ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಕೋಟೇಶ್ವರ ಸೇವಾ ಟ್ರಸ್ಟ್ ಕಚೇರಿ - ಶೌಚಾಲಯ ಉದ್ಘಾಟಿಸಿದರು.
ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಸಚಿವ ಭೇಟಿಕನ್ನಡಪ್ರಭ ವಾರ್ತೆ ಕುಂದಾಪುರ
ಗೆದ್ದ ಶಾಸಕರೆಲ್ಲರೂ ಮಂತ್ರಿಗಳಾಗುವುದಕ್ಕೆ ಸಾಧ್ಯವಿಲ್ಲ, ಗೆದ್ದವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಸ್ವಲ್ಪ ಸಮಾಧಾನದಿಂದ ಇರಬೇಕು. ಇಲ್ಲದಿದ್ದರೆ ಮುಂದಕ್ಕೆ ಅಪಾಯ ಇದೆ ಎಂದು ರಾಜ್ಯ ಧಾರ್ಮಿಕ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗ ರೆಡ್ಡಿ, ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಅವರು ಮಂಗಳವಾರ ಇಲ್ಲಿನ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಕೋಟೇಶ್ವರ ಸೇವಾ ಟ್ರಸ್ಟ್ ಕಚೇರಿ - ಶೌಚಾಲಯ ಉದ್ಘಾಟಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ರಾಜ್ಯದ ಜನ ಆಶೀರ್ವಾದ ಮಾಡಿದ್ದಾರೆ. ಗೆದ್ದಿರುವವರು ಅದನ್ನು ತಿಳಿದುಕೊಳ್ಳಬೇಕು, ಎಲ್ಲರೂ ಮಂತ್ರಿ, ನಿಗಮ ಅಧ್ಯಕ್ಷರು ಆಗಲು ಸಾಧ್ಯವಿಲ್ಲ. 135 ಜನರಲ್ಲಿ ಒಬ್ಬರಿಬ್ಬರೂ ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಇದು ಸರಿಯಲ್ಲ ಎಂದರು.ಎಲ್ಲ ಶಾಸಕರಿಗೂ ಅನುದಾನ ಸಿಗುತ್ತದೆ, ಆದರೆ ಸ್ವಲ್ಪ ಕಡಿಮೆ ಆಗಿರುತ್ತದೆ. 4.50 ಲಕ್ಷ ಕೋಟಿ ರು. ಜಿಎಸ್‌ಟಿ ಕೇಂದ್ರಕ್ಕೆ ಹೋಗುತ್ತಿದೆ. ಅದರಲ್ಲಿ ಬರೀ 50,000 ಕೋಟಿ ಮಾತ್ರ ಹಿಂದಕ್ಕೆ ಕೊಡುತ್ತಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿಯೇ ಪ್ರತಿಭಟನೆ ಮಾಡಿದ್ದೇವೆ. ಕೇಂದ್ರ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲ ಎಂದು ಅವರು, ನಾವು ಕೂತಿರೋದನ್ನು ಅವರು ನೋಡೊದೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಿಎಂ, ಡಿಸಿಎಂ ಪ್ರತೀ ವಾರ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಶಂಕುಸ್ಥಾಪನೆಗಳನ್ನು ಮಾಡ್ತಿದ್ದಾರೆ, ದುಡ್ಡಿಲ್ಲದೆ ಶಂಕುಸ್ಥಾಪನೆ ನಡೆಯಲು ಸಾಧ್ಯವಾ ಎಂದು ಸಚಿವರು ಪ್ರಶ್ನಿಸಿದರು.ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, ಅತಿ ಹೆಚ್ಚು ಹಣ ಪರಮೇಶ್ವರ್ ಅವರ ತುಮಕೂರು ಜಿಲ್ಲೆಗೆ ಹೋಗಿದೆ ಎಂದರು.ಎರಡೂವರೆ ವರ್ಷದ ಅಧಿಕಾರ ಹಂಚಿಕೆ, ಗಡುವಿನ ಬಗ್ಗೆ ನಾನು ಮಾತನಾಡುವುದಿಲ್ಲ, ಗಡುವಿನ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದವರು ಹೇಳಿದರು.ವಸತಿ ಇಲಾಖೆ ಭ್ರಷ್ಟಾಚಾರ ಆರೋಪದ ತನಿಖೆ ಸಿಬಿಐಗೆ ಕೊಡಬೇಕು ಎಂದು ವಸತಿ ಸಚಿವ ಜಮೀರ್ ಒತ್ತಾಯಿಸಿದ ವಿಚಾರ ನನಗೆ ಅದರ ಬಗ್ಗೆ ಗೊತ್ತಿಲ್ಲಾಪ್ಪ ಎಂದಷ್ಟೇ ಸಚಿವ ಹೇಳಿದರು.
..........................
ಮಂಗಳೂರಿಗೆ 300, ಉಡುಪಿಗೆ 200 ಚಾಲಕರು
ನಮ್ಮ ಸರ್ಕಾರ ಅಧಿಕಾರಕ್ಕೆ ಬರುವಾಗ ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರ ಕೊರತೆ ಇತ್ತು. ಪುತ್ತೂರು, ಮಂಗಳೂರು, ಚಾಮರಾಜನಗರ, ರಾಮನಗರ ವಿಭಾಗಗಳಲ್ಲಿ ಚಾಲಕರ ಕೊರತೆ ಹೆಚ್ಚು ಇತ್ತು. ಈಗ 2,000 ಚಾಲಕರ ನೇಮಕ ಆದೇಶ ಪತ್ರ ಕೊಟ್ಟಿದ್ದೇವೆ, ಮಂಗಳೂರು ವಿಭಾಗಕ್ಕೆ 300, ಉಡುಪಿಗೆ 200 ಇನ್ನೂರಕ್ಕೂ ಹೆಚ್ಚು ಚಾಲಕರನ್ನು ಹಾಕಿದ್ದೇವೆ, ಇನ್ನು ಮುಂದೆ ಚಾಲಕರ ಕೊರತೆ ಇರುವುದಿಲ್ಲ. ಚಾಲಕರಿಲ್ಲದೇ ಬಸ್‌ಗಳು ಸಂಚರಿಸದೇ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಲ್ಲ ಎಂದು ಸಾರಿಗೆ ಸಚಿವರು ಭರವಸೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.