ ಸಮಯದಲ್ಲಿ ಡಿಸಿ ಹಾಗೂ ಸಹಾಯಕ ಚುನಾವಣಾಧಿಕಾರಿ ಪೂವಿತಾ.ಎಸ್, ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಸಿಇಒ ಈಶ್ವರ್‌ ಕಾಂದೂ, ಎಸ್ಪಿ ಅರುಣಾಂಗ್ಷು ಗಿರಿ ಅವರು ನಗರ ಸೇರಿ ಇತರೆ ತಾಲೂಕುಗಳ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಮತದಾರರ ಗುರುತಿನ ಚೀಟಿಗಳ ಮೇಲೆ ಕಣ್ಣಾಡಿಸಿದರು.

ಈ ವೇಳೆ ಡಿವೈಎಸ್ಪಿ ಶಾಂತಮೂರ್ತಿ, ರಾಯಚೂರು ಸಿಪಿಐ ಉಮೇಶ ಕಾಂಬಳೆ ಸೇರಿದಂತೆ ಚುನಾವಣಾ ಅಧಿಕಾರಿ, ಸಿಬ್ಬಂದಿ ಇದ್ದರು.

-----

ಬಿಡಾರ ಹೂಡಿದ ರಾಜಕೀಯ ಪಕ್ಷಗಳ ಮುಖಂಡರು

ಮತಗಟ್ಟೆಗಳ ಸಮೀಪದಲ್ಲಿ ಎನ್‌ಡಿಎ (ಬಿಜೆಪಿ-ಜೆಡಿಎಸ್‌ ಮೈತ್ರಿ) ಹಾಗೂ ಕಾಂಗ್ರೆಸ್‌ ಪಕ್ಷದ ಜನಪ್ರತಿನಿಧಿಗಳು, ಮುಖಂಡರು ಬಿಡಾರ ಹೂಡಿದ್ದರು. ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಭೋಸರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಎಂಎಲ್ಸಿ ಎ.ವಸಂತ ಕುಮಾರ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಬಿಜೆಪಿ ನಗರ ಶಾಸಕ ಡಾ.ಶಿವರಾಜ ಪಾಟೀಲ್‌ ಸೇರಿ ಇತರೆ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಮತದಾನ ಪ್ರಕ್ರಿಯೆಯನ್ನು ಗಮನಿಸಿದರು.

ಮತಗಳನ್ನು ಮಾರಿಕೊಂಡ ಶಿಕ್ಷಕರು; ಆರೋಪ: ಸಮಾಜದಲ್ಲಿ ಮಾದರಿ ಬದುಕು, ಬರಹ ರೂಢಿಸಿಕೊಂಡು ಪ್ರಜಾ ಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕಿದ್ದ ಮತದ ಹಕ್ಕಿನ ಮಹತ್ವ ಮರೆತ ಅನೇಕ ಶಿಕ್ಷಕರು ತಮ್ಮ ಪವಿತ್ರ ಹಕ್ಕನ್ನು ಹಣಕ್ಕಾಗಿ ಮಾರಿಕೊಂಡು ಮತದಾನ ಮಾಡಿದರು. 4000, 2000 ರು.ಗಳಿಗೆ ಮತಗಳನ್ನು ಅನೇಕ ಶಿಕ್ಷಕರು ಮಾರಿಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯವು ಆರೋಪಿಸಿದೆ. ಸಮಾಜ ಹಾದಿ ತಪ್ಪಿದಾಗ ತಿದ್ದಿ ಬುದ್ದಿ ಹೇಳುವ ಶಿಕ್ಷಕರು ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿಯ ಮತದಾನ ಕೇಂದ್ರದ ಬಳಿಯಲ್ಲಿ ಮತದಾನಕ್ಕೆ ಹಣ ಪಡೆದ ಕುರಿತು, ಕೆಲವು ಶಿಕ್ಷಕರು ರಾಜಕೀಯ ಪಕ್ಷಗಳಿಂದ ನೇರವಾಗಿ ಹಣ ಪಡೆದು ಹಂಚಿಕೆ ಮಾಡಿದ್ದು ನಾಚಿಗೇಡಿನ ಸಂಗತಿ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಮತದಾನದಿಂದ ವಂಚಿತರಾದ ಶಿಕ್ಷಕಿ; ಆಕ್ಷೇಪ: ಈಚನಾಳ ಶಾಲೆಯ ಶಿಕ್ಷಕಿಯೋರ್ವಳ ಹೆಸರಿನಲ್ಲಿ ಬೇರೆಯವರು ಮತದಾನ ಮಾಡಿದ್ದು, ಮತಗಟ್ಟೆ ಸಂಖ್ಯೆ 133ರಲ್ಲಿ ನಡೆದಿದೆ. ಮತದ ಹಕ್ಕಿನಿಂದ ವಂಚಿತಳಾದ ಶಿಕ್ಷಕಿ ವಿಜಯಲಕ್ಷ್ಮೀ ಚೋಳಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಶಿಕ್ಷಕಿಯ ಮತವನ್ನು ಬೇರೆಯವರು ಚಲಾಯಿಸಿದ್ದರಿಂದ ಓಟ್ ಚೋರಿಯಾಗಿದೆ ಎಂದು ಅನೇಕರು ಮತನಾಡಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಅಂತಾರಾಷ್ಟ್ರೀಯ ಬೌದ್ದ ಮಹಾಸಮ್ಮೇಳನ
ಬೆಳೆ, ಕೃಷಿ ಸಾಲ ಬಲವಂತ ವಸೂಲಿ ಸಲ್ಲ: ಜಿಲ್ಲಾಧಿಕಾರಿ ಶ್ರೀರೂಪ